
ಬೆಂಗಳೂರು: ದೇಶೀಯ ಸರಕು ಸಾಗಣೆ ಜಾಲವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ವೈಟ್‌ಫೀಲ್ಡ್‌ನಿಂದ ನವದೆಹಲಿಯ ತುಘಲಕಾಬಾದ್‌ಗೆ ಸಂಚರಿಸುವ ನೂತನ ಕಂಟೇನರ್ ರೈಲು ಸೇವೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭಾನುವಾರ ಚಾಲನೆ ನೀಡಿದರು.
ನಗರದ ವೈಟ್‌ಫೀಲ್ಡ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿ ಮಾತನಾಡಿದ ಸಚಿವರು, "ದಕ್ಷಿಣ ಭಾರತದಲ್ಲೇ ಇದು ಅತ್ಯಂತ ಮೊದಲ ಉಪಕ್ರಮವಾಗಿದೆ. ಬೆಂಗಳೂರು, ತುಮಕೂರು, ಹೊಸೂರು, ಕೋಲಾರ ಹಾಗೂ ಕೃಷ್ಣಗಿರಿ ಸೇರಿದಂತೆ ಸುತ್ತಮುತ್ತಲಿನ ಕೈಗಾರಿಕೆಗಳಿಗೆ ಅಗತ್ಯವಿರುವ ಕಚ್ಚಾ ವಸ್ತುಗಳು ಮತ್ತು ಸಿದ್ಧಪಡಿಸಿದ ಸರಕುಗಳನ್ನು ಸುರಕ್ಷಿತವಾಗಿ ಹಾಗೂ ನಿಗದಿತ ಸಮಯಕ್ಕೆ ಸರಿಯಾಗಿ ದೇಶದ ದೊಡ್ಡ ಮಾರುಕಟ್ಟೆಗಳಿಗೆ ತಲುಪಿಸಲು ಈ ಯೋಜನೆ ಸಹಕಾರಿಯಾಗಲಿದೆ. ರಸ್ತೆ ಮತ್ತು ವಾಯು ಸಾರಿಗೆಗೆ ಹೋಲಿಸಿದರೆ ಇದು ವೆಚ್ಚ ಕಡಿಮೆಯಾಗಿಸುವ ಜೊತೆಗೆ ಅತ್ಯಂತ ಪರಿಸರ ಸ್ನೇಹಿ ಆಯ್ಕೆಯಾಗಿದೆ," ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಮಾತನಾಡಿ, "ಈ ಭಾಗದ ಶ್ರಮಿಕರು ಮತ್ತು ಉದ್ಯಮಿಗಳ ಬಹುಕಾಲದ ಬೇಡಿಕೆ ಇಂದು ಈಡೇರಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದರ್ಶಿತ್ವ ಹಾಗೂ ಸಚಿವ ವಿ. ಸೋಮಣ್ಣ ಅವರ ವಿಶೇಷ ಕಾಳಜಿಯಿಂದಾಗಿ ಈ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಇದರಿಂದ ನಮ್ಮ ಕ್ಷೇತ್ರದಿಂದ ನವದೆಹಲಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸರಕುಗಳನ್ನು ಸಾಗಿಸಲು ಮಹತ್ವದ ನೆರವು ಸಿಗಲಿದೆ," ಎಂದರು.
ಈ ಸಂದರ್ಭದಲ್ಲಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಸೇರಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.