
ಬೆಂಗಳೂರು (ಆ.28): ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ನೇರಳೆ ಮಾರ್ಗದ (Purple Line) ಬೆನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ತಾಂತ್ರಿಕ ನಿರ್ವಹಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ವೇಗಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಬೆನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ಮಧ್ಯೆ ಇರುವ ‘ಓಪನ್ ವೆಬ್ ಗರ್ಡರ್’ನಲ್ಲಿ (Open Web Girder - OWG) ಪ್ರಸ್ತುತ ನಿಗದಿತ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ತಾಂತ್ರಿಕ ತಜ್ಞರ ವಿಶೇಷ ತಂಡವು ಗರ್ಡರ್‌ನ ನಿಯತಕಾಲಿಕ ಸುರಕ್ಷತಾ ತಪಾಸಣೆ ನಡೆಸುತ್ತಿದ್ದು, ಅಗತ್ಯ ದುರಸ್ತಿ ಹಾಗೂ ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ.
ನೇರಳೆ ಮಾರ್ಗದಲ್ಲಿ (ಚಲ್ಲಘಟ್ಟ - ವೈಟ್‌ಫೀಲ್ಡ್) ಮೆಟ್ರೋ ರೈಲು ಸಂಚಾರ ಎಂದಿನಂತೆಯೇ ಸುಗಮವಾಗಿ ಮುಂದುವರಿಯಲಿದೆ. ಆದರೆ, ಈ ನಿರ್ದಿಷ್ಟ ಮಾರ್ಗದಲ್ಲಿ ವೇಗ ಕಡಿಮೆ ಮಾಡಿರುವುದರಿಂದ ಒಟ್ಟಾರೆ ಪ್ರಯಾಣದ ಸಮಯದಲ್ಲಿ ಕೇವಲ ಅಲ್ಪ ಪ್ರಮಾಣದ ವ್ಯತ್ಯಾಸ (ಕೆಲವೇ ನಿಮಿಷಗಳ ವಿಳಂಬ) ಉಂಟಾಗಬಹುದು. ನಿರ್ವಹಣಾ ಕಾರ್ಯವು ಅಕ್ಟೋಬರ್ ಎರಡನೇ ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾಮಗಾರಿ ಸಂಪೂರ್ಣಗೊಂಡ ನಂತರ ತಜ್ಞರ ತಾಂತ್ರಿಕ ಮೌಲ್ಯಮಾಪನ ನಡೆಸಿ, ಎಂದಿನಂತೆ ಸಾಮಾನ್ಯ ವೇಗದಲ್ಲಿ ರೈಲು ಓಡಿಸಲು ಅನುಮತಿ ನೀಡಲಾಗುವುದು.
ಪ್ರಯಾಣಿಕರ ಸುರಕ್ಷಿತ ಮತ್ತು ವಿಶ್ವಾಸಾರ್ಹ ಪ್ರಯಾಣಕ್ಕೆ ಸದಾ ಬದ್ಧವಾಗಿರುವ ಬಿಎಂಆರ್‌ಸಿಎಲ್, ಈ ನಿರ್ವಹಣಾ ಅವಧಿಯಲ್ಲಿ ಪ್ರಯಾಣಿಕರು ತೋರುತ್ತಿರುವ ಸಹಕಾರಕ್ಕೆ ಧನ್ಯವಾದ ತಿಳಿಸಿದೆ.