
ಬೆಂಗಳೂರು: ಸುಮಾರು ಎರಡು ದಶಕಗಳ ಹಿಂದೆ ರಾಜಧಾನಿಯ ಬೆಂಗಳೂರು ಆಟೋಗಳು (Bengaluru Autos) ಸರ್ಕಾರ ನಿಗಧಿಪಡಿಸಿದ ದರದಲ್ಲಿ ಆಟೋಗಳು ಸಾರ್ವಜನಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದವು. ಆದ್ರೆ ಇಂದು ಒಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರಿ ಅಪ್ಲಿಕೇಶನ್‌ಗಳ (Auto Application) ಸಹಾಯದಿಂದ ಜನರು ಮನೆಯಲ್ಲಿಯೇ ಕುಳಿತು ಆಟೋ, ಕಾರ್ ಬುಕ್ ಮಾಡುತ್ತಾರೆ. ಅಪ್ಲಿಕೇಶನ್‌ಗಳಲ್ಲಿ ತೋರಿಸಲಾಗುವ ದರ ಅತ್ಯಧಿಕ ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಆದ್ರೆ ಇನ್ಮುಂದೆ ಬೆಂಗಳೂರಿನಲ್ಲಿ ಮೀಟರ್ ಆಧಾರದ ಮೇಲೆ ಆಟೋಗಳು ಓಡಲಿವೆ ಎಂಬ ಮಾಹಿತಿಯನ್ನು ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (MP Tejasvi Surya) ನೀಡಿದ್ದಾರೆ.
ಇಂದು ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಬೆಂಗಳೂರಿನ ಆಟೋಗಳು ಮೀಟರ್ ಆಧಾರದಲ್ಲಿ ಓಡುತ್ತಿದ್ದ ಆ ಒಳ್ಳೆಯ ದಿನಗಳು ನೆನಪಿದೆಯೇ? ಎಂಬ ಸಾಲಿನೊಂದಿಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಮೀಟರ್ ದರದಲ್ಲಿ ಹೇಗೆ ಪ್ರಯಾಣಿಸಬೇಕು ಮತ್ತು ಜನರು ಈ ಆಟೋಗಳಲ್ಲಿ ಪ್ರಯಾಣಿಸೋದು ಹೇಗೆ ಎಂಬುದರ ಕುರಿತ ವಿಷಯವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಆಟೋಗಳು ಮೀಟರ್ ಆಧಾರದಲ್ಲಿ ಓಡುತ್ತಿದ್ದ ಆ ಒಳ್ಳೆಯ ದಿನಗಳು ನೆನಪಿದೆಯೇ? ನಗರ ಆಟೋ ಅದನ್ನು ಮತ್ತೆ ಜಾರಿಗೆ ತರುತ್ತಿದೆ. ಅವರ ಅಪ್ಲಿಕೇಶನ್‌ನೊಂದಿಗೆ, ನೀವು ಯಾವುದೇ ಅನಗತ್ಯ ವೆಚ್ಚ ಮತ್ತು ಕಮಿಷನ್ ಇಲ್ಲದೆ ಮೀಟರ್ ದರವನ್ನು ಮಾತ್ರ ವಿಧಿಸುವ ಆಟೋದಲ್ಲಿ ಪ್ರಯಾಣಿಸಬಹುದು. ಮೀಟರ್ ನ ದರವನ್ನು ನೀವು ನೇರವಾಗಿ ಚಾಲಕರಿಗೆ ಪಾವತಿಸುತ್ತೀರಿ. ಅವರ ಆಟೋ ಅನ್ನು ಗುರುತಿಸುವುದು ಕೂಡ ಸುಲಭ - ಪ್ರತಿ ಆಟೋ ಮೇಲೆ ವಿಶೇಷ ಮಾರ್ಕರ್ ಇದ್ದು, ಅವುಗಳನ್ನು ತಕ್ಷಣವೇ ಗುರುತಿಸುವುದೂ ಕೂಡ ಸುಲಭ.
ಯುವಕರಾದ ನಿರುಆರಾಧ್ಯನ್ ಮತ್ತು ಶಿವಣ್ಣ ಅವರ ಈ ಅದ್ಭುತ ಉಪಕ್ರಮವು, ಪ್ರಯಾಣಿಕರಿಗೆ ಮೆಟ್ರೋ ನಿಲ್ದಾಣಗಳಿಗೆ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸಲು ವಿಶೇಷವಾಗಿ ಮಹತ್ವದ್ದಾಗಿದ್ದು, ಅವರ ಪ್ರಯತ್ನಕ್ಕೆ ಶುಭಹಾರೈಕೆಗಳು ಎಂದು ತೇಜಸ್ವಿ ಸೂರ್ಯ ವಿಶ್ ಮಾಡಿದ್ದಾರೆ.
ನಗರದಲ್ಲಿ ಆಟೋರಿಕ್ಷಾ ಮೀಟರ್ ದರ ಪರಿಷ್ಕಣೆಯಾಗಿದೆ. ಮೊದಲ 2 ಕಿ.ಮೀ ಗೆ ಕನಿಷ್ಠ ದರ ಹಾಲಿ 30 ರು.ಗಳಿಂದ 36 ರು., ನಂತರದ ಪ್ರತಿ ಕಿ.ಮೀಗೆ ಹಾಲಿ 15 ರು.ಗಳಿಂದ 18 ರು.ಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಯುವಿಕೆ ದರವನ್ನು ಮೊದಲ 5 ನಿಮಿಷಕ್ಕೆ ಉಚಿತ ಮತ್ತು 5 ನಿಮಿಷದ ನಂತರದ ಪ್ರತಿ 15 ನಿಮಿಷದ ದರವನ್ನು 5 ರು.ನಿಂದ 10 ರು.ಗೆ, ಪ್ರಯಾಣಿಕರು 20 ಕೆಜಿ ಲಗೇಜನ್ನು ಯಾವುದೇ ಶುಲ್ಕವಿಲ್ಲದೆ ಆಟೋದಲ್ಲಿ ತೆಗೆದುಕೊಂಡು ಹೋಗಬಹುದಾಗಿದ್ದು, 20ರಿಂದ 50 ಕೆಜಿ ಲಗೇಜಿಗೆ ಪ್ರತಿ 20 ಕೆಜಿ ಲಗೇಜಿಗೆ 10 ರು.ನಂತೆ ಪಾವತಿಸಬೇಕು.
ಪರಿಷ್ಕೃತ ದರದ ಮೂಲ ಪಟ್ಟಿಯನ್ನು ಪ್ರತಿ ಆಟೋಗಳಲ್ಲಿಯೂ ಪ್ರದರ್ಶಿಸಬೇಕು ಹಾಗೂ ಅಕ್ಟೋಬರ್ 10ರೊಳಗೆ (90 ದಿನ) ಮೀಟರ್ ಅನ್ನು ಪರಿಷ್ಕೃತ ದರಕ್ಕೆ ನಿಗದಿ ಮಾಡಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಸೂಚಿಸಿದ್ದಾರೆ.