ಬೆಂಗಳೂರು ಕಂಪನಿ ₹5000 ಕೋಟಿ ಕ್ರಿಪ್ಟೋ ಅಕ್ರಮ! ನೋಂದಣಿಯಾಗದೆ ವಹಿವಾಟು, ಇ.ಡಿ. ಅಧಿಕಾರಿಗಳ ದಾಳಿಯಿಂದ ಬೆಳಕಿಗೆ

Gowthami K   | Kannada Prabha
Published : Oct 30, 2026, 09:59 AM IST
Crypto Market

ಸಾರಾಂಶ

ಬೆಂಗಳೂರಿನ ಆರ್‌ಪಿಎಫ್‌ಎಎಸ್‌ ಟೆಕ್ನಾಲಜೀಸ್‌ ಕಂಪನಿ ಅಕ್ರಮವಾಗಿ 5000 ಕೋಟಿ ರು. ಕ್ರಿಪ್ಟೋಕರೆನ್ಸಿ ವಹಿವಾಟು ಮಾಡಿದ್ದನ್ನು ಇಡಿ ಪತ್ತೆ ಮಾಡಿದೆ. ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ 2 ಮತ್ತು ಮಧ್ಯಪ್ರದೇಶದ ಭೋಪಾಲ್‌ನ 1 ಕಡೆ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು, ಮಡ್‌ರೆಕ್ಸ್‌ , ಸೇಬರ್‌.ಮನಿ ಎಂಬ ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸುತ್ತಿದ್ದ ಆರ್‌ಪಿಎಫ್‌ಎಎಸ್‌ ಟೆಕ್ನಾಲಜೀಸ್‌, 2018ರಿಂದ ಇದನ್ನು ನಡೆಸುತ್ತಿತ್ತು.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಆರ್‌ಪಿಎಫ್‌ಎಎಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ಎಂಬ ಹೆಸರಿನ ಕಂಪನಿಯೊಂದು ಅಕ್ರಮವಾಗಿ 5 ಸಾವಿರ ಕೋಟಿ ರು.ಗಳಷ್ಟು ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸಿರುವುದನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಎರಡು ಮತ್ತು ಮಧ್ಯಪ್ರದೇಶದ ಭೋಪಾಲ್‌ನ ಒಂದು ಕಡೆ ಮಂಗಳವಾರ ಮತ್ತು ಬುಧವಾರ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು, ಮಡ್‌ರೆಕ್ಸ್‌ ಮತ್ತು ಸೇಬರ್‌.ಮನಿ ಎಂಬ ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸುತ್ತಿದ್ದ ಆರ್‌ಪಿಎಫ್‌ಎಎಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌ 2018ರಿಂದ ಇಂತಹ ವಹಿವಾಟು ನಡೆಸುತ್ತಿವೆ ಎಂಬುದನ್ನು ಪತ್ತೆ ಮಾಡಿದ್ದಾರೆ.

ಕ್ರಿಪ್ಟೋ ವಹಿವಾಟು ನಡೆಸಲು ಈ ಕಂಪನಿಯು ಆರ್‌ಬಿಐ ನಿಯಮದಂತೆ ನೋಂದಣಿ ಮಾಡಿಕೊಂಡಿಲ್ಲ. ಹೀಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿ, ಗ್ರಾಹಕರನ್ನು ಆಕರ್ಷಿಸಿದೆ. ಮಡ್‌ರೆಕ್ಸ್‌ ಮತ್ತು ಸೇಬರ್‌.ಮನಿ ಪ್ಲಾಟ್‌ಫಾರಂಗಳು ಭಾರತೀಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿವೆ ಎಂದು ಇ.ಡಿ ಪ್ರಕಟಣೆ ತಿಳಿಸಿದೆ.

ಗ್ರಾಹಕರಿಂದ ರುಪಾಯಿ ಅಥವಾ ಡಾಲರ್‌ ರೂಪದಲ್ಲಿ ಹಣವನ್ನು ಈ ಪ್ಲಾಟ್‌ಫಾರಂಗಳ ಖಾತೆಗೆ ಜಮೆ ಮಾಡಿಸಿಕೊಂಡು, ನಂತರ ಅದನ್ನು ಕ್ರಿಪ್ಟೋಕರೆನ್ಸಿಗಳಿಗೆ ಪರಿವರ್ತಿಸಲಾಗುತ್ತಿತ್ತು. ಎಲ್ಲ ರೂಪದ ಕ್ರಿಪ್ಟೋಕರೆನ್ಸಿಗಳನ್ನು ಬಳಸುತ್ತಿದ್ದರೂ, ಕಂಪನಿಯು ತನ್ನದೇ ಆದ ಸೇಬರ್‌ ಕಾಯ್ನ್‌ ಎಂಬ ಕ್ರಿಪ್ಟೋಕರೆನ್ಸಿಯನ್ನು ಹೆಚ್ಚು ಬಳಸಿಕೊಂಡಿದೆ ಎಂದು ಹೇಳಿದೆ.

ಹೀಗೆ ಪರಿವರ್ತಿಸಲಾದ ಕ್ರಿಪ್ಟೋಕರೆನ್ಸಿಯನ್ನು ಸಿಂಗಾಪುರ, ದುಬೈನಲ್ಲಿರುವ ಕಂಪನಿಯ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಅಲ್ಲಿಂದ ಗ್ರಾಹಕರು ಸೂಚಿಸಿದ ಬ್ಯಾಂಕ್‌ ಖಾತೆಗಳಿಗೆ ಸಾಮಾನ್ಯ ಕರೆನ್ಸಿ ರೂಪದಲ್ಲಿ ಹಣ ಜಮೆ ಮಾಡಿದೆ. ಇದಕ್ಕಾಗಿ ಕಮಿಷನ್‌ ಪಡೆದಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ತಿಳಿಸಿದೆ.

ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಸ್ಥೆ:

ಕಂಪನಿಯು ಇಂತಹ ವಹಿವಾಟುಗಳ ಜತೆಗೆ ಕ್ರಿಪ್ಟೋಕರೆನ್ಸಿ ಆಧಾರಿತ ಆನ್‌ಲೈನ್‌ ಬ್ಯಾಂಕ್‌ ವ್ಯವಸ್ಥೆಯನ್ನೂ ರೂಪಿಸಿಕೊಂಡಿದೆ. ಭೌತಿಕವಾಗಿ ಯಾವುದೇ ಶಾಖೆ, ಕಚೇರಿ ಮತ್ತು ಸಿಬ್ಬಂದಿ ಇಲ್ಲದಿದ್ದರೂ ಈ ಬ್ಯಾಂಕ್‌ ಮೂಲಕ ಸಾವಿರಾರು ಕೋಟಿ ರು. ವಹಿವಾಟು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.

ಕೇವಲ ಪ್ಲಾಟ್‌ಫಾರಂನಲ್ಲಿ ಕಾರ್ಯನಿರ್ವಹಿಸುವ ಈ ಬ್ಯಾಂಕ್‌ನಲ್ಲಿ ಗ್ರಾಹಕರು ಠೇವಣಿ ಇರಿಸಿ, ಅದಕ್ಕೆ ಬಡ್ಡಿಯನ್ನೂ ಪಡೆಯುವ ಸವಲತ್ತು ಒದಗಿಸಲಾಗಿತ್ತು. ಜತೆಗೆ, ಸಾಲವನ್ನು ನೀಡುವ ವ್ಯವಸ್ಥೆಯೂ ಇದೆ. ವಹಿವಾಟಿನ ಮೇಲೂ ಶುಲ್ಕ ವಿಧಿಸಲಾಗುತ್ತಿದೆ. ಈ ಬ್ಯಾಂಕ್‌ನಲ್ಲಿನ ಕ್ರಿಪ್ಟೋಕರೆನ್ಸಿಯನ್ನು ಸಾಮಾನ್ಯ ಕರೆನ್ಸಿಗೆ ಪರಿವರ್ತಿಸಲು ಅಮೆರಿಕದ ಡೆಲಾವರ್‌, ಸಿಂಗಾಪುರ ಮತ್ತು ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌ನಲ್ಲಿ ಇನ್‌ಸ್ಟಾಡಿಆ್ಯಪ್‌ ಲ್ಯಾಬ್ಸ್‌, ಪೆಬಲ್‌ ಲ್ಯಾಬ್ಸ್‌, ಬಿಂದಿ ಲ್ಯಾಬ್ಸ್‌ ಮತ್ತು ಅಪ್‌ಸರ್ಜ್‌ ಲ್ಯಾಬ್ಸ್‌ ಎಂಬ ಶೆಲ್‌ ಕಂಪನಿಗಳನ್ನು ನೋಂದಾಯಿಸಿತ್ತು. ಅಲ್ಲಿನ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದಿದ್ದರೂ, ಎಲ್ಲವನ್ನೂ ಬೆಂಗಳೂರಿನಿಂದ ನಿರ್ವಹಿಸಲಾಗುತ್ತಿತ್ತು. ಇದೂ ಸಹ ನಿಯಮಬಾಹಿರ ಎಂದು ಇ.ಡಿ ಮಾಹಿತಿ ನೀಡಿದೆ.

‘ಆ ದೇಶಗಳಲ್ಲಿ ತೆರಿಗೆ ವಿನಾಯತಿ ಇರುವ ಕಾರಣಕ್ಕೇ ಅಲ್ಲಿ ಕಂಪನಿಗಳನ್ನು ನೋಂದಾಯಿಸಲಾಗಿದೆ. ಭಾರತದಲ್ಲಿನ ಶೆಲ್‌ ಕಂಪನಿಯೊಂದಕ್ಕೆ ತಂತ್ರಾಂಶ ಅಭಿವೃದ್ಧಿ ಮತ್ತು ನಿರ್ವಹಣೆ ಹೆಸರಿನಲ್ಲಿ ಆ ಕಂಪನಿಗಳಿಂದ ಹಣ ವರ್ಗಾವಣೆ ಮಾಡಲಾಗಿದೆ. ಆನಂತರ ಕಂಪನಿಯ ಪ್ರವರ್ತಕರು ಆ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಈ ರೀತಿ 380 ಕೋಟಿ ರು.ಗಳನ್ನು ಭಾರತದ ಖಾತೆಗಳಿಗೆ ವರ್ಗಾಯಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ಇ.ಡಿ ವಿವರಿಸಿದೆ.

PREV
Read more Articles on
click me!

Recommended Stories

Kannada: ದೋಸೆ ಮಾಸ್ಟರ್, ಆಟೋ ಚಾಲಕನ ಜೊತೆ ಕನ್ನಡದಲ್ಲೇ ಮಾತನಾಡಬಹುದು! ಬೆಂಗಳೂರಿನಲ್ಲಿ ಹೊಸ ಕಲಿಕಾ ಪ್ರಯತ್ನ
One Ward One Drive campaign: ಉತ್ತರ ಪಾಲಿಕೆಯ ಈ 18 ಜಂಕ್ಷನ್‌ ಗಳಲ್ಲಿ ಆಗಲಿದೆ ದೊಡ್ಡ ಬದಲಾವಣೆ!