
ಬೆಂಗಳೂರು (ಡಿ.18) ಮಾಲೀಕನ ನಿರ್ಲಕ್ಷ್ಯ, ಕಾರ್ಮಿಕರ ತರಾತುರಿಯಲ್ಲಿ ಮುಗ್ದ ಜೀವವೊಂದು ಬಲಿಯಾದರೆ, ಇನ್ನಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಹೆಚ್‌ಎಎಲ್‌ನ ಚಿನ್ನಪ್ಪನಹಳ್ಳಿಯಲ್ಲಿ ನಡಿದೆದೆ. ನಿರ್ಮಾಣ ಹಂತದ ಕಟ್ಟದಿಂದ ಬಿದ್ದ ಇಟ್ಟಿ ಪಕ್ಕದಲ್ಲೇ ಇರುವ ಶೀಟಿನ ಮನೆ ಮೇಲೆ ಬಿದ್ದಿದೆ. ಮನೆಯೊಳಗಿದ್ದ ನಾಲ್ಕು ವರ್ಷದ ಮಗು ಮನಸ್ವಿ ಸ್ಥಳದಲ್ಲೆ ಮೃತಪಟ್ಟರೆ, ಇನ್ನಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಶೀಟ್ ಮನೆ ಮೇಲೆ 5ಕ್ಕೂ ಹೆಚ್ಚು ಹ್ಯಾಲೋ ಬ್ರಿಕ್ಸ್ ಬಿದ್ದ ಪರಿಣಾಮ ದುರಂತ ನಡೆದಿದೆ.
ಮಮತಾ ಹಾಗೂ ಶ್ರೀಶೈಲ್ ದಂಪತಿಯ ನಾಲ್ಕು ವರ್ಷದ ಮಗು ಮನಸ್ವಿ ಮೃತಪಟ್ಟಿದ್ದಾಳೆ. ವಿಜಯಪುರ ಮೂಲದ ದಂಪತಿ, ಬನಶಂಕರಿಯಲ್ಲಿ ವಾಸವಾಗಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಎರಡನೇ ಮಗುವಿನ ಬಾಣಂತನಕ್ಕೆ ತಾಯಿ ಮಮತಾ ಬಂದಿದ್ದ ತಾಯಿ ಮಮತಾ ಚಿನ್ನಪ್ಪನಹಳ್ಳಿಯ ಅಕ್ಕನ ಮನೆಗೆ ಬಂದಿದ್ದರು. ಇಂದು ಈ ಅವಘಡದಲ್ಲಿ ಮಮತಾ, ಶ್ರೀಶೈಲ್ ದಂಪತಿ ತಮ್ಮ ಮೊದಲ ಮಗುವನ್ನು ಕಳೆದುಕೊಂಡಿದ್ದಾರೆ. ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.
ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗಿತ್ತು. ನಾಲ್ಕನೇ ಮಹಡಿಯಿಂದ ನಾಲ್ಕೈದು ಇಟ್ಟಿಗೆಗಳು ಮಧ್ಯಾಹ್ನ 2.30ರ ಸುಮಾರಿಗೆ ಬಿದ್ದಿದೆ. ಶೀಟ್ ಮನೆಯಾಗಿದ್ದ ಕಾರಣ ಇಟ್ಟಿಗೆಗಳು ಶೀಟ್ ಒಡೆದು ಮನೆಯೊಳಗಿದ್ದ ಮಕ್ಕಳು ಹಾಗೂ ಮಹಿಳೆ ಮೇಲೆ ಬಿದ್ದಿದೆ. ಈ ಪೈಕಿ ಮನಸ್ವಿ ಸ್ಥಳದಲ್ಲೇ ಮೃತಪಟ್ಟರೆ,ಮಮತಾ ಅಕ್ಕನ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡ ಮೂವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಲೀಕ ಸುಬ್ಬಾರಾವ್ ಈ ಮನೆ ಕಟ್ಟಿಸುತ್ತಿದ್ದ. ಆದರೆ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ್ದಾನೆ. ಅಕ್ಕ ಪಕ್ಕದಲ್ಲೇ ಮನೆಗಳಿದ್ದರೂ ಯಾವುದೇ ಮುಂಜಾಗ್ರತೆ, ಸುರಕ್ಷತಾ ಕ್ರಮ ಕೈಗೊಳ್ಳದೆ ಕಾಮಗಾರಿ ನಡೆಸಿದ್ದಾರೆ. ಇತ್ತ ಕಾರ್ಮಿಕರು ತರಾತುರಿಯಲ್ಲಿ ಕೆಲಸ ಮಾಡಿದ್ದಾರೆ. ಇಷ್ಟೇ ಅಲ್ಲ ಸುರಕ್ಷತೆ ಕುರಿತು ನಿರ್ಲಕ್ಷ್ಯವಹಿಸಿದ್ದಾರೆ. ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಗದಗದಲ್ಲಿ ಶಾಲಾ ಬಸ್ ಚಾಲನಕ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟ ಘಟನೆ ನೆಡೆದಿದೆ. ಗದಗದ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ಘಟನೆ ನಡೆದಿದೆ. ಶಿಗ್ಲಿ ಗ್ರಾಮದಲ್ಲಿ ಲಿಟಲ್ ಹಾಟ್ಸ್ ಸ್ಕೂಲ್ ನಲ್ಲಿ ಎಲ್ ಕೆ ಜಿ ವಿದ್ಯಾರ್ಥಿ ಪ್ರಥಮ್ ಲಮಾಣಿ ಮೃತಪಟ್ಟಿದ್ದಾನೆ.ಶಾಲಾ ಬಸ್ ನ ಹಿಂದಿನ ಬಾಗಿಲಿನಿಂದ ಮಗು ಬಿದ್ದು ಮೃತಪಟ್ಟಿದೆ. ಮಗು ಸಾವನ್ನಪ್ಪುತ್ತಿದ್ದಂತೆ ಚಾಲಕ ಹಾಗೂ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶಾಲಾ ಚಾಲಕ ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.