ಮೇಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಚತುಷ್ಪಥ ಎಲಿವೇಟೆಡ್ ಕಾರಿಡಾರ್ ನಿರ್ಮಾಣ, ನಾಳೆಯಿಂದ 18 ತಿಂಗಳು ಬಳ್ಳಾರಿ ರಸ್ತೆ ಬಂದ್‌!

Published : Nov 05, 2026, 07:07 PM IST
Bengaluru Mehkri Circle to Hebbal Elevated Corridor

ಸಾರಾಂಶ

ಬೆಂಗಳೂರಿನ ಮೆಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಬಿಡಿಎ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ನಡೆಯಲಿದೆ. ಇದರಿಂದಾಗಿ ಬಳ್ಳಾರಿ ರಸ್ತೆಯಲ್ಲಿ ಮುಂದಿನ 18 ತಿಂಗಳ ಕಾಲ ಭಾರಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಬೆಂಗಳೂರು (ನ.5): ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Airport Road) ಸಂಪರ್ಕ ಕಲ್ಪಿಸುವ ಪ್ರಮುಖ ಬಳ್ಳಾರಿ ರಸ್ತೆಯಲ್ಲಿ (Bellary Road) ಸಂಚರಿಸುವ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಮುಂದಿನ ಒಂದೂವರೆ ವರ್ಷಗಳ ಕಾಲ (18 ತಿಂಗಳು) ಭಾರಿ ಟ್ರಾಫಿಕ್ ಬಿಸಿ ತಟ್ಟಲಿದೆ. ಮೆಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ನಾಲ್ಕು ಪಥದ ಬೃಹತ್ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ನವೆಂಬರ್ 6 ರಿಂದ ಜಾರಿಗೆ ಬರುವಂತೆ ಬಳ್ಳಾರಿ ರಸ್ತೆಯಲ್ಲಿ ಭಾರಿ ಸಂಚಾರ ಮಾರ್ಗ ಬದಲಾವಣೆಗಳನ್ನು ಮಾಡಲಾಗಿದೆ.

ಬಳ್ಳಾರಿ ರಸ್ತೆಯ ಯುಎಎಸ್ (UAS) ಸ್ಟಾಫ್ ಕ್ವಾರ್ಟರ್ಸ್‌ನಿಂದ ಮೆಖ್ರಿ ಸರ್ಕಲ್‌ವರೆಗೆ ನಾಲ್ಕು ಪಥದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿಯು ಮುಂದಿನ 18 ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ. ಕಾಮಗಾರಿಯ ಹಿನ್ನೆಲೆಯಲ್ಲಿ ಮೆಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗಿನ ಪ್ರಮುಖ ರಸ್ತೆಯನ್ನು (Main Road) ಸಂಪೂರ್ಣವಾಗಿ ಮುಚ್ಚಲಾಗುತ್ತಿದ್ದು, ಕೇವಲ ಸರ್ವಿಸ್ ರಸ್ತೆಯಲ್ಲಿ ಮಾತ್ರವೇ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಬಸ್‌ಗಳು ಹಾಗೂ ಸರಕು ವಾಹನಗಳಿಗೆ ಸಂಪೂರ್ಣ ನಿರ್ಬಂಧ

ಕಾಮಗಾರಿ ಸ್ಥಳದಲ್ಲಿ ಭಾರಿ ವಾಹನ ದಟ್ಟಣೆಯನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳು, ಖಾಸಗಿ ಪ್ರಯಾಣಿಕರ ಬಸ್‌ಗಳು ಹಾಗೂ ಎಲ್ಲಾ ಮಾದರಿಯ ಗೂಡ್ಸ್ / ಸರಕು ಸಾಗಣೆ ವಾಹನಗಳ (Goods Vehicles) ಸಂಚಾರವನ್ನು ಮುಂದಿನ 18 ತಿಂಗಳ ಕಾಲ ಬಳ್ಳಾರಿ ರಸ್ತೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸಂಚಾರಿ ಪೊಲೀಸರು ಪ್ರಕಟಿಸಿರುವ ನೂತನ ಪರ್ಯಾಯ ಮಾರ್ಗಗಳು (Alternative Routes)

ವಿಮಾನ ನಿಲ್ದಾಣ, ನಗರದ ಕೇಂದ್ರ ಭಾಗ ಹಾಗೂ ಯಶವಂತಪುರ ಕಡೆಯಿಂದ ಸಂಚರಿಸುವ ವಾಹನ ಸವಾರರಿಗಾಗಿ ಸಂಚಾರಿ ಪೊಲೀಸರು ಸೂಚಿಸಿರುವ ಬದಲಿ ಮಾರ್ಗಗಳ ವಿವರ ಇಲ್ಲಿದೆ

ನಗರದ ಕೇಂದ್ರ ಭಾಗದಿಂದ ವಿಮಾನ ನಿಲ್ದಾಣದ (Airport) ಕಡೆಗೆ ತೆರಳುವವರಿಗೆ:

ಹೆಬ್ಬಾಳ ಮೂಲಕ ಏರ್‌ಪೋರ್ಟ್‌ಗೆ ತೆರಳುವ ವಾಹನಗಳು: ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್ ➔ ಕಲ್ಪನಾ ಜಂಕ್ಷನ್ ➔ ಓಲ್ಡ್ ಉದಯ ಟಿವಿ ಜಂಕ್ಷನ್ ➔ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ➔ ಟ್ಯಾನರಿ ರಸ್ತೆ ➔ ನಾಗವಾರ ರಸ್ತೆ ಮಾರ್ಗವಾಗಿ ರಿಂಗ್ ರೋಡ್ ತಲುಪಿ ವಿಮಾನ ನಿಲ್ದಾಣಕ್ಕೆ ಸಂಚರಿಸಬೇಕು.

ಯಶವಂತಪುರದಿಂದ ವಿಮಾನ ನಿಲ್ದಾಣದ ಕಡೆಗೆ ತೆರಳುವವರಿಗೆ

ಯಶವಂತಪುರ ಭಾಗದಿಂದ ಬರುವ ವಾಹನಗಳು: ಮತ್ತಿಕೆರೆ ರಸ್ತೆ ➔ ಬಿಇಎಲ್ (BEL) ವೃತ್ತದಲ್ಲಿ ಬಲಕ್ಕೆ ತಿರುವು ➔ ಹೆಬ್ಬಾಳ/ನಾಗವಾರ ರಿಂಗ್ ರೋಡ್ ಮೂಲಕ ಸಂಚರಿಸಬೇಕು.

ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ (City Centre) ಬರುವವರಿಗೆ

ಮಾರ್ಗ 1: ವಿಮಾನ ನಿಲ್ದಾಣದಿಂದ ಬರುವ ವಾಹನಗಳು ಹೆಬ್ಬಾಳದಲ್ಲಿ ಎಡಕ್ಕೆ ತಿರುಗಿ ➔ ನಾಗವಾರ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ➔ ಬಂಬುಬಜಾರ್ ➔ ಕ್ವೀನ್ಸ್ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬಹುದು.

ಮಾರ್ಗ 2: ಹೆಬ್ಬಾಳದಲ್ಲಿ ಬಲಕ್ಕೆ ತಿರುಗಿ ➔ ಹೆಬ್ಬಾಳ್ ರಿಂಗ್ ರಸ್ತೆ ➔ ಕುವೆಂಪು ಸರ್ಕಲ್ ➔ ಗೊರಗುಂಟೆಪಾಳ್ಯ ಜಂಕ್ಷನ್ ➔ ಡಾ. ರಾಜ್‌ಕುಮಾರ್ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬಹುದು.

ಯಶವಂತಪುರದಿಂದ ನಗರದ ಕೇಂದ್ರ ಭಾಗಕ್ಕೆ ಬರುವ ವಾಹನಗಳಿಗೆ

ಯಶವಂತಪುರ ಕಡೆಯಿಂದ ಬರುವ ವಾಹನಗಳು: ಬಿಎಚ್‌ಇಎಲ್ (BHEL) ಜಂಕ್ಷನ್ ➔ ಮಾರಮ್ಮ ಸರ್ಕಲ್ ಬಳಿ ಬಲಕ್ಕೆ ತಿರುವು ➔ ಮಾರ್ಗೋಸಾ ರಸ್ತೆ ಮೂಲಕ ನಗರದ ಕೇಂದ್ರ ಭಾಗವನ್ನು ತಲುಪಬಹುದು.

ಹೆಬ್ಬಾಳದಿಂದ ನಗರದ ಕಡೆಗೆ ಬರುವ ಸಾಮಾನ್ಯ ವಾಹನಗಳಿಗೆ

ಹೆಬ್ಬಾಳ ಫ್ಲೈಓವರ್ ಇಳಿದ ಬಳಿಕ ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆಗೆ ತೆರಳಿ ➔ ಸಿಬಿಐ (CBI) ಜಂಕ್ಷನ್ ಮೂಲಕ ಮರಳಿ ಬಳ್ಳಾರಿ ಮುಖ್ಯ ರಸ್ತೆಗೆ ಸಂಪರ್ಕ ಪಡೆಯಬಹುದು.

ಹೆಬ್ಬಾಳದಿಂದ ಆನಂದನಗರ, ಆರ್.ಟಿ. ನಗರ ಮತ್ತು ಜಯಮಹಲ್ ಕಡೆಗೆ ತೆರಳುವವರಿಗೆ:

ಹೆಬ್ಬಾಳದಿಂದ ಬರುವವರು: ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆ ➔ ಆನಂದನಗರ ಕ್ರಾಸ್ ➔ ಸಿಬಿಐ ಜಂಕ್ಷನ್ ಮೂಲಕ ಆನಂದನಗರ ಮುಖ್ಯ ರಸ್ತೆಯನ್ನು ತಲುಪಬೇಕು.

ವಾಹನ ಸವಾರರಲ್ಲಿ ಸಂಚಾರಿ ಪೋಲಿಸರ ಮನವಿ

ಮುಂದಿನ 18 ತಿಂಗಳುಗಳ ಕಾಲ ಏರ್‌ಪೋರ್ಟ್ ರಸ್ತೆಯಲ್ಲಿ ಭಾರಿ ಕಾಮಗಾರಿ ನಡೆಯುತ್ತಿರುವುದರಿಂದ, ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಕನಿಷ್ಠ 1 ರಿಂದ 2 ಗಂಟೆಗಳ ಮುಂಚಿತವಾಗಿ ಹೊರಡುವುದು ಸೂಕ್ತ. ಟ್ರಾಫಿಕ್ ಅಡಚಣೆಯನ್ನು ತಪ್ಪಿಸಲು ಸಂಚಾರಿ ಪೊಲೀಸರು ಪ್ರಕಟಿಸಿರುವ ಪರ್ಯಾಯ ಮಾರ್ಗಗಳನ್ನೇ ಬಳಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

PREV
Read more Articles on
click me!

Recommended Stories

ಬೆಂಗಳೂರು ರೇಸ್ ಕೋರ್ಸ್ ಕುಣಿಗಲ್‌ಗೆ ಸ್ಥಳಾಂತರ ಊಫಿ: ಟರ್ಫ್ ಕ್ಲಬ್‌ ಗುತ್ತಿಗೆ 30 ವರ್ಷ ವಿಸ್ತರಣೆ!
ಬೆಂಗಳೂರು ಪ್ರವಾಸಿಗರಿಗೆ ಸಿಹಿಸುದ್ದಿ: ದೀಪಾವಳಿ ನಿಮಿತ್ತ ಮಂಗಳವಾರವೂ ಬನ್ನೇರುಘಟ್ಟ ಜೈವಿಕ ಉದ್ಯಾನವನ ಓಪನ್!