ರಾಜ್ಯದಲ್ಲಿ ಸಾರಿಗೆ ನಿಗಮ, ಮೆಟ್ರೋ, ವಿದ್ಯುತ್‌, ಜಲಮಂಡಳಿ; ಈಗ ಹಾಲು ಒಕ್ಕೂಟ, ಎಲ್ಲವೂ ನಷ್ಟದಲ್ಲಿದ್ದರೆ ಲಾಭದಲ್ಲಿರುವ ಸಂಸ್ಥೆ ಯಾವುದು?

Published : Sep 26, 2026, 01:03 PM IST
Nandini Milk Price Hike

ಸಾರಾಂಶ

ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 10 ರೂ. ಏರಿಕೆ ಮಾಡಲು ಒಕ್ಕೂಟಗಳು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿವೆ. ಹೆಚ್ಚುವರಿ ಹಣದಲ್ಲಿ 7 ರೂ. ರೈತರಿಗೆ ಹಾಗೂ 3 ರೂ. ನಷ್ಟದಲ್ಲಿರುವ ಒಕ್ಕೂಟಗಳಿಗೆ ನೀಡಲು ಪ್ರಸ್ತಾಪಿಸಲಾಗಿದೆ.

ಬೆಂಗಳೂರು (ಸೆ.26): ರಾಜ್ಯದಲ್ಲಿ ಹಾಲಿನ ದರ ಭಾರೀ ಮಟ್ಟದಲ್ಲಿ ಅಂದರೆ ಲೀಟರ್‌ಗೆ 10 ರೂಪಾಯಿ ಏರಿಕೆ ಮಾಡಲು ಸರ್ಕಾರ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಇದರ ಬಗ್ಗೆ ಸೂಚನೆಯನ್ನೂ ಸರ್ಕಾರ ನೀಡಿದ್ದು, ಅಧಿಕೃತವಾಗಿ ಪ್ರಕಟವಾಗುವುದು ಬಾಕಿ ಇದೆ. ಕಳೆದ ಕೆಲವೊಂದು ವರ್ಷಗಳಲ್ಲಿ ಪ್ರತಿ ಬಾರಿಯೂ ದರ ಏರಿಕೆ ಮಾಡುವ ಹಂತದಲ್ಲಿ ಮಂಡಳಿ ನಷ್ಟದಲ್ಲಿದೆ ಎಂದೇ ಕಾರಣ ನೀಡಲಾಗುತ್ತಿತ್ತು. ರಾಜ್ಯದಲ್ಲಿ ಹಾಲು ಒಕ್ಕೂಟ ಮಾತ್ರವಲ್ಲ, ಸಾರಿಗೆ ನಿಗಮ ಕೂಡ ನಷ್ಟದಲ್ಲಿದೆ. ಅಲ್ಲಿಯೂ ಕೂಡ ದರ ಏರಿಕೆ ಮಾಡಬೇಕು ಎನ್ನುವ ಪ್ರಸ್ತಾಪ ಕೇಳಿ ಬಂದಿದೆ. ಅದರೊಂದಿಗೆ ಮೆಟ್ರೋ, ವಿದ್ಯುತ್‌, ಜಲಮಂಡಳಿ ಹೀಗೆ ಎಲ್ಲದಕ್ಕೆ ಎಲ್ಲವೂ ನಷ್ಟದಲ್ಲಿವೆ. ಇಷ್ಟೆಲ್ಲಾ ಇರುವ ನಡುವೆ ಎದುರಾಗುವ ಮೊದಲ ಪ್ರಶ್ನೆ ಎಲ್ಲಾ ಸಂಸ್ಥೆ ನಷ್ಟದಲ್ಲಿದರೆ ಲಾಭದಲ್ಲಿರುವ ಸಂಸ್ಥೆ ಯಾವುದು ಅನ್ನೋದು.

ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಕುರಿತಂತೆ ಹೈಡ್ರಾಮಾ ಮುಂದುವರಿದಿದ್ದು, ಪ್ರತಿ ಲೀಟರ್ ಹಾಲಿನ ದರವನ್ನು 10 ರೂಪಾಯಿ ಏರಿಕೆ ಮಾಡುವಂತೆ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಡಿ.ಕೆ. ಸುರೇಶ್ ಹಾಗೂ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮುಖ್ಯಮಂತ್ರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ. ಮಂಗಳವಾರ ಸಿಎಂ ಅಧಿಕೃತ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕೆಎಂಎಫ್ (KMF) ಹಾಗೂ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಸಭೆ ನಡೆಸಿ, ಪ್ರಸ್ತುತ ಹಾಲು ಉತ್ಪಾದಕ ರೈತರು ಮತ್ತು ಒಕ್ಕೂಟಗಳು ಎದುರಿಸುತ್ತಿರುವ ತೀವ್ರ ಆರ್ಥಿಕ ಸಂಕಷ್ಟವನ್ನು ಸಿಎಂ ಗಮನಕ್ಕೆ ತಂದರು.

ಲೀಟರ್‌ಗೆ ₹10 ಏರಿಕೆಗೆ ಮನವಿ - ಹಂಚಿಕೆ ಸೂತ್ರವೇನು?

ಸಿಎಂ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, "ಉತ್ತರ ಭಾರತದ ಎಲ್ಲಾ ರಾಜ್ಯಗಳು ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, 4 ತಿಂಗಳ ಹಿಂದೆಯೇ ಹಾಲಿನ ದರ ಏರಿಕೆ ಮಾಡಿವೆ. ಆದರೆ ನಾವು ಸರ್ಕಾರವನ್ನು ಕೇಳಿಕೊಂಡು ಬೆಲೆ ಏರಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ ಪೆಟ್ರೋಲ್, ಸಾರಿಗೆ ವೆಚ್ಚ, ಮೈದಾ ಹಾಗೂ ಹಸುವಿನ ಮೇವಿನ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ ಲೀಟರ್‌ಗೆ 10 ರೂಪಾಯಿ ಬೆಲೆ ಏರಿಕೆ ಮಾಡುವಂತೆ ಕೋರಿದ್ದೇವೆ," ಎಂದರು.

₹7 ರೈತರಿಗೆ, ₹3 ಒಕ್ಕೂಟಗಳಿಗೆ: "ನಾವು ಕೇಳಿರುವ 10 ರೂಪಾಯಿ ಏರಿಕೆಯಲ್ಲಿ 7 ರೂಪಾಯಿಯನ್ನು ನೇರವಾಗಿ ರೈತರಿಗೆ ಹಾಗೂ 3 ರೂಪಾಯಿಯನ್ನು ನಷ್ಟದಲ್ಲಿರುವ ಒಕ್ಕೂಟಗಳ ನಿರ್ವಹಣಾ ವೆಚ್ಚ ಸರಿದೂಗಿಸಲು ನೀಡಬೇಕು ಎಂದು ಕೇಳಿದ್ದೇವೆ. ಕಳೆದ ಎರಡು ಬಾರಿ ದರ ಏರಿಕೆಯಾದಾಗ ಹೆಚ್ಚಾದ ಹಣವನ್ನೆಲ್ಲಾ ರೈತರಿಗೇ ನೀಡಲಾಗಿದ್ದು, ಒಕ್ಕೂಟಗಳು ಕಳೆದ 4-5 ತಿಂಗಳಿಂದ ತೀವ್ರ ನಷ್ಟ ಅನುಭವಿಸುತ್ತಿವೆ," ಎಂದು ಡಿ.ಕೆ. ಸುರೇಶ್ ವಿವರಿಸಿದರು.

"ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಬೇಡಿ": ಮಾಧ್ಯಮಗಳಿಗೆ ಮನವಿ

ಹಾಲಿನ ದರ ಏರಿಕೆಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುವ ವಿರೋಧದ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ಮಾಧ್ಯಮಗಳಿಗೆ ಭಾವುಕ ಮನವಿ ಮಾಡಿದರು. "ನೀರಿನ ಬಾಟಲಿಗೆ ಇಂದು 25 ರೂಪಾಯಿ ನೀಡಲಾಗುತ್ತಿದೆ. ಪೆಟ್ರೋಲ್ ದರ ಏರಿಕೆಯಾದಾಗ ಯಾರೂ ಧ್ವನಿ ಎತ್ತುವುದಿಲ್ಲ. ಹೀಗಿರುವಾಗ ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಬೇಡಿ. ಹಾಲಿನ ದರ ಏರಿಕೆಗೆ ಮಾಧ್ಯಮಗಳು ಹಾಗೂ ಗ್ರಾಹಕರು ಸಹಕರಿಸಬೇಕು. ರಾಜ್ಯ ಸರ್ಕಾರ ಈಗಾಗಲೇ ರೈತರಿಗೆ ಪ್ರತಿ ಲೀಟರ್‌ಗೆ 5 ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದೆ. ಇಂತಹ ಸೌಲಭ್ಯ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಸಭೆಯಲ್ಲಿ ಸರ್ಕಾರದ ಸಬ್ಸಿಡಿ ಕುರಿತು ಚರ್ಚೆಯಾಗಿಲ್ಲ, ಎಲ್ಲದಕ್ಕೂ ಸಬ್ಸಿಡಿ ಕೇಳಲು ಸಾಧ್ಯವಿಲ್ಲ," ಎಂದು ಸ್ಪಷ್ಟಪಡಿಸಿದರು.

ಸಿಎಂ ಸಭೆ ಹಾಗೂ ಕೆಎಂಎಫ್ ಸಿದ್ಧತೆ

ಕಳೆದ 10 ವರ್ಷಗಳಲ್ಲಿ ಪಶು ಆಹಾರ ದರದಲ್ಲಾದ ಹೆಚ್ಚಳ, ಪ್ರತಿ ಲೀಟರ್ ಹಾಲು ಉತ್ಪಾದನೆಗೆ ತಗಲುವ ನೈಜ ವೆಚ್ಚ, ಜಿಲ್ಲೆಗಳಲ್ಲಿ ಒಕ್ಕೂಟ ಹೊರತುಪಡಿಸಿ ಬೇರೆಡೆ ಮಾರಾಟವಾಗುತ್ತಿರುವ ಹಾಲಿನ ಪ್ರಮಾಣ ಹಾಗೂ ನೆರೆಯ ರಾಜ್ಯಗಳಲ್ಲಿನ ಖರೀದಿ-ಮಾರಾಟ ದರದ ಸಮಗ್ರ ವಿವರ ನೀಡುವಂತೆ ಸಿಎಂ ಡಿಕೆ ಶಿವಕುಮಾರ್‌ ಸೂಚಿಸಿದ್ದರು. ಈ ಎಲ್ಲಾ ಅಂಕಿ-ಅಂಶಗಳ ವರದಿಯೊಂದಿಗೆ ಒಕ್ಕೂಟದ ಅಧ್ಯಕ್ಷರು ಸಿಎಂ ಭೇಟಿಯಾದರು.

ಸಭೆಯ ಬಳಿಕ ಮಾತನಾಡಿದ ಕೋಮುಲ್ (KOMUL) ಅಧ್ಯಕ್ಷ ಹಾಗೂ ಶಾಸಕ ನಂಜೇಗೌಡ, "ಬೇರೆ ರಾಜ್ಯಗಳಿಗೂ ನಮಗೂ ಹಾಲಿನ ದರದಲ್ಲಿ ಸುಮಾರು 8 ರೂಪಾಯಿ ವ್ಯತ್ಯಾಸವಿದೆ. ಎಲ್ಲವನ್ನೂ ಸಿಎಂ ಗಮನಕ್ಕೆ ತಂದಿದ್ದು, ಹಾಲು ಉತ್ಪಾದಕರ ಪರವಾಗಿ ಆದಷ್ಟು ಬೇಗ ಉತ್ತಮ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ," ಎಂದು ತಿಳಿಸಿದರು. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಗ್ರಾಹಕರು ಹಾಗೂ ಸಂಸ್ಥೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅಂತಿಮ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಇಂದಿರಾನಗರ ಕೆಫೆಯಲ್ಲಿ ಸಿಂಪಲ್‌ ಆಗಿ ಕೆಲಸ ಮಾಡುತ್ತಿರುವ WhatsApp CEO ಕುನಾಲ್‌ ಶಾ ಫೋಟೋ ವೈರಲ್‌
ರಾಜ್ಯದಲ್ಲಿ ಮುಂದಿನ 4 ದಿನ ಸಾಧಾರಣ ಮಳೆ ಸಾಧ್ಯತೆ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!