ಪ್ರಜ್ವಲ್ ರೇವಣ್ಣ ಬೆಳಗಾವಿ ಜೈಲಿಗೆ ಶಿಫ್ಟ್ ಇಲ್ಲ! ಆ ಒಂದು ಕಾರಣಕ್ಕೆ ಸದ್ಯಕ್ಕೆ ಬಚಾವ್, ಕೋರ್ಟ್ ಮೊರೆ ಹೋದ ಲಾಯರ್

Published : Oct 10, 2026, 10:03 AM IST
Prajwal Revanna

ಸಾರಾಂಶ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪರಪ್ಪನ ಅಗ್ರಹಾರದಿಂದ ಬೆಳಗಾವಿ ಜೈಲಿಗೆ ವರ್ಗಾಯಿಸುವ ಆದೇಶವನ್ನು ಕಾರಾಗೃಹ ಇಲಾಖೆ ತಾತ್ಕಾಲಿಕವಾಗಿ ತಡೆಹಿಡಿದಿದೆ. ಉತ್ತರ ವಲಯದ ಡಿಐಜಿ ಸೋಮಶೇಖರ್ ಬಂಧನದಿಂದಾಗಿ ಭದ್ರತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮತ್ತೊಂದೆಡೆ, ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಪ್ರಜ್ವಲ್ ಪರ ವಕೀಲರು ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.

ಬೆಂಗಳೂರು: ಅಕ್ರಮ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಪ್ರಕರಣದ ಸಜಾ ಕೈದಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವರ್ಗಾವಣೆಗೆ ಶುಕ್ರವಾರ ರಾಜ್ಯ ಬಂದೀಖಾನೆ ಮತ್ತು ಸುಧಾರಣಾ ಸೇವಾ ಇಲಾಖೆ ತಡೆ ಹಿಡಿದಿದೆ. ಇನ್ನೊಂದೆಡೆ ಇತರೆ ಏಳು ಮಂದಿ ಕೈದಿಗಳ ಸ್ಥಳಾಂತರಕ್ಕೆ ಇಲಾಖೆ ಸಮ್ಮತಿ ಸೂಚಿಸಿದೆ.

ಜೈಲಿನಲ್ಲಿ ಅಕ್ರಮವಾಗಿ ಮೊಬೈಲ್ ಬಳಕೆ ಪ್ರಕರಣದ ಮಾಜಿ ಸಂಸದ ಪ್ರಜ್ವಲ್ ಸೇರಿ ಏಳು ಆರೋಪಿಗಳು ಹಾಗೂ ನಕಲಿ ಜಾಮೀನು ಪ್ರಕರಣದ ಕೈದಿ ಶಂಕರ್ ಹಾಗೂ ಕಾರಾಗೃಹ ಸಿಬ್ಬಂದಿ ಶ್ರೀಕಾಂತ್ ಸೇರಿ 9 ಕೈದಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸುವಂತೆ ಕಾರಾಗೃಹ ಇಲಾಖೆಗೆ ಬೆಂಗಳೂರು ನಗರ ಪೊಲೀಸರು ಶಿಫಾರಸು ಮಾಡಿದ್ದರು. ಅಂತೆಯೇ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಪ್ರಜ್ವಲ್ ಅವರನ್ನು ವರ್ಗಾವಣೆಗೆ ಇಲಾಖೆ ತೀರ್ಮಾನಿಸಿತ್ತು. ಆದರೆ ನಿಗಾವಣೆ ಹಾಗೂ ಭದ್ರತೆ ದೃಷ್ಟಿಯಿಂದ ಮಾಜಿ ಸಂಸದರ ಸ್ಥಳಾಂತರ ಆದೇಶವನ್ನು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಪುನರ್ ಪರಿಶೀಲನೆ ನಡೆಸಿದ್ದು, ಹೀಗಾಗಿ ವರ್ಗಾವಣೆಗೆ ನಿರೀಕ್ಷೆಯಲ್ಲಿದ್ದ ಪ್ರಜ್ವಲ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಬಳ್ಳಾರಿ ಜೈಲಿಗೆ ಶಂಕರ್:

