ಮತ್ತೆ ಬೆಲೆ ಏರಿಕೆ ಬಿಸಿ : ಕಣ್ಣೀರು ತರಿಸುತ್ತಿರುವ ಈರುಳ್ಳಿ

By Kannadaprabha NewsFirst Published Nov 3, 2019, 8:37 AM IST
Highlights

ವಿವಿಧೆಡೆ ಸುರಿದ ಭಾರಿ ಮಳೆಯ ಪರಿಣಾಮ ಈರುಳ್ಳಿ ಪೂರೈಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು ಈ ನಿಟ್ಟಿನಲ್ಲಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಈರುಳ್ಳಿ ಬೆಲೆಯು ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. 

ಬೆಂಗಳೂರು [ನ.03] : ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಈರುಳ್ಳಿ ನೆಲ ಕಚ್ಚಿದ್ದು, ಭಾರಿ ಬೇಡಿಕೆ ಕುದುರಿಸಿಕೊಂಡಿದೆ. ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಕೆ.ಜಿ.ಗೆ 60 ರು. ನಿಗದಿಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

ನವೆಂಬರ್‌ನಲ್ಲಿ ಹೊಸ ಬೆಳೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಈರುಳ್ಳಿ ಬೆಳೆಗಾರರು ಮಳೆಗೆ ಬೆಳೆದ ಬೆಳೆ ಕಳೆದುಕೊಂಡು ನಷ್ಟಕ್ಕೆ ಒಳಗಾಗಿದ್ದಾರೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೇಡಿಕೆಗೆ ತಕ್ಕಷ್ಟುಪೂರೈಕೆಯಾಗುತ್ತಿಲ್ಲ. ಇದರಿಂದ ಒಂದು ವಾರದಲ್ಲಿ ಬೆಲೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಮಳೆ ಹೀಗೆ ಮುಂದುವರೆದರೆ ಬೆಲೆ ಇನ್ನಷ್ಟುಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಾಜ್ಯ ಮಾತ್ರವಲ್ಲದೇ ಮಹಾರಾಷ್ಟ್ರ, ಗುಜರಾತ್‌ ಸೇರಿದಂತೆ ಈರುಳ್ಳಿ ಬೆಳೆಯುವ ಇತರೆ ರಾಜ್ಯಗಳಲ್ಲೂ ಮಳೆ ಎಡಬಿಡದೆ ಸುರಿಯುತ್ತಿರುವುದು ಬೆಳೆಗಾರರಿಗೆ ಕಗ್ಗಂಟಾಗಿದೆ. ವಿಪರೀತ ಮಳೆಗೆ ಕಟಾವಿಗೆ ಬಂದಿದ್ದ ಈರುಳ್ಳಿ ಬೆಳೆ ಭೂಮಿಯಲ್ಲೇ ಕೊಳೆಯುತ್ತಿದ್ದರೆ, ಮಾರುಕಟ್ಟೆಗೆ ಸರಬರಾಜಾಗಿರುವ ಶೀತ ಹಿಡಿದಿರುವ ಈರುಳ್ಳಿಯನ್ನು ಸಂರಕ್ಷಿಸಿಡುವುದು ವ್ಯಾಪಾರಿಗಳಿಗೆ ಸವಾಲಾಗಿದೆ. ದೇಶದಲ್ಲಿ ಈರುಳ್ಳಿ ರಫ್ತು ನಿಷೇಧಿಸಲಾಗಿದ್ದು, ಜತೆಗೆ ಮಳೆಗೆ ಈರುಳ್ಳಿ ಬೆಳೆ ಹಾಳಾಗಿರುವುದರಿಂದ ಮಾರುಕಟ್ಟೆಗೆ ಸರಬರಾಜಬೇಕಿದ್ದ ಪ್ರಮಾಣವೂ ಕಡಿಮೆಯಾಗಿದೆ. ದಾಸ್ತಾನು ಸಹ ಈ ಬಾರಿ ಕಡಿಮೆಯಾಗಿದೆ. ಮಳೆ ಹೀಗೆ ಸುರಿದರೆ ಬೆಲೆ ಇನ್ನಷ್ಟುತುಟ್ಟಿಆಗಬಹುದು ಎನ್ನುತ್ತಿದ್ದಾರೆ ವ್ಯಾಪಾರಿಗಳು.

ನವೆಂಬರ್‌ನಲ್ಲಿ ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಗೆ ಪ್ರತಿ ದಿನ ಕನಿಷ್ಠ 2 ಲಕ್ಷ ಚೀಲಕ್ಕಿಂತ ಹೆಚ್ಚು ಈರುಳ್ಳಿ ಬರುತ್ತಿತ್ತು. ಆದರೆ, ಬುಧವಾರ ಮತ್ತು ಗುರುವಾರ 60ರಿಂದ 70 ಸಾವಿರ ಚೀಲ ಈರುಳ್ಳಿ ಬಂದಿದೆ. ಆದರೆ, ಶನಿವಾರ 1.55 ಲಕ್ಷ ಚೀಲ ಈರುಳ್ಳಿ ಬಂದಿದ್ದು, ಸಂಪೂರ್ಣವಾಗಿ ಬಳಕೆಯಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ್‌, ಗದಗ ಸೇರಿದಂತೆ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಮಳೆಗೆ ಬೆಳೆ ಹಾನಿಯಾಗಿದೆ. ಮಾರುಕಟ್ಟೆಗೆ ಬರುತ್ತಿರುವ ಈರುಳ್ಳಿ ಗುಣಮಟ್ಟದಿಂದ ಕೂಡಿಲ್ಲ. ಮಳೆಗೆ ಒಳಗೆ ಕೊಳೆತು ಹೋಗುತ್ತಿದೆ. ಮಳೆಯಿಂದ ರೈತರಿಗೆ ಬಹಳ ಹಾನಿಯಾಗಿದೆ. ಕಳೆದ ವರ್ಷವೂ ಈರುಳ್ಳಿ ಬೆಳೆ ಕಡಿಮೆಯಾಗಿತ್ತು. ಇಲ್ಲಿಂದ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಒಡಿಶಾ, ಅಸ್ಸಾಂ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಗೆ ಈರುಳ್ಳಿ ಸರಬರಾಜಾಗುತ್ತದೆ. ಆದರೆ, ಈ ಬಾರಿ ಬೇಡಿಕೆ ಇದ್ದರೂ ಪೂರೈಕೆ ಇಲ್ಲದಂತಾಗಿದೆ. ಉತ್ತರ ಭಾರತದಲ್ಲೂ ಈರುಳ್ಳಿ ಕೆ.ಜಿ.ಗೆ 50-60 (ಸಗಟು ದರ) ರು.ಗೆ ಮಾರಾಟವಾಗುತ್ತಿದೆ.

click me!