
ಬೆಂಗಳೂರು (ಅ.16): ಒಂದೆಡೆ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ 'ಹಾರುವ ಕಾರನ್ನು' ಅನಾವರಣಗೊಳಿಸಿ ಜಗತ್ತನ್ನೇ ನಿಬ್ಬೆರಗಾಗಿಸಿದೆ. ಆದರೆ, ಅದೇ ದಿನ ಭಾರತದ ಹೆಮ್ಮೆಯ ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರ ಇಡೀ ಜಗತ್ತೇ ತಲೆತಗ್ಗಿಸುವಂತಹ ವಿಚಿತ್ರ 'ಸಾಧನೆ'ಗೆ ಸಾಕ್ಷಿಯಾಗಿದೆ! ಇಲ್ಲಿ ಹಾರುವ ಕಾರುಗಳಿಲ್ಲ, ಬದಲಿಗೆ ಮಳೆ ನೀರಲ್ಲಿ ರಾಜಾರೋಷವಾಗಿ 'ತೇಲುವ ಕಾರುಗಳು' ಪ್ರತ್ಯಕ್ಷವಾಗಿವೆ!
ಹೌದು, ಐಟಿ ಕಾರಿಡಾರ್ ಖ್ಯಾತಿಯ ಮಹದೇವಪುರ ವ್ಯಾಪ್ತಿಯ ಪಣತ್ತೂರು ರೈಲ್ವೆ ಅಂಡರ್ಪಾಸ್ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಕಾರೊಂದು ದೋಣಿಯಂತೆ ತೇಲುತ್ತಾ, ಈಜುತ್ತಾ ಸಾಗಿರುವ ಆಘಾತಕಾರಿ ಹಾಗೂ ಅಷ್ಟೇ ಹಾಸ್ಯಾಸ್ಪದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಗಳೂರು ಪೂರ್ವ ಭಾಗ ಹಾಗೂ ಹೊರವಲಯದಲ್ಲಿ ಮಂಗಳವಾರ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ಪಣತ್ತೂರು ಅಂಡರ್ಪಾಸ್ ಸಂಪೂರ್ಣವಾಗಿ ಮುಳುಗಿಹೋಗಿದೆ. ಎಂದಿನಂತೆ ಅಂಡರ್ಪಾಸ್ನಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ವ್ಯವಸ್ಥೆ ಇರಲಿಲ್ಲ. ಈ ವೇಳೆ ಅಂಡರ್ಪಾಸ್ ದಾಟಲು ಯತ್ನಿಸಿದ ಕಾರೊಂದು, ನೀರಿನ ಮಟ್ಟ ಹೆಚ್ಚಿದ್ದರಿಂದ ಎಂಜಿನ್ ಏರ್ಲಾಕ್ ಆಗಿ, ಸಂಪೂರ್ಣವಾಗಿ ನೀರಿನ ಮೇಲೆಯೇ ತೇಲಲಾರಂಭಿಸಿದೆ. ಇದನ್ನು ಕಂಡ ಸ್ಥಳೀಯರು ಮೊಬೈಲ್ನಲ್ಲಿ ದೃಶ್ಯವನ್ನು ಸೆರೆಹಿಡಿದಿದ್ದು, 'ಇದು ನಮ್ಮ ಬೆಂಗಳೂರಿನ ಇನ್ಫ್ರಾಸ್ಟ್ರಕ್ಚರ್!' ಎಂದು ನೆಟ್ಟಿಗರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಕೇವಲ ಪಣತ್ತೂರು ಮಾತ್ರವಲ್ಲದೆ, ಬೆಂಗಳೂರಿನ ದಕ್ಷಿಣ ಹೊರವಲಯದ ಆನೇಕಲ್ ಸುತ್ತಮುತ್ತ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಿತ್ತಗಾನಹಳ್ಳಿ ಗೇಟ್ ಬಳಿ ಪ್ರವಾಹ ಸೇಷ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ-44 (ಹೊಸೂರು ಮುಖ್ಯರಸ್ತೆ) ಕಿತ್ತಗಾನಹಳ್ಳಿ ಗೇಟ್ ಬಳಿ ಹೆದ್ದಾರಿಯ ಮೇಲೆಯೇ ಮೊಣಕಾಲುದ್ದ ನೀರು ನಿಂತಿದೆ. ಹೆದ್ದಾರಿಯು ಕೆರೆಯಂತಾಗಿದ್ದು, ನೂರಾರು ವಾಹನಗಳು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿ ನಲುಗಿಹೋಗಿವೆ. ದ್ವಿಚಕ್ರ ವಾಹನ ಸವಾರರು ವಾಹನಗಳನ್ನು ತಳ್ಳಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾದರೆ, ಪಾದಚಾರಿಗಳು ರಸ್ತೆ ದಾಟಲು ಜೀವ ಕೈಯಲ್ಲಿ ಹಿಡಿದು ಸಾಗಬೇಕಾಯಿತು.
ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಮಹದೇವಪುರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕ ರಸ್ತೆಗಳ ಪರಿಸ್ಥಿತಿ ಮಳೆ ಬಂದಾಗಲೆಲ್ಲಾ ಇಷ್ಟೇ. ಸಣ್ಣ ಮಳೆಯಾದರೂ ಪಣತ್ತೂರು ಅಂಡರ್ಪಾಸ್ ಮುಚ್ಚಿಹೋಗುವುದು ಹೊಸದೇನಲ್ಲ. ಆದರೂ ಅಧಿಕಾರಿಗಳು ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳದೆ ಕುಂಭಕರ್ಣ ನಿದ್ದೆಗೆ ಜಾರಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಎಚ್ಚರಿಕೆ: ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ತಗ್ಗು ಪ್ರದೇಶಗಳು ಹಾಗೂ ಜಲಾವೃತವಾಗಿರುವ ಅಂಡರ್ಪಾಸ್ಗಳಲ್ಲಿ ವಾಹನ ಚಾಲನೆ ಮಾಡುವಾಗ ಎಚ್ಚರ ವಹಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.