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿಗೆ ಸುಪ್ರೀಂ ಕೋರ್ಟ್ ಹೆಸರಿನಲ್ಲಿ ನಕಲಿ ಜಾಮೀನು ಆದೇಶ ಸೃಷ್ಟಿಸಿದ ಪ್ರಕರಣದ ಆರೋಪಿಗಳಾದ ಕೈದಿ ಶಂಕರ್‌ ಅರ್ಮುಗಂ ಹಾಗೂ ಕಾರಾಗೃಹದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಸಿ) ಶ್ರೀಕಾಂತ್‌ನನ್ನು ಸ್ಥಳಾಂತರಿಸಲು ಕಾರಾಗೃಹ ಇಲಾಖೆ ತೀರ್ಮಾನಿಸಿದೆ. ಕೈದಿ ಶಂಕರ್ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡು ಆತನಿಗೆ ಸುಪ್ರೀಂ ಕೋರ್ಟ್ ಹೆಸರಿನಲ್ಲಿ ನಕಲಿ ಜಾಮೀನು ಆದೇಶ ಸೃಷ್ಟಿಸಿ ಅಂದಿನ ಕಾರಾಗೃಹದ ಮುಖ್ಯಸ್ಥ ಡಿಐಜಿ ಸೋಮಶೇಖರ್ ಹಾಗೂ ಶ್ರೀಕಾಂತ್ ಬಿಡುಗಡೆಗೊಳಿಸಿದ್ದರು. ಈ ಪ್ರಕರಣದಲ್ಲಿ ಡಿಐಜಿ ಸಹ ಬಂಧನವಾಗಿದೆ.

ಡಿಐಜಿ ಬಂಧನದಿಂದಾಗಿ ಪ್ರಜ್ವಲ್‌ ಬಚಾವ್:

ಎರಡು ತಿಂಗಳ ಹಿಂದೆ ಕಾರಾಗೃಹದ ಮೇಲೆ ಸಿಸಿಬಿ ದಾಳಿ ನಡೆಸಿದಾಗ ಕೈದಿ ಪ್ರಜ್ವಲ್ ಸೆಲ್‌ನಲ್ಲಿ ಮೊಬೈಲ್ ಹಾಗೂ ಪೆನ್ ಡ್ರೈವ್ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಪ್ರಜ್ವಲ್, ಅವರ ಸೆಲ್‌ನ ಸಹಕೈದಿ ಪಶ್ಚಿಮ ಬಂಗಾಳ ಮೂಲದ ಪ್ರತಾಪ್ ರಾಯ್‌, ಡಿ.ಜೆ.ಹಳ್ಳಿಯ ತೌಸಿಫ್‌, ಸಿದ್ದಿಕಿ, ಬಾಣಸವಾಡಿಯ ಮಂಜುನಾಥ್, ನವೀನ್ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ವಾರ್ಡನ್‌ ಪ್ರಕಾಶ್ ಗಾವ್ಡೇನನ್ನು ಬಂಧಿಸಿದ್ದರು.

ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಪೊಲೀಸರು, ಪ್ರಜ್ವಲ್ ಸೇರಿ ಎಲ್ಲ ಏಳು ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸುವಂತೆ ಕಾರಾಗೃಹ ಇಲಾಖೆಗೆ ಶಿಫಾರಸು ಮಾಡಿದ್ದರು. ಈ ವರದಿಗೆ ಸಮ್ಮತಿಸಿದ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು, ಬೆಳಗಾವಿ ಸೆಂಟ್ರಲ್ ಜೈಲಿಗೆ ಪ್ರಜ್ವಲ್‌ನನ್ನು ವರ್ಗಾವಣೆಗೊಳಿಸಿ ಆದೇಶಿಸಿದ್ದರು. ಅಲ್ಲದೆ ಮಾಜಿ ಸಂಸದನ ಮೇಲೆ ಕಣ್ಗಾವಲು ಹೊಣೆಗಾರಿಕೆಯನ್ನು ಉತ್ತರ ವಲಯ ಡಿಐಜಿ ಸೋಮಶೇಖರ್ ಅವರಿಗೆ ಅಲೋಕ್ ಕುಮಾರ್ ವಹಿಸಿದ್ದರು. ಆದರೆ ಪ್ರಜ್ವಲ್ ವರ್ಗಾವಣೆ ಮುನ್ನವೇ ನಕಲಿ ಜಾಮೀನು ಪ್ರಕರಣದಲ್ಲಿ ಸೋಮಶೇಖರ್ ಬಂಧನವಾಯಿತು.

