
ಬೆಂಗಳೂರು: ಮುಂದಿನ 2027ರ ಮಧ್ಯಭಾಗದಲ್ಲಿ ಬ್ಲೂ ಲೈನ್ ಮೆಟ್ರೋ ಮಾರ್ಗವನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಮಂಗಳವಾರ ದೊಡ್ಡನೆಕ್ಕುಂದಿ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ ಬ್ಲೂ ಲೈನ್‌ನ ಪರೀಕ್ಷಾರ್ಥ ಸಂಚಾರದ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಜನವರಿ ವೇಳೆಗೆ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಕೆ ಪೂರ್ಣಗೊಳಿಸಿ, ಫೆಬ್ರವರಿ ನಂತರ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆಗೆ ಮುಂದಾಗುವ ಉದ್ದೇಶವಿದೆ. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲು ಸುಮಾರು ಏಳೆಂಟು ತಿಂಗಳ ಕಾಲಾವಕಾಶ ಅಗತ್ಯವಿದೆ. 2027ರ ಮಧ್ಯಭಾಗದಲ್ಲಿ ಮೆಟ್ರೋ ಮಾರ್ಗ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂ, ಕೆ.ಆರ್.ಪುರಂನಿಂದ ಹೆಬ್ಬಾಳ ಹಾಗೂ ಹೆಬ್ಬಾಳದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಒಟ್ಟು 58.2 ಕಿ.ಮೀ. ಉದ್ದದ ಬ್ಲೂ ಲೈನ್ ಮೆಟ್ರೋ ಮಾರ್ಗ ನಿರ್ಮಾಣವಾಗುತ್ತಿದೆ. ಸುಮಾರು 20 ಸಾವಿರ ಕೋಟಿ ರು. ವೆಚ್ಚದ ಈ ಯೋಜನೆಯನ್ನು ಮುಂದಿನ ಒಂದೂವರೆ ವರ್ಷದೊಳಗೆ ಸಂಪೂರ್ಣ ಕಾರ್ಯರೂಪಕ್ಕೆ ತರುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಮಂಗಳವಾರ ಕೆ.ಆರ್.ಪುರಂನಿಂದ ನಾಲ್ಕು ಮೆಟ್ರೋ ನಿಲ್ದಾಣಗಳವರೆಗೆ ಪರೀಕ್ಷಾರ್ಥ ಸಂಚಾರ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರ ನಿಲ್ದಾಣಗಳಿಗೂ ಟ್ರಯಲ್ ರನ್ ವಿಸ್ತರಿಸಲಾಗುವುದು. ಕೆ.ಆರ್.ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಸುಮಾರು 19 ಕಿ.ಮೀ. ಉದ್ದದ ಹಂತ 2ಎ ಮೆಟ್ರೋ ಮಾರ್ಗದಲ್ಲಿ ಒಟ್ಟು 13 ನಿಲ್ದಾಣಗಳಿವೆ. ಅಕ್ಟೋಬರ್ ಅಂತ್ಯದ ವೇಳೆಗೆ ಪರೀಕ್ಷಾರ್ಥ ಸಂಚಾರ ಆರಂಭಿಸುವ ಗುರಿ ಹೊಂದಲಾಗಿತ್ತು. ಅದರಂತೆ ಇದೀಗ ಕೆ.ಆರ್.ಪುರಂನಿಂದ ನಾಲ್ಕು ನಿಲ್ದಾಣಗಳವರೆಗೆ ಟ್ರಯಲ್ ರನ್ ಆರಂಭಿಸಲಾಗಿದೆ ಎಂದರು.
ಈ ತಿಂಗಳು ಪೂರ್ತಿ ಪರೀಕ್ಷಾರ್ಥ ಸಂಚಾರ ಮುಂದುವರಿಯಲಿದ್ದು, ಮುಂದಿನ ತಿಂಗಳು ಇನ್ನೂ ನಾಲ್ಕು ನಿಲ್ದಾಣಗಳವರೆಗೆ ಟ್ರಯಲ್ ರನ್ ವಿಸ್ತರಿಸಲಾಗುವುದು. ಪ್ರಸ್ತುತ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯ ಅಳವಡಿಕೆ ಬಾಕಿಯಿದ್ದು, ಮುಂದಿನ ಎರಡು-ಮೂರು ತಿಂಗಳ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ನಂತರ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ, ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್, ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್, ಜಂಟಿ ಆಯುಕ್ತ ಡಾ. ದಾಕ್ಷಾಯಿಣಿ ಕೆ. ಉಪಸ್ಥಿತರಿದ್ದರು.
ಮೆಟ್ರೋ ಯೋಜನೆಗೆ ಸಂಬಂಧಿಸಿದ ಸಾಲ ಮರುಪಾವತಿಯ ಹೊರೆ ರಾಜ್ಯ ಸರ್ಕಾರದ ಮೇಲಿದೆ. ಮೆಟ್ರೋ ಸಂಸ್ಥೆಯು ತನ್ನ ಆದಾಯದಿಂದಲೇ ನಿರ್ವಹಣಾ ವೆಚ್ಚಗಳನ್ನು ಭರಿಸುವುದು ಕಷ್ಟಕರವಾಗಿದ್ದು, ಕಳೆದ ಹಲವು ವರ್ಷಗಳಿಂದ ಸಂಸ್ಥೆ ಅನುಭವಿಸಿರುವ ನಷ್ಟವನ್ನು ರಾಜ್ಯ ಸರ್ಕಾರವೇ ಅನುದಾನದ ಮೂಲಕ ಭರಿಸುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಬೆಂಗಳೂರು ನಗರದ ಮೆಟ್ರೋ ವಿಸ್ತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ರೆಡ್ ಲೈನ್ ಪ್ರಸ್ತಾವನೆ ಕುರಿತು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಹಾಗೂ ತಾವು ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿ ಸುಮಾರು 22 ತಿಂಗಳು ಕಳೆದಿದ್ದರೂ, ಈವರೆಗೆ ಅಂತಿಮ ಅನುಮೋದನೆ ದೊರೆತಿರಲಿಲ್ಲ ಎಂದರು. ಇದರ ಜೊತೆಗೆ ಸರ್ಜಾಪುರದಿಂದ ಇಬ್ಬಲೂರು ಜಂಕ್ಷನ್ ಮೂಲಕ ಸೇಂಟ್ ಜಾನ್ಸ್‌ವರೆಗೆ ಡಬಲ್ ಡೆಕ್ಕರ್ ವ್ಯವಸ್ಥೆ ನಿರ್ಮಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದೆ ಮಂಡಿಸಲಾಗಿದೆ ಎಂದರು.
Here is your first look at the Blue Line of Namma Metro - the next major addition to our comprehensive set of solutions to mobility challenges in BLR.
We have reached a milestone - trial runs have started on this section. From KR Pura the train is now running up to Doddenakundi. Automated signalling will be operationalised in a couple of months. Then we are ready for safety certification. We are actively pushing at every stage for early dedication to public use.
— Krishna Byre Gowda (@krishnabgowda) November 24, 2026