
ಬೆಂಗಳೂರು: ಮಾರುತಿ ಸೇವಾ ನಗರ, ಬೈಯಪ್ಪನಹಳ್ಳಿ ರೈಲು ನಿಲ್ದಾಣ, ಕಮ್ಮನಹಳ್ಳಿ ಹಾಗೂ ಬಾಣಸವಾಡಿ ಸಂಪರ್ಕಿಸುವ ಮೇಲ್ಸೇತುವೆ ಕಾಮಗಾರಿ ಅನುಮೋದನೆಗೊಂಡಿದ್ದು, ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ನಡೆಸುವಂತೆ ಉತ್ತರಪಾಲಿಕೆ ಆಯುಕ್ತ ಪೊಮ್ಮುಲ ಸುನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಪಾಲಿಕೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಅವರು ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಪುಲಿಕೇಶಿನಗರದ ಮಸೀದಿ ಜಂಕ್ಷನ್ ಸಮೀಪ ರಸ್ತೆ ಸ್ವಚ್ಛತಾ ಕಾರ್ಯ ಸರಿಯಾಗಿ ನಡೆಯದಿರುವ ಕುರಿತು ಪರಿಶೀಲಿಸಿದ ಆಯುಕ್ತರು, ಮೂರು ದಿನಗಳ ಒಳಗೆ ಮೈಕ್ರೋ ಪ್ಲಾನಿಂಗ್ ಸಿದ್ಧಪಡಿಸಿ, ನಿರಂತರ ಅನುಸರಿಸಿ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ಕೈಗೊಳ್ಳುವಂತೆ ಸೂಚಿಸಿದರು.
ಸ್ಥಳೀಯ ನಿವಾಸಿಗಳು ಹಾಗೂ ಹಿರಿಯ ನಾಗರಿಕರೊಂದಿಗೆ ಸಭೆ ನಡೆಸಿದ ಆಯುಕ್ತರು, ಹಚ್ಚಿನ್ಸ್ ರಸ್ತೆ, ವೀಲರ್ಸ್ ಬಡಾವಣೆ ರಸ್ತೆಗಳಲ್ಲಿ ಚರಂಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ಚಾರ್ಲ್ಸ್ ಶಾಲೆ ಸಮೀಪದ ಅಂಡರ್‌ಪಾಸ್ ಅಗಲೀಕರಣಕ್ಕಾಗಿ ಸರ್ವಜ್ಞನಗರದ ಶಾಸಕರೂ ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರ ಚರ್ಚಿಸಿ ಅಭಿಪ್ರಾಯ ಪಡೆದು, ಕೆ-ರೈಡ್ ಸಂಸ್ಥೆಯೊಂದಿಗೆ ಚರ್ಚಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ವಜ್ಞನಗರದ ಇಇ ಅವರಿಗೆ ಸೂಚಿಸಿದರು. ಈ ಸಮಯದಲ್ಲಿ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಕಾರ್ಯಪಾಲಕ ಎಂಜಿನಿಯರ್ ಹಾಜರಿದ್ದರು.
ಕೆಂಗೇರಿ: ಬೆಸ್ಕಾಂನ ಕೆ-4 ವಿಭಾಗದ ಕೆಂಗೇರಿ ಸ್ಯಾಟಲೈಟ್ ಟೌನ್ ಕಾರ್ಯ ಮತ್ತು ಪಾಲನ ಶಾಖಾ ಘಟಕವನ್ನು ಸ್ಥಳಾಂತರ ಮಾಡದಂತೆ ಇಂಧನ ಸಚಿವರಿಗೆ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಮನವಿ ಮಾಡಿದ್ದಾರೆ. ಈ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಪತ್ರ ಬರೆದಿರುವ ಶಾಸಕರು, ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಸ್ಕಾಂ ಕೆಂಗೇರಿ ಉಪನಗರದ ಕಚೇರಿಗೆ ಸುಮಾರು 5 ಕಿ.ಮೀ ವ್ಯಾಪ್ತಿ ಒಳಪಡುತ್ತದೆ.
32847ಕ್ಕೂ ಹೆಚ್ಚು ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಈ ಘಟಕದಿಂದ ಗ್ರಾಹಕರಿಗೆ ವಿದ್ಯುತ್ ಅಡಚಣೆ ಉಂಟಾದಾಗ ಶೀಘ್ರ ದುರಸ್ತಿ ಮಾಡಲು ