
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರಿನ ಎಲ್ಲ ರಸ್ತೆ, ಕಚೇರಿಗಳಲ್ಲೂ ಜಿಬಿಎ ಎಂದು ಬರೆಯಲಾಗುತ್ತಿದ್ದು, ಬೆಂಗಳೂರು ಎಂಬ ಅಸಲಿ ಹೆಸರೇ ಮಾಯವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕರ್ನಾಟಕ ವಿಕಾಸ ರಂಗ, ಗ್ರೆಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಬದಲಿಗೆ ಬೃಹತ್ ಬೆಂಗಳೂರು ಪ್ರಾಧಿಕಾರ ಎಂದು ಮರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬದಲಿಗೆ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಅಸ್ತಿತ್ವಕ್ಕೆ ಬಂದ ನಂತರ ಕನ್ನಡಿಗರ ಹೆಮ್ಮೆಯ ರಾಜಧಾನಿ, ಉದ್ಯಾನ ನಗರಿ ಬೆಂಗಳೂರು ಮಹಾನಗರದ ಮೂಲ ಹೆಸರೇ ಮಾಯವಾಗುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಬೆಂಗಳೂರು ಎಂಬ ಮೂಲ ಹೆಸರು ನಾಪತ್ತೆಯಾಗಲಿದೆ.
ವಿದೇಶಿಗರು, ಹೊರ ರಾಜ್ಯದವರೇ ತುಂಬಿಕೊಳ್ಳುತ್ತಿರುವ ಬೆಂಗಳೂರು ಮಹಾನಗರ ಜಿಬಿಎ ಕನ್ವರ್ಟ್ (ಬದಲಾಗುವ) ಆಗಿಬಿಡುವ ಸಾಧ್ಯತೆಯೇ ಹೆಚ್ಚಿದೆ. ಹೀಗಾದರೆ ಕೆಂಪೇಗೌಡರು ಕಟ್ಟಿದ ಬೆಂಗಳೂರು ಮಹಾನಗರದ ಗತಿಯೇನು ಎಂದು ಸಂಘದ ಅಧ್ಯಕ್ಷ ವ.ಚ.ಚನ್ನೇಗೌಡ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗ್ರೆಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಬದಲಿಗೆ ಬೃಹತ್ ಬೆಂಗಳೂರು ಪ್ರಾಧಿಕಾರ ಎಂದು ಮರು ನಾಮಕರಣ ಮಾಡಬೇಕು. ಗ್ರೇಟರ್ ಬದಲು ಬೃಹತ್ ಎಂಬ ಕನ್ನಡ ಪದವನ್ನೇ ಪ್ರಧಾನವಾಗಿ ಬಳಸಬೇಕು. ಈ ಕುರಿತು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಕರ್ನಾಟಕ ವಿಕಾಸರಂಗದಿಂದ ಮನವಿ ಸಲ್ಲಿಸಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳುರು: ಬಾಣಸವಾಡಿ ಮೇಲ್ಸೇತುವೆ ನಿರ್ಮಾಣ ಭೂಸ್ವಾಧೀನ ಪ್ರಕ್ರಿಯೆ ಆರಂಭ; ಬೆಸ್ಕಾಂ ಕಚೇರಿ ಸ್ಥಳಾಂತರ: ಮುಂದೇನು ಆಗುತ್ತೆ?