
ಬೆಂಗಳೂರು: ರಾಜಧಾನಿಯ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸುದ್ದಿ ಇದೆ. ಉದ್ಘಾಟನೆಗೆ ಕಾಯುತ್ತಿರುವ ಪಿಂಕ್ ಲೈನ್ ಮೆಟ್ರೋ ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ವೇಳೆ 36 ದೋಷಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗುಲಾಬಿ ಬಣ್ಣದ ಮೆಟ್ರೋ ಓಪನ್ ಆಗೋದು ಮತ್ತಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ. ನಮ್ಮ ಮೆಟ್ರೋ ಯೋಜನೆಯ 7.5 ಕಿ.ಮೀ. ಉದ್ದದ ಎತ್ತರಿಸಿದ ಗುಲಾಬಿ ಮಾರ್ಗದ ಉದ್ಘಾಟನೆಗೆ ದಿನಾಂಕ ನಿಗದಿಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಪತ್ರ ಬರೆದಿದ್ದರು. ಆದರೆ ಇದರ ಬೆನ್ನಲ್ಲೇ ದೋಷಗಳು ಕಂಡುಬಂದಿದ್ದು, ಅದನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ.
ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಈ ನೂತನ ಮಾರ್ಗದಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುನ್ನ ನಡೆಸಲಾಗುವ ಶಾಸನಬದ್ಧ ಸುರಕ್ಷತಾ ತಪಾಸಣೆಯ ವೇಳೆ ಸಿಎಮ್ಆರ್ಎಸ್ ಅಧಿಕಾರಿಗಳು ಕೆಲವು ತಾಂತ್ರಿಕ ಕೊರತೆಗಳನ್ನು ಪತ್ತೆಹಚ್ಚಿದ್ದು, ಬಿಎಂಆರ್ಸಿಎಲ್ ಅವುಗಳನ್ನು ಶೀಘ್ರದಲ್ಲೇ ಸರಿಪಡಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಅಕ್ಟೋಬರ್ 6 ರಿಂದ 8 ರವರೆಗೆ ದಕ್ಷಿಣ ವೃತ್ತದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಈ ಮಾರ್ಗದಲ್ಲಿ ಸಮಗ್ರ ಪರಿಶೀಲನೆ ನಡೆಸಿದ್ದರು. ತಪಾಸಣೆಯ ನಂತರ ಅಕ್ಟೋಬರ್ 9 ರಂದು ಬಿಎಂಆರ್ಸಿಎಲ್ಗೆ ಐದು ಪುಟಗಳ ವಿವರವಾದ ಪತ್ರ ಬರೆದಿರುವ ಆಯುಕ್ತರು, ಸಾರ್ವಜನಿಕ ಕಾರ್ಯಾಚರಣೆಗೆ ಅನುಮತಿ ನೀಡುವ ಮೊದಲು 36 ಪ್ರಮುಖ ಅಂಶಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ದಾಖಲೆಗಳು ಹಾಗೂ ಅನುಸರಣಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಮೆಟ್ರೋ ನಿಲ್ದಾಣಗಳಲ್ಲಿ ತುರ್ತು ಸ್ಥಳಾಂತರಿಸುವಿಕೆಯ ಸೂಚನಾ ಫಲಕಗಳು ಅಪೂರ್ಣವಾಗಿದ್ದು, ಲಿಫ್ಟ್ ಕಾರ್ಯಾಚರಣೆ ಹಾಗೂ ಅಗ್ನಿ ಸುರಕ್ಷತಾ ವ್ಯವಸ್ಥೆಯಲ್ಲಿ ಲೋಪಗಳು ಕಂಡುಬಂದಿವೆ.
ವಯಾಡಕ್ಟ್ ಅಂದರೆ ಎತ್ತರಿಸಿದ ಮಾರ್ಗದ ಉದ್ದಕ್ಕೂ ವಿದ್ಯುತ್ ಅರ್ಥಿಂಗ್ ಸಂಪರ್ಕಗಳಲ್ಲಿ ದೋಷಗಳು ಹಾಗೂ ಅರ್ಥ್ ಕಂಡಕ್ಟರ್ಗಳು ಹಾನಿಗೊಳಗಾಗಿರುವುದು ಪತ್ತೆಯಾಗಿದೆ.
ರೈಲು ಹಳಿಗಳ ಮೇಲ್ಭಾಗದಲ್ಲಿ ತುಕ್ಕು ಹಿಡಿದಿರುವುದು ಮತ್ತು ಕೆಲವು ತಾಂತ್ರಿಕ ದೋಷಗಳು ಕಂಡುಬಂದಿದ್ದು, ಇದಕ್ಕೆ ಮೂಲ ಉಪಕರಣ ತಯಾರಕರು ಹಾಗೂ ಬಿಎಂಆರ್ಸಿಎಲ್ ಜಂಟಿ ವರದಿ ನೀಡಬೇಕಾಗಿದೆ.
ವಾಣಿಜ್ಯ ಕಾರ್ಯಾಚರಣೆಗೆ ರೈಲು ಬೋಗಿಗಳು ಸಂಪೂರ್ಣವಾಗಿ ಸಿದ್ಧವಾಗಿವೆ ಎಂದು ನಿರೂಪಿಸುವ ಕೆಲವು ದಾಖಲೆಗಳಲ್ಲಿ ನ್ಯೂನತೆಗಳಿರುವುದು ಕಂಡುಬಂದಿದೆ.
ಆಯುಕ್ತರು ಎತ್ತಿರುವ ಈ ಪ್ರಶ್ನೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಯೊಬ್ಬರು, ಸಿಎಮ್ಆರ್ಎಸ್ ಗುರುತಿಸಿರುವ ಎಲ್ಲಾ 36 ದೋಷಗಳಿಗೆ ಒಂದೆರಡು ದಿನಗಳಲ್ಲೇ ಸೂಕ್ತ ಉತ್ತರ ಹಾಗೂ ಅಗತ್ಯ ಅನುಸರಣಾ ವರದಿಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಸುರಕ್ಷತಾ ದೃಢೀಕರಣ ಶೀಘ್ರದಲ್ಲೇ ಸಿಗುವ ಭರವಸೆ ಇರುವುದರಿಂದ, ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಾಣಿಜ್ಯ ಕಾರ್ಯಾಚರಣೆ ಆರಂಭಿಸಲು ಸೂಕ್ತ ಉದ್ಘಾಟನಾ ದಿನಾಂಕವನ್ನು ನಿಗದಿಪಡಿಸುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ. ಈ ನೂತನ ಮೆಟ್ರೋ ಮಾರ್ಗವನ್ನು ಲೋಕಾರ್ಪಣೆಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ರಾಜ್ಯ ಸರ್ಕಾರ ಅವರಿಗೆ ಪತ್ರ ಬರೆದಿದೆ.
ಕಾಳೇನ ಅಗ್ರಹಾರ ಮತ್ತು ತಾವರೆಕೆರೆ ನಡುವಿನ ಈ 7.5 ಕಿ.ಮೀ. ಮಾರ್ಗವು ಸಾರ್ವಜನಿಕರ ಬಳಕೆಗೆ ಮುಕ್ತವಾಗುತ್ತಿದ್ದಂತೆಯೇ, ಬೆಂಗಳೂರಿನ ನಮ್ಮ ಮೆಟ್ರೋ ಕಾರ್ಯಾಚರಣೆಯ ಒಟ್ಟು ಜಾಲವು 103.6 ಕಿ.ಮೀ. ಗೆ ವಿಸ್ತರಣೆಯಾಗಲಿದೆ. ಇದರೊಂದಿಗೆ ಬೆಂಗಳೂರು ಮೆಟ್ರೋ, ದೆಹಲಿ ಮೆಟ್ರೋ ನಂತರ ದೇಶದಲ್ಲೇ ಎರಡನೇ ಅತಿ ದೊಡ್ಡ ಕಾರ್ಯಾಚರಣೆಯ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.