ಈ ಬೆಳವಣಿಗೆಯಿಂದ ಪ್ರಜ್ವಲ್ ಅವರನ್ನು ಬೆಳಗಾವಿಗೆ ಸ್ಥಳಾಂತರಿಸುವ ಆದೇಶಕ್ಕೆ ತಡೆಹಿಡಿದು ಡಿಜಿಪಿ ಅವರು ಪುನರ್ ಪರಿಶೀಲನೆಗೊಳಪಡಿಸಿದ್ದಾರೆ. ಉತ್ತರ ವಲಯದ ಕಾರಾಗೃಹ ವಿಭಾಗದ ಡಿಐಜಿ (DIG) ಆಗಿದ್ದ ಸೋಮಶೇಖರ್ ಅವರು ಪ್ರಸ್ತುತ ಜೈಲು ಪಾಲಾಗಿರುವ ಹಿನ್ನೆಲೆಯಲ್ಲಿ, ಬೆಳಗಾವಿ ವಲಯದಲ್ಲಿ ಹಿರಿಯ ಅಧಿಕಾರಿಯ ಹುದ್ದೆ ಖಾಲಿ ಉಳಿದಿದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಹೈಪ್ರೊಫೈಲ್ ಕೈದಿಯಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಸ್ಥಳಾಂತರಿಸಿದರೆ, ಅಗತ್ಯ ಭದ್ರತಾ ಮೇಲ್ವಿಚಾರಣೆ ಹಾಗೂ ಸಜ್ಜುಗೊಳಿಸುವಿಕೆಯಲ್ಲಿ ಲೋಪವಾಗುವ ಸಾಧ್ಯತೆಯಿದೆ.

ಇದರಿಂದಾಗಿ ಭದ್ರತೆಯ ಹಿತದೃಷ್ಟಿಯಿಂದ ಜೈಲು ಇಲಾಖೆಯು ಶಿಫ್ಟಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಹೋಲ್ಡ್‌ನಲ್ಲಿಟ್ಟಿದೆ. ಕಾರಾಗೃಹ ಇಲಾಖೆಯ ಉತ್ತರ ವಲಯದ ಡಿಐಜಿ ಹುದ್ದೆಗೆ ಹೊಸ ಅಧಿಕಾರಿಯ ನೇಮಕ ಅಥವಾ ನೆರೆಹೊರೆಯ ಹಿರಿಯ ಅಧಿಕಾರಿಗಳಿಗೆ ಹೆಚ್ಚುವರಿ ಉಸ್ತುವಾರಿ ನೀಡುವ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸೂಕ್ತ ಭದ್ರತಾ ವ್ಯವಸ್ಥೆ ಹಾಗೂ ಹಿರಿಯ ಅಧಿಕಾರಿಯ ಉಸ್ತುವಾರಿ ಖಾತ್ರಿಯಾದ ನಂತರವಷ್ಟೇ ಸ್ಥಳಾಂತರ ಪ್ರಕ್ರಿಯೆ ಮುಂದುವರಿಯಲಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಷ್ಟು ಬೇರೆ ಜೈಲುಗಳಲ್ಲಿ ಪ್ರಜ್ವಲ್ ಮೇಲೆ ಬಿಗಿ ಕಣ್ಗಾವಲು ವ್ಯವಸ್ಥೆ ಕಲ್ಪಿಸಲು ತಾಂತ್ರಿಕ ಸಮಸ್ಯೆಗಳಿವೆ. ಅಲ್ಲದೆ ಉತ್ತರ ವಲಯದ ಡಿಐಜಿ ಸಹ ಇಲ್ಲ. ಈ ಆಡಳಿತಾತ್ಮಕ ಕಾರಣಗಳಿಗೆ ಪ್ರಜ್ವಲ್ ಅವರನ್ನು ಸ್ಥಳಾಂತಕ್ಕೆ ತಡೆ ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಲೇರಲು ವಕೀಲರ ಸಿದ್ಧತೆ

ಇನ್ನೊಂದೆಡೆ, ಜೈಲು ಇಲಾಖೆಯ ಈ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಪರ ವಕೀಲರು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಸೋಮವಾರ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಥವಾ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಪರಪ್ಪನ ಅಗ್ರಹಾರ ಜೈಲಿನಲ್ಲೇ ಮುಂದುವರಿಸುವಂತೆ ಮನವಿ ಮಾಡಲು ತೀರ್ಮಾನಿಸಿದ್ದಾರೆ.

ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಾರಣಗಳೇನು?

ಪ್ರಸ್ತುತ ಸೆಷನ್ಸ್ ಕೋರ್ಟ್‌ನಲ್ಲಿ ಪ್ರಜ್ವಲ್ ವಿರುದ್ಧದ ಎರಡು ಮುಖ್ಯ ಪ್ರಕರಣಗಳ ವಿಚಾರಣೆ ಹಾಗೂ ಸಾಕ್ಷಿಗಳ ತನಿಖೆ ಭರದಿಂದ ಸಾಗುತ್ತಿದೆ. ಪ್ರತಿ ವಿಚಾರಣೆಗೂ ಜೈಲು ಅಧಿಕಾರಿಗಳು ಅವರನ್ನು ಖುದ್ದು ಕೋರ್ಟ್‌ಗೆ ಹಾಜರುಪಡಿಸುತ್ತಿದ್ದಾರೆ.

ಬೆಂಗಳೂರಿನಿಂದ ಬೆಳಗಾವಿಗೆ (ಸುಮಾರು 500 ಕಿ.ಮೀ) ಪದೇ ಪದೇ ವಿಚಾರಣೆಗೆ ಕರೆತರುವುದು ಮತ್ತು ಕರೆದೊಯ್ಯುವುದು ತೀವ್ರ ಪ್ರಯಾಸಕರ ಹಾಗೂ ಜಂಜಾಟದ ಕೆಲಸವಾಗಲಿದೆ. ಇದರಿಂದ ಕೋರ್ಟ್ ಟ್ರಯಲ್‌ಗೆ ವಿಳಂಬವಾಗುವ ಸಾಧ್ಯತೆಯಿದೆ.

ಬೆಳಗಾವಿಗೆ ಶಿಫ್ಟ್ ಮಾಡಿದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರೊಂದಿಗೆ ಸಮಾಲೋಚನೆ ನಡೆಸಲು ಹಾಗೂ ಕುಟುಂಬಸ್ಥರು ಭೇಟಿಯಾಗಲು ಕಷ್ಟವಾಗುತ್ತದೆ.

ಈ ಎಲ್ಲಾ ತಾಂತ್ರಿಕ ಹಾಗೂ ಕಾನೂನಾತ್ಮಕ ಅಂಶಗಳನ್ನು ಉಲ್ಲೇಖಿಸಿ, ಸ್ಥಳಾಂತರ ಆದೇಶಕ್ಕೆ ತಡೆ ನೀಡುವಂತೆ ಪ್ರಜ್ವಲ್ ರೇವಣ್ಣ ಅವರ ಪರ ವಕೀಲರು ನ್ಯಾಯಾಲಯವನ್ನು ಕೋರಲಿದ್ದಾರೆ.

PREV
Read more Articles on
click me!

Recommended Stories

14 ವರ್ಷದಿಂದ ಬಿಡಿಎಯಲ್ಲಿ ಡೆಪ್ಯುಟೇಷನ್‌ನಲ್ಲಿ ಕೆಲಸ ಮಾಡ್ತಿದ್ದ ಇಂಜಿನಿಯರ್‌ಅನ್ನು ಅಕ್ರಮ ಸೈಟ್‌ ಸ್ಕ್ಯಾಮ್‌ ಬೆನ್ನಲ್ಲೇ ವಾಪಾಸ್‌ ಕರೆಸಿಕೊಂಡ ಸರ್ಕಾರ
ರಾಗಿಗುಡ್ಡ-ಕನಕಪುರ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ವಿರೋಧ; ಜನರ ಬೇಡಿಕೆಗಳೇನು?