ಕಸ ಗುಡಿಸುತ್ತೇನೆ, ಕೇಸ್‌ ವಾಪಸ್‌ ಪಡೆಯಲ್ಲ ಎಂದ ಮುನಿರಾಜು : ಮುನಿರತ್ನಗೆ ಸಂಕಷ್ಟ

By Kannadaprabha NewsFirst Published Nov 15, 2019, 8:40 AM IST
Highlights

ಬಿಜೆಪಿ ಪರಾಜಿತ ಅಭ್ಯರ್ಥಿ ಪಿ.ಮುನಿರಾಜುಗೌಡ ಅವರನ್ನು ಮನವೊಲಿಸುವ ಪ್ರಯತ್ನ ಕಗ್ಗಂಟಾಗಿ ಪರಿಣಮಿಸಿದ್ದು, ಅನರ್ಹ ಶಾಸಕ ಮುನಿರತ್ನ ಬಿಜೆಪಿ ಸೇರಿದರು ಮುನಿರಾಜು ತಮ್ಮ ಪಟ್ಟು ಸಡಿಲಿಸುತ್ತಿಲ್ಲ. 

ಬೆಂಗಳೂರು [ನ.15]:  ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪರಾಜಿತ ಅಭ್ಯರ್ಥಿ ಪಿ.ಮುನಿರಾಜುಗೌಡ ಅವರನ್ನು ಮನವೊಲಿಸುವ ಪ್ರಯತ್ನ ಕಗ್ಗಂಟಾಗಿ ಪರಿಣಮಿಸಿದ್ದು, ಅನರ್ಹ ಶಾಸಕ ಮುನಿರತ್ನ ಅವರು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರೂ ಮುನಿರಾಜುಗೌಡ ಅವರು ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ.

ತಮಗೆ ನೀಡಿರುವ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ನಯವಾಗಿಯೇ ತಿರಸ್ಕರಿಸಿರುವ ಮುನಿರಾಜುಗೌಡ ಅವರು ನ್ಯಾಯಾಲಯದಲ್ಲಿರುವ ಮುನಿರತ್ನ ವಿರುದ್ಧದ ಪ್ರಕರಣವನ್ನು ವಾಪಸ್‌ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೇಕಾದರೆ ಪಕ್ಷದ ಕಚೇರಿಯಲ್ಲಿ ಕಸ ಗೂಡಿಸುತ್ತೇನೆ ಹೊರತು, ತಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪ್ರಕರಣ ನ್ಯಾಯಾಲಯದಲ್ಲೇ ಇತ್ಯರ್ಥಗೊಳ್ಳಲಿ. ನ್ಯಾಯಾಲಯದ ತೀರ್ಪು ಏನೇ ಬಂದರೂ ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ನಾನಾಗಿಯೇ ವಾಪಸ್‌ ಪಡೆಯುವುದಿಲ್ಲ ಎಂಬ ಮಾತನ್ನು ಮುನಿರಾಜುಗೌಡ ಅವರು ಪಕ್ಷದ ಹಿರಿಯ ನಾಯಕರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುನಿರತ್ನ ವಿರುದ್ಧದ ಹೈಕೋರ್ಟ್‌ನಲ್ಲಿರುವ ಪ್ರಕರಣ ಇತ್ಯರ್ಥಗೊಳ್ಳಬೇಕು ಅಥವಾ ವಾಪಸ್‌ ಪಡೆಯಬೇಕು. ಆಗ ಮಾತ್ರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಾರಿ ಸುಗಮವಾಗಲಿದೆ. ಆದರೆ, ಮುನಿರಾಜುಗೌಡ ಅವರ ಬಿಗಿ ನಿಲುವಿನಿಂದಾಗಿ ಮುನಿರತ್ನ ಅವರು ಬಿಜೆಪಿ ಸೇರಿದರೂ ಆತಂಕದಿಂದಲೇ ಓಡಾಡುತ್ತಿದ್ದಾರೆ. ಗುರುವಾರ ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಮುನಿರತ್ನ ಅವರು ಕಂದಾಯ ಸಚಿವ ಆರ್‌.ಅಶೋಕ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ನಂತರ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೂ ತೆರಳಿ ಇದೇ ವಿಷಯ ಕುರಿತು ಸಮಾಲೋಚನೆ ನಡೆಸಿದರು ಎಂದು ತಿಳಿದು ಬಂದಿದೆ.

ಬುಧವಾರ ಸುಪ್ರೀಂಕೋರ್ಟ್‌ ತೀರ್ಪಿನ ಬೆನ್ನಲ್ಲೇ ಮುನಿರಾಜುಗೌಡ ಅವರಿಗೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಆದೇಶ ಹೊರಬಿದ್ದಿತ್ತು. ಬಳಿಕ ಗುರುವಾರ ಈ ಬಗ್ಗೆ ಅಧಿಸೂಚನೆಯೂ ಹೊರಬಿತ್ತು. ಈ ಬಗ್ಗೆ ‘ ಮಾತನಾಡಿದ ಮುನಿರಾಜುಗೌಡ ಅವರು, ‘ಯಾವುದೇ ಕಾರಣಕ್ಕೂ ನಾನು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವುದಿಲ್ಲ. ನನಗೆ ಅದರ ಅಗತ್ಯವಿಲ್ಲ. ಅನರ್ಹ ಶಾಸಕ ಮುನಿರತ್ನ ವಿರುದ್ಧದ ಪ್ರಕರಣವನ್ನೂ ವಾಪಸ್‌ ಪಡೆಯುವುದಿಲ್ಲ. ಇದು ನನ್ನ ಸ್ಪಷ್ಟನಿಲುವು’ ಎಂದು ತಿಳಿಸಿದರು.

click me!