
ಬೆಂಗಳೂರು: ದೇವಾಲಯದ ಮುಂದೆ ಪೂಜೆ ಮಾಡಿಸಲು ಹೊಸ ಬಿಎಂಡಬ್ಲ್ಯು ಕಾರು ನಿಲುಗಡೆ ವಿಚಾರವಾಗಿ ಯಲಹಂಕ ಕ್ಷೇತ್ರದ ಕಾಂಗ್ರೆಸ್ ನಾಯಕನ ಕುಟುಂಬದವರು ಹಾಗೂ ಸ್ಥಳೀಯರು ಮಧ್ಯೆ ಗಲಾಟೆ ನಡೆದಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಚ್‌ಎಂ ಲೇಔಟ್‌ನ ದುರ್ಗಾ ಪರಮೇಶ್ವರಿ ದೇವಾಲಯ ಸಮೀಪ ಈ ಘರ್ಷಣೆ ನಡೆದಿದ್ದು, ಈ ಸಂಬಂಧ ಯಲಹಂಕ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕೇಶವ ರಾಜಣ್ಣ ಅವರ ಅಳಿಯನ ಕಾರು ಚಾಲಕ ವಿನೋದ್ ಸೇರಿ 12 ಮಂದಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ಬಳಿಕ ಬಂಧಮುಕ್ತರಾಗಿದ್ದಾರೆ.
ಹೊಸ ಬಿಎಂಡಬ್ಲ್ಯು ಕಾರು ಖರೀದಿಸಿದ್ದ ರಾಜಣ್ಣ ಅಳಿಯ ಅಭಿಷೇಕ್ ಅವರು, ತಮ್ಮ ಕುಟುಂಬದ ಜತೆ ಶುಕ್ರವಾರ ರಾತ್ರಿ 8.30 ರ ಸುಮಾರಿಗೆ ಕಾರು ಪೂಜೆಗೆ ದೇವಾಲಯಕ್ಕೆ ಬಂದಿದ್ದರು. ಆಗ ದೇವಾಲಯ ಪಕ್ಕದ ಶ್ರೀನಾಥ್ ಎಂಬುವರ ಮನೆ ಮುಂದೆ ಅಭಿಷೇಕ್ ಜತೆ ಬಂದಿದ್ದ ಅವರ ಸಂಬಂಧಿಕರ ಎರಡು ಕಾರುಗಳು ನಿಂತಿದ್ದವು.
ಅದೇ ವೇಳೆ ಹೊರ ಹೋಗಿದ್ದ ಶ್ರೀನಾಥ್ ಅವರು, ಇನ್ನೋವಾದಲ್ಲಿ ಮನೆಗೆ ಮರಳಿದ್ದಾರೆ. ಆಗ ತಮ್ಮ ಮನೆ ಮುಂದೆ ನಿಂತಿದ್ದ ಕಾರುಗಳನ್ನು ತೆಗೆಯುವಂತೆ ಕೇಶವ ರಾಜಣ್ಣ ಅವರ ಕಿರಿಯ ಪುತ್ರಿಗೆ ಏರಿದ ದನಿಯಲ್ಲಿ ಶ್ರೀನಾಥ್ ಸೂಚಿಸಿದ್ದಾರೆ. ಆಗ ಅಲ್ಲೇ ಇದ್ದ ಅಭಿಷೇಕ್ ಅವರ ಕಾರು ಚಾಲಕ ವಿನೋದ್, ಪೂಜೆ ಮುಗಿದ ಕೂಡಲೇ ತೆಗೆಯುತ್ತೇವೆ ಎಂದಿದ್ದಾನೆ. ಈ ಮಾತಿಗೆ ಒಪ್ಪದ ಶ್ರೀನಾಥ್, ನಮ್ಮ ಮನೆ ಮುಂದೆ ಯಾಕೆ ನಿಲ್ಲಿಸಿದ್ದೀಯಾ. ನಮಗೆ ಓಡಾಡಲು ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಈ ಹಂತದಲ್ಲಿ ವಿನೋದ್ ಹಾಗೂ ಶ್ರೀನಾಥ್ ಮಧ್ಯೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಶ್ರೀನಾಥ್‌ಗೆ ಮುಷ್ಟಿಯಿಂದ ವಿನೋದ್ ಗುದ್ದಿದ್ದಾನೆ. ಅಷ್ಟರಲ್ಲಿ ಈ ಕಿತ್ತಾಟದ ಶಬ್ದ ಕೇಳಿ ದೇವಾಲಯದಿಂದ ಕೇಶವ ರಾಜಣ್ಣ ಕುಟುಂಬದವರು ಹೊರ ಬಂದಿದ್ದಾರೆ. ಈ ಹಲ್ಲೆಯಿಂದ ಕೋಪಗೊಂಡ ಶ್ರೀನಾಥ್, ತಮ್ಮ ನೆರೆಹೊರೆಯವರನ್ನು ಕೂಗಿದ್ದಾರೆ. ಆಗ ರಕ್ಷಣೆಗೆ ಧಾವಿಸಿದ ಸ್ಥಳೀಯರು, ಕೇಶವ ರಾಜಣ್ಣ ಕುಟುಂಬದವರ ಮೇಲೆ ಗಲಾಟೆ ಮಾಡಿದ್ದಾರೆ. ಅಷ್ಟರಲ್ಲಿ ಈ ಘರ್ಷಣೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ನಂತರ ಕೇಶವ ರಾಜಣ್ಣ ಕುಟುಂಬದ ನಾಲ್ವರು ಹಾಗೂ ಶ್ರೀನಾಥ್ ಸೇರಿ ಎಂಟು ಮಂದಿ ಸ್ಥಳೀಯರನ್ನು ವಶಕ್ಕೆ ಪಡೆದು ಠಾಣೆ ಕರೆದೊಯ್ದಿದ್ದಾರೆ. ನಂತರ ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.