ಬೆಂಗಳೂರು ದಕ್ಷಿಣ ಪಾಲಿಕೆಯಿಂದ ಪಿಯು ಸಾಧಕ ವಿದ್ಯಾರ್ಥಿಗಳಿಗೆ ₹35,000 ಪ್ರೋತ್ಸಾಹ ಧನ!

Published : Nov 05, 2026, 04:10 PM IST
Bengaluru south corporation KN Ramesh

ಸಾರಾಂಶ

ಉತ್ತರಹಳ್ಳಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಆರು ವಿದ್ಯಾರ್ಥಿಗಳನ್ನು ಜಿಬಿಎ ಆಯುಕ್ತರು ಸನ್ಮಾನಿಸಿದರು. ಈ ಸಾಧಕ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ತಲಾ 35,000 ರೂ. ಪ್ರೋತ್ಸಾಹಧನ ವಿತರಿಸಲಾಯಿತು.

ಬೆಂಗಳೂರು (ನ.05): ಇತಿಹಾಸದಲ್ಲಿ ದೊಡ್ಡ ಸಾಧನೆ ಮಾಡಿದ ಗಣ್ಯರೆಲ್ಲರೂ ಕಷ್ಟ, ನೋವು ಮತ್ತು ಬಡತನದ ಹಾದಿಯಲ್ಲೇ ಬೆಳೆದು ಬಂದವರು. ಸರ್ಕಾರಿ ಹಾಗೂ ಪಾಲಿಕೆ ಶಾಲೆ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳನ್ನು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಮಾಡಿಸುವುದೇ ನಿಜವಾದ ದೊಡ್ಡ ಸಾಧನೆ" ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ಪ್ರತಿಪಾದಿಸಿದರು.

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಉತ್ತರಹಳ್ಳಿ ಪದವಿ ಪೂರ್ವ ಕಾಲೇಜಿನಲ್ಲಿ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ (Distinction) ತೇರ್ಗಡೆಯಾಗಿ ಕಾಲೇಜಿಗೆ ಕೀರ್ತಿ ತಂದ ಆರು ಮಂದಿ ಸಾಧಕ ವಿದ್ಯಾರ್ಥಿಗಳಿಗೆ ಆಯುಕ್ತರು ಇಂದು ನೆರವೇರಿದ ವಿಶೇಷ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ತಲಾ 35,000 ರೂ. ಪ್ರೋತ್ಸಾಹಧನ ವಿತರಣೆ

ಸಾಧಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಹಾಗೂ ಭವಿಷ್ಯದ ವಿದ್ಯಾಭ್ಯಾಸಕ್ಕೆ ನೆರವಾಗುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ತಲಾ 35,000 ರೂಪಾಯಿ ಮೊತ್ತದ ಪ್ರೋತ್ಸಾಹ ಧನದ ಚೆಕ್‌ಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಾಯಿತು.

ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರ:

ವಾಣಿಜ್ಯ ವಿಭಾಗ (Commerce):

ಪುನೀತ್ ಆರ್. – 94%

ಸಂಜನಾ ಎಸ್. – 93.5%

ಅಪೂರ್ವ ಪಿ. – 90.6%

ಮೈತ್ರಿ ಎನ್. – 89.8%

ವಿನಯ್ ಕುಮಾರ್ ಹೆಚ್. ಎಂ. – 88.5%

ವಿಜ್ಞಾನ ವಿಭಾಗ (Science):

ಆರ್. ಶೃತಿ – 86.6%

ಶಿಕ್ಷಕರಿಗೆ ಆಯುಕ್ತರ ಮಾರ್ಗದರ್ಶಿ ಕಿವಿಮಾತು

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆಯುಕ್ತ ಕೆ.ಎನ್. ರಮೇಶ್ ಅವರು, 'ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಯಾವುದೇ ರೀತಿಯ ಕೀಳರಿಮೆ ಮೂಡದಂತೆ ಸದಾ ಪ್ರೇರೇಪಿಸಬೇಕು. ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಅವರು ಭವಿಷ್ಯದಲ್ಲಿ ಅತ್ಯುನ್ನತ ಸ್ಥಾನಕ್ಕೇರುತ್ತಾರೆ. ಎಷ್ಟೇ ದೊಡ್ಡ ಹುದ್ದೆಗೇರಿದರೂ ಪ್ರತಿಯೊಬ್ಬ ವಿದ್ಯಾರ್ಥಿಯೂ ತನಗೆ ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ವಿದ್ಯಾದಾನ ಮಾಡಿದ ಶಿಕ್ಷಕರನ್ನು ಎಂದಿಗೂ ಮರೆಯುವುದಿಲ್ಲ. ಕಾಲೇಜಿನಲ್ಲಿ ಪ್ರತಿ ವರ್ಷವೂ ಇಂತಹ ಗುಣಮಟ್ಟದ ಫಲಿತಾಂಶ ಮುಂದುವರಿಯಬೇಕು' ಎಂದು ಆಶಿಸಿದರು.

ಸ್ವಾವಲಂಬನೆಯೇ ಶಿಕ್ಷಣಕ್ಕೆ ನಿಜವಾದ ಮೌಲ್ಯ:

ಅಪರ ಆಯುಕ್ತರಾದ ಡಾ. ನವೀನ್ ಕುಮಾರ್ ರಾಜು ಮಾತನಾಡಿ, "ವಿದ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಮಾಡಿ ಸ್ವಂತ ಕಾಲ ಮೇಲೆ ನಿಂತು, ಸಮಾಜದಲ್ಲಿ ಗೌರವಯುತ ಸ್ಥಾನ ಗಳಿಸಿದಾಗ ಮಾತ್ರ ಅವರ ಸಾಧನೆಗೆ ನಿಜವಾದ ಮೌಲ್ಯ ಸಿಗುತ್ತದೆ. ಬಡ ಕುಟುಂಬಗಳಿಂದ ಬಂದ ಪ್ರತಿಭೆಗಳನ್ನು ಗುರುತಿಸಿ, ತಿದ್ದಿ ತೀಡಿ ಇಷ್ಟು ದೊಡ್ಡ ಮಟ್ಟದ ಸಾಧನೆಗೆ ರೂಪಿಸಿದ ಕಾಲೇಜಿನ ಉಪನ್ಯಾಸಕರ ಶ್ರಮ ಅತ್ಯಂತ ಶ್ಲಾಘನೀಯ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪನ್ಯಾಸಕರು ಹಾಗೂ ಪಾಲಿಕೆಗೆ ಪೋಷಕರ ಹೃತ್ಪೂರ್ವಕ ನಮನ

ಮಕ್ಕಳ ಸನ್ಮಾನದ ಕುರಿತು ಮಾತನಾಡಿದ ವಿದ್ಯಾರ್ಥಿಗಳ ಪೋಷಕರು, 'ನಮ್ಮ ಕುಟುಂಬದ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ ಕಾಲೇಜಿನ ವಾತಾವರಣ ಮತ್ತು ಉಪನ್ಯಾಸಕರ ವೈಯಕ್ತಿಕ ಕಾಳಜಿಯೇ ಈ ಯಶಸ್ಸಿಗೆ ಕಾರಣ. ಪಾಲಿಕೆಯಿಂದ ಸಿಕ್ಕ ಈ 35,000 ರೂ. ಪ್ರೋತ್ಸಾಹಧನವು ಮಕ್ಕಳ ಮುಂದಿನ ಉನ್ನತ ವ್ಯಾಸಂಗ ಮುಂದುವರಿಸಲು ದೊಡ್ಡ ಆಸರೆಯಾಗಿದೆ' ಎಂದು ಕೃತಜ್ಞತೆ ಸಲ್ಲಿಸಿದರು.

ಈ ಸಮಾರಂಭದಲ್ಲಿ ಅಪರ ಆಯುಕ್ತರಾದ ಶ್ರೀ ಎಂ. ರಾಚಪ್ಪ, ಜಿಬಿಎ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಭುವನೇಶ್ವರಿ, ಕಾಲೇಜಿನ ಪ್ರಾಂಶುಪಾಲರಾದ ಸರಸ್ವತಿ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಬೆಂಗಳೂರು ಪ್ರವಾಸಿಗರಿಗೆ ಸಿಹಿಸುದ್ದಿ: ದೀಪಾವಳಿ ನಿಮಿತ್ತ ಮಂಗಳವಾರವೂ ಬನ್ನೇರುಘಟ್ಟ ಜೈವಿಕ ಉದ್ಯಾನವನ ಓಪನ್!
ಹಾಕಿ ತಂಡದ ಮಾಜಿ ನಾಯಕ ಎಂಎಂ ಸೋಮಯ್ಯ ಅವರ ಬೆಂಗಳೂರಿನ ಮನೆಗೆ ಕನ್ನ: ಒಲಿಂಪಿಕ್ಸ್‌ ಪದಕ ದೋಚಿದ ಕಳ್ಳರು