
ಬೆಂಗಳೂರು: ವಿಧಾನಪರಿಷತ್ ಸದಸ್ಯ ಬಿ.ಎಸ್. ಶಿವಣ್ಣ (ಮಳವಳ್ಳಿ ಶಿವಣ್ಣ) ಅವರು ತಮ್ಮ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ರದ್ದುಪಡಿಸುವಂತೆ ಕೋರಿ ಮಾಜಿ ಸಚಿವ ಎಚ್.ವಿಶ್ವನಾಥ್ ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಇಬ್ಬರೂ ಸಲ್ಲಿಸಿದ್ದ ಅರ್ಜಿಗಳು ನ್ಯಾಯಮೂರ್ತಿ ಅನಂತ ರಮಾನಾಥ್ ಹೆಗಡೆ ಅವರ ಪೀಠ ಗುರುವಾರ ವಿಚಾರಣೆಗೆ ಬಂದಿದ್ದವು. ಅರ್ಜಿದಾರರ ಪರ ವಕೀಲರು ವಿಚಾರಣೆಗೆ ಗುರುವಾರ ಪುನಃ ಗೈರು ಹಾಜರಾಗಿದ್ದರು. ಪ್ರತಿವಾದಿ ಬಿ.ಎಸ್. ಶಿವಣ್ಣ ಪರ ವಕೀಲ ಶತಾಭಿಷ್ ಶಿವಣ್ಣ ವಾದ ಮಂಡಿಸಿದ್ದರು.
ಅದನ್ನು ಪರಿಗಣಿಸಿದ ಪೀಠ, ಪ್ರತಿವಾದಿ ಪರ ವಕೀಲರು ಪ್ರಕರಣದಲ್ಲಿ ವಾದ ಮಂಡಿಸಲು ಸಿದ್ದರಿದ್ದಾರೆ. ಆದರೆ, ಅರ್ಜಿದಾರರ ಪರ ವಕೀಲರು ಸತತ ಗೈರುಹಾಜರಾಗಿದ್ದಾರೆ. ಮುಂದಿನ ವಿಚಾರಣೆ ವೇಳೆ ಹಾಜರಾಗದಿದ್ದರೆ ಅರ್ಜಿ ವಜಾಗೊಳಿಸಲಾಗುವುದು ಎಂದು ಸೆ.25ರಂದೇ ಸೂಚಿಸಿ ವಿಚಾರಣೆಯನ್ನು ಅ.1ಕ್ಕೆ ಮುಂದೂಡಲಾಗಿತ್ತು. ಆದರೆ, ಅರ್ಜಿದಾರರ ಪರ ವಕೀಲರು ಪುನಃ ಗೈರು ಹಾಜರಾಗಿದ್ದಾರೆ. ಆದ್ದರಿಂದ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಪೀಠ ಹೇಳಿದೆ.
ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕಾರ ಮಾಡುವ ವೇದಿಕೆಯಲ್ಲಿ ಸಿದ್ದರಾಮಯ್ಯನವರ ಜೊತೆ ಬಿ.ಎಸ್. ಶಿವಣ್ಣ ಇದ್ದರು. ಅದನ್ನು ಆಕ್ಷೇಪಿಸಿದ್ದ ಎಚ್.ವಿಶ್ವನಾಥ್, ಕ್ರಿಮಿನಲ್ ಹಿನ್ನೆಲೆ ವ್ಯಕ್ತಿ ಪ್ರಮಾಣ ವಚನ ಸ್ವೀಕಾರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದರು. ಅಲ್ಲದೆ ಈ ವಿಚಾರವಾಗಿ ವಿಶ್ವನಾಥ್ ಮತ್ತು ಮಂಜುನಾಥ್ ಅವರು ರಾಜ್ಯಪಾಲರಿಗೆ ಪತ್ರ ಸಹ ಬರೆದಿದ್ದರು. ಇದರ ವಿರುದ್ಧ ಶಿವಣ್ಣ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು.