ಮುಡಾ ಪ್ರಕರಣ: ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ತಪರಾಕಿ! ತನಿಖೆಯ ವೈಖರಿಗೆ ತೀವ್ರ ಅಸಮಾಧಾನ

Kannadaprabha News   | Kannada Prabha
Published : Dec 19, 2025, 09:14 AM IST
MUDA Case Karnataka HC Slams Lokayukta Police Over Probe

ಸಾರಾಂಶ

ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧದ ಮುಡಾ ಅಕ್ರಮ ನಿವೇಶನ ಹಂಚಿಕೆ ಆರೋಪದ ತನಿಖೆ ವಿಳಂಬಿಸಿದ್ದಕ್ಕೆ ಲೋಕಾಯುಕ್ತ ಪೊಲೀಸರನ್ನು ವಿಶೇಷ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಅಂತಿಮ ವರದಿ ಸಲ್ಲಿಸಲು ವಿಫಲವಾದರೆ ಲಭ್ಯ ದಾಖಲೆಗಳ ಆಧಾರದ ಮೇಲೆ ಬಿ-ರಿಪೋರ್ಟ್ ಬಗ್ಗೆ ತೀರ್ಮಾನಿಸುವುದಾಗಿ ಎಚ್ಚರಿಕೆ 

ಬೆಂಗಳೂರು (ಡಿ.19): ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಟುಂಬದ ವಿರುದ್ಧದ ಮುಡಾ ಅಕ್ರಮ ನಿವೇಶನ ಹಂಚಿಕೆ ಆರೋಪದ ತನಿಖೆ ವಿಳಂಬವಾಗಿದ್ದಕ್ಕೆ ಮತ್ತು ಅಂತಿಮ ವರದಿ ಸಲ್ಲಿಸಿದಕ್ಕೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಡಿ.23ಕ್ಕೆ ವಿಚಾರಣೆ ಮುಂದೂಡಿದೆ.

ಪ್ರಕರಣದ ಸಂಬಂಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ-ರಿಪೋರ್ಟನ್ನು ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಈ ಹಿಂದೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಇತ್ತೀಚೆಗೆ ನಡೆಸಿದ್ದ ಕೋರ್ಟ್‌ ಡಿ.18ರೊಳಗೆ ಪ್ರಕರಣದ ಅಂತಿಮ ವರದಿ ಸಲ್ಲಿಸುವಂತೆ ಸೂಚಿತ್ತು. ಲೋಕಾಯುಕ್ತ ಪೊಲೀಸರು, ಪ್ರಕರಣದ ತನಿಖೆ ಅಂತಿಮ ಘಟಕದಲ್ಲಿ ಇದ್ದು, ಕೆಲವು ಅಧಿಕಾರಿಗಳ ವಿಚಾರಣೆಗೆ ಪ್ರಾಸಿಕ್ಯೂಷನ್‌ ಅನುಮತಿ ಬೇಕು ಹಾಗೂ ಇತರೆ ಕಾರಣಗಳಿಂದ ಅಂತಿಮ ವರದಿ ಸಲ್ಲಿಸಲು ಕಾಲಾವಕಾಶ ಬೇಕು ಎಂದು ಕೋರಿತು. ಇದಕ್ಕೆ ಲೋಕಾಯುಕ್ತ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಇನ್ನೆಷ್ಟು ಕಾಲಾವಕಾಶ ನೀಡಬೇಕು. ಒಂದು ವೇಳೆ ಅಂತಿಮ ವರದಿ ಸಲ್ಲಿಸಲು ವಿಫಲವಾದರೆ ಲಭ್ಯ ದಾಖಲೆಗಳ ಆಧಾರದಲ್ಲೇ ಸಿಎಂ ಸಿದ್ದರಾಮಯ್ಯ, ಪತ್ನಿ ಸೇರಿ ನಾಲ್ವರ ವಿರುದ್ಧ ಸಲ್ಲಿಸಲಾಗಿರುವ ಬಿ ರಿಪೋರ್ಟ್ ಬಗ್ಗೆ ತೀರ್ಮಾನಿಸುವುದಾಗಿ ಕೋರ್ಟ್ ಎಚ್ಚರಿಕೆ ನೀಡಿದೆ. ಅಲ್ಲದೆ, ಅಂತಿಮ ವರದಿ ಸಲ್ಲಿಸುವವರೆಗೆ ಬಿ ರಿಪೋರ್ಟ್ ಮೇಲಿನ ಆದೇಶವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಡಿ.23ಕ್ಕೆ ವಿಚಾರಣೆ ಮುಂದೂಡಿತ್ತು.

ಆರೋಪಪಟ್ಟಿ ಸಲ್ಲಿಸಲು ಸರ್ಕಾರದ ಅನುಮತಿ ಬೇಕಿದೆ ಹಾಗೂ ಮುಡಾ ಅಕ್ರಮಗಳ 11 ಘಟನೆಗಳ ಪೈಕಿ ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ವಿರುದ್ಧದ ಪ್ರಕರಣದ ತನಿಖೆ ಪೂರ್ಣಗೊಳಿಸಲಾಗಿದೆ. ಬಾಕಿ 10 ಘಟನೆಗಳ ತನಿಖೆ ನಡೆಯುತ್ತಿದೆ ಎಂದು ತಿಳಿಸಿ ಪ್ರಕರಣದ ವಸ್ತು ಸ್ಥಿತಿ ಬಗ್ಗೆ 19 ಪುಟಗಳ ಮಧ್ಯಂತರ ವರದಿಯನ್ನು ಸಲ್ಲಿಸಿದರು.

ಕೇಸ್ ಡೈರಿ ಸಲ್ಲಿಸಿ:

ಲೋಕಾಯುಕ್ತ ಪೊಲೀಸರ ತನಿಖೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನ್ಯಾಯಾಲಯ, ಪ್ರಕರಣದ ಇದುವರೆಗಿನ ಕೇಸ್‌ ಡೈರಿಯನ್ನು ಸಲ್ಲಿಸಬೇಕು ಹಾಗೂ ಮುಚ್ಚಿದ ಲಕೋಟೆಯಲ್ಲಿ ತನಿಖೆ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌, ಬಿ ರಿಪೋರ್ಟ್ ಬಗ್ಗೆ ಹೆಚ್ಚುವರಿ ತಕರಾರುಗಳಿದ್ದರೆ ಸಲ್ಲಿಸುವಂತೆ ಸ್ನೇಹಮಯಿ ಕೃಷ್ಣ ಹಾಗೂ ಜಾರಿ ನಿರ್ದೇಶನಾಲಯದ ಪರ ವಕೀಲರಿಗೆ ಸೂಚಿಸಿದರು. ವಿಶೇಷ ಸರ್ಕಾರಿ ಅಭಿಯೋಜಕರಾಗಿ ವೆಂಕಟೇಶ್‌ ಅರಬಟ್ಟಿ ವಾದ ಮಂಡಿಸಿದರು.

ತನಿಖಾಧಿಕಾರಿಗೆ ಶಿಕ್ಷೆ ಖಚಿತ:

ದೂರುದಾರ ಸ್ನೇಹಮಯಿ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಾಯುಕ್ತ ಅಧಿಕಾರಿಗಳು ಮತ್ತಷ್ಟು ತನಿಖೆಗೆ ಕಾಲಾವಕಾಶ ಕೇಳಿದ್ದಾರೆ. ಹೀಗಾಗಿ ನ್ಯಾಯಾಲಯ ವಿಚಾರಣೆ ಮುಂದೂಡಿದೆ ಎಂದು ವಿವರಿಸಿದರು.

ತನಿಖೆ ಬಾಕಿ ಇರುವಾಗಲೇ ಲೋಕಾಯುಕ್ತ ಪೊಲೀಸರು ನಾಲ್ಕು ಆರೋಪಿಗಳ ವಿರುದ್ಧ ಬಿ ರಿಪೋರ್ಟ್ ಹಾಕುವಂತಹ ಉದ್ದೇಶ ಏನಿತ್ತು? ತನಿಖಾಧಿಕಾರಿಗಳು ಕಾನೂನಿನ ಅರಿವಿಲ್ಲದೆ ನಡೆದುಕೊಳ್ಳುತ್ತಿದ್ದಾರೆ. ಈ ಪ್ರಕರಣದಲ್ಲಿ ಇರುವ ತನಿಖಾಧಿಕಾರಿಗೆ ಶಿಕ್ಷೆ ಖಚಿತವಾಗಿ ಆಗಲಿದೆ. ಸಿದ್ದರಾಮಯ್ಯ ಮತ್ತು ಕುಟುಂಬಕ್ಕೆ ಶಿಕ್ಷೆ ಕೊಡಿಸುತ್ತೇನೆ. ಕಳೆದ ವಿಚಾರಣೆ ವೇಳೆ ಲಿಖಿತ ದಾಖಲೆ ಸಲ್ಲಿಕೆ ಮಾಡಿದ್ದೇನೆ ಎಂದು ಹೇಳಿದರು.

PREV
Read more Articles on
click me!

Recommended Stories

Bengaluru: ಮನೆ ಬಳಿ ಆಟವಾಡ್ತಿದ್ದ ಬಾಲಕನಿಗೆ ಅಮಾನುಷವಾಗಿ ಕಾಲಿನಿಂದ ಒದ್ದ ಪಾಪಿ!
Glanders Disease Scare: ಮಾರಕ ರೋಗದ ಭೀತಿ, ರೇಸ್ ಕೋರ್ಸ್ ಸುತ್ತ ಕತ್ತೆ ಕುದುರೆ ಹೆಸರಗತ್ತೆ ಓಡಾಟಕ್ಕೆ ನಿರ್ಬಂಧ!