
ಬೆಂಗಳೂರು (ನ.13): ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಹೊಸ ಗರಿ ಮೂಡಿದೆ. ಬಹುನಿರೀಕ್ಷಿತ 'ನಮ್ಮ ಮೆಟ್ರೋ' ಗುಲಾಬಿ ಮಾರ್ಗದಲ್ಲಿ (Pink Line) ರೈಲು ಸೇವೆಗಳು ಶನಿವಾರ, ನವೆಂಬರ್ 14ರಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯ (ಸುದ್ದಗುಂಟೆ ಪಾಳ್ಯ) ಮೆಟ್ರೋ ನಿಲ್ದಾಣಗಳ ನಡುವೆ ಈ ನೂತನ ಮಾರ್ಗದಲ್ಲಿ ರೈಲುಗಳು ಸಂಚರಿಸಲಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವಿವರವಾದ ವೇಳಾಪಟ್ಟಿಯನ್ನು ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿದೆ.
ಸೋಮವಾರ: ವಾರದ ಮೊದಲ ದಿನ ಕಚೇರಿ ಹಾಗೂ ಕಾಲೇಜಿಗೆ ತೆರಳುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಕಾಳೇನ ಅಗ್ರಹಾರದಿಂದ ಮುಂಜಾನೆ 4:55 ಗಂಟೆಗೆ ಹಾಗೂ ಎಸ್.ಜಿ. ಪಾಳ್ಯದಿಂದ ಬೆಳಗ್ಗೆ 5:00 ಗಂಟೆಗೆ ಮೊದಲ ರೈಲು ಸೇವೆ ಆರಂಭವಾಗಲಿದೆ.
ಮಂಗಳವಾರದಿಂದ ಶನಿವಾರದವರೆಗೆ: ಕಾಳೇನ ಅಗ್ರಹಾರ ಮತ್ತು ಎಸ್.ಜಿ. ಪಾಳ್ಯ ಎರಡೂ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 6:00 ಗಂಟೆಗೆ ರೈಲು ಸಂಚಾರ ಆರಂಭವಾಗಲಿದೆ.
ಭಾನುವಾರ: ಭಾನುವಾರದಂದು ಎರಡೂ ನಿಲ್ದಾಣಗಳಿಂದ ಬೆಳಿಗ್ಗೆ 7:00 ಗಂಟೆಯಿಂದ ರೈಲುಗಳು ಕಾರ್ಯಾಚರಣೆ ನಡೆಸಲಿವೆ.
ಪ್ರತಿದಿನ ರಾತ್ರಿ ಕಾಳೇನ ಅಗ್ರಹಾರ ನಿಲ್ದಾಣದಿಂದ 10:50 ಗಂಟೆಗೆ ಮತ್ತು ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣದಿಂದ ರಾತ್ರಿ 10:54 ಗಂಟೆಗೆ ಅಂತಿಮ ರೈಲು ಹೊರಡಲಿದೆ.
ಪೀಕ್ ಅವರ್ಸ್ (ದಟ್ಟಣೆಯ ಅವಧಿ): ಸೋಮವಾರದಿಂದ ಶುಕ್ರವಾರದವರೆಗೆ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಅವಧಿಯಲ್ಲಿ (Peak Hours) ಪ್ರತಿ 8 ನಿಮಿಷಗಳಿಗೊಮ್ಮೆ ರೈಲುಗಳು ಸಂಚರಿಸಲಿವೆ.
ಸಾಮಾನ್ಯ ಅವಧಿ (Off-Peak Hours): ಇತರ ಸಾಮಾನ್ಯ ಸಮಯದಲ್ಲಿ ಕಾಳೇನ ಅಗ್ರಹಾರ ಮತ್ತು ಎಸ್.ಜಿ. ಪಾಳ್ಯ ನಡುವೆ ಪ್ರತಿ 10 ನಿಮಿಷಕ್ಕೊಂದು ರೈಲು ಲಭ್ಯವಿರಲಿದೆ.
ವಾರಾಂತ್ಯ (ಶನಿವಾರ ಮತ್ತು ಭಾನುವಾರ): ವಾರಾಂತ್ಯದ ದಿನಗಳಲ್ಲಿ ದಿನವಿಡೀ ಪ್ರತಿ 10 ನಿಮಿಷಗಳಿಗೊಮ್ಮೆ ರೈಲು ಸೇವೆಗಳು ಕಾರ್ಯಾಚರಣೆ ನಡೆಸಲಿವೆ.
ಗಮನಿಸಿ: ಮುಂಬರುವ ದಿನಗಳಲ್ಲಿ ಪ್ರಯಾಣಿಕರ ಸಂಚಾರ ದಟ್ಟಣೆ ಮತ್ತು ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರೈಲು ಸೇವೆಗಳ ಆವರ್ತನವನ್ನು (Frequency) ಮತ್ತಷ್ಟು ಪರಿಷ್ಕರಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.