
ಬೆಂಗಳೂರು (ಡಿ.30) ಹೊಸ ವರ್ಷ ಸಂಭ್ರಮಾಚರಣೆ ಜೋರಾಗುತ್ತಿದೆ. ಹಲೆವೆಡೆ ಈಗಿನಿಂದಲೇ ಸಂಭ್ರಮ ಶುರುವಾಗಿದೆ. ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ನಾಳೆ (ಡಿ.31) ಅದ್ಧೂರಿ ತಯಾರಿಗಳು ನಡೆಯುತ್ತಿದೆ. ಈ ಪೈಕಿ ಬೆಂಗಳೂರಿನ ಹಲವೆಡೆ ಹೊಸ ವರ್ಷದ ಸಂಭ್ರಮಾಚರಣೆ ಭರ್ಜರಿಯಾಗಿ ನಡೆಯಲಿದೆ. ಪ್ರತಿ ವರ್ಷದಂತೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಸೇರಿದಂತೆ ಹಲೆವೆಡೆ ಸಂಭ್ರಮ ಜೋರಾಗಲಿದೆ. ಹೀಗಾಗಿ ಬೆಂಗಳೂರಿನ ಎಲ್ಲಾ ಕಡೆ ಭಾರಿ ಭದ್ರತೆ ನಿಯೋಜನೆ ಮಾಡಲಾಗಿದೆ. ಎಂಜಿ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಜನ ಸೇರುವ ಕಾರಣ ಭಾರಿ ಬಂದೋಬಸ್ತ್ ಮಾಡಲಾಗಿದೆ. ಇದೇ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಎಲ್ಲಾ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಾಳೆ ರಾತ್ರಿ ಹೊಸ ವರ್ಷ ಸಂಭ್ರಮಾಚರಣೆಗೆ ಗರಿಷ್ಠ ಸಮಯ ನಿಗದಿ ಮಾಡಲಾಗಿದೆ.
ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ರಾತ್ರಿ ಒಂದು ಗಂಟೆ ವರೆಗೆ ಮಾತ್ರ. ಸಮಯ ಮೀರುವುದಕ್ಕೆ ಅವಕಾಶವೇ ಇಲ್ಲ. 12 ಗಂಟೆಗೆ ಹೊಸ ವರ್ಷವನ್ನು ಬರಮಾಡಿಕೊಂಡು 1 ಗಂಟೆ ವೇಳೆಗೆ ಎಲ್ಲವೂ ಬಂದ್ ಆಗಬೇಕು. ಸಂಭ್ರಮಾಚರಣೆ ಸಂಪೂರ್ಣ ನಿಂತು ಜನರು ತೆರಳಬೇಕು. ಒಂದು ಗಂಟೆ ಬಳಿಕ ಒಂದು ನಿಮಿಷವೂ ಅವಕಾಶವಿಲ್ಲ ಎಂದಿದ್ದಾರೆ.
ಎಲ್ಲೆಡೆ ಪೊಲೀಸ್ ನಿಯೋಜನೆ ಮಾಡಲಾಗಿದೆ. ಮಫ್ತಿಯಲ್ಲೂ ಪೊಲೀಸರ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲಾಗಿದೆ. ಇದೇ ವೇಳೆ ಯಾರೂ ನಿಯಮ ಉಲ್ಲಂಘನೆ ಮಾಡಬಾರದು ಎಂದು ಸೂಚನೆ ನೀಡಿದ್ದಾರೆ. ಯಾವುದಾದರೂ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಸಿಸಿಟಿವಿ ಬ್ಯಾರಿಕೇಟ್ ಅಳವಡಿಕೆ ಎಲ್ಲವನ್ನು ತಯಾರಿ ಮಾಡಲಾಗಿದೆ.
ಅಂತಿಮ ಹಂತದ ಪರಿಶೀಲನೆಯಲ್ಲಿ ಎಲ್ಲವನ್ನ ಗಮನಿಸಿದ್ದೇನೆ. ಪ್ರಮುಖ ಪ್ರದೇಶಗಳ ದೃಶ್ಯಗಳು ಕಮಿಷನರ್ ಕಚೇರಿಯಲ್ಲೂ ಪರಿಶೀಲನೆ ಮಾಡಲು ಸಾಧ್ಯವಿದೆ. ಎಂಜಿ ರಸ್ತೆ ಮಾತ್ರವಲ್ಲದೇ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೋರಮಂಗಲ,ಇಂದಿರಾನಗರ,ನೀಲಸಂದ್ರ ರಸ್ತೆ ಗಳಲ್ಲೂ ಭದ್ರತೆ ಕೈಗೊಳ್ಳಲಾಗಿದೆ. ಕ್ರೌಡ್ ,ಫ್ಲೈ ಓವರ್ ಬಂದ್,ಟ್ರಾಫಿಕ್ ಎಲ್ಲದಕ್ಕೆ ಸಂಬಂಧಿಸಿದ ಸೂಚನೆ ನೀಡಲಾಗಿದೆ ಎಂದು ಸೀಮಂತ್ ಕುಮಾರ್ ಹೇಳಿದ್ದಾರೆ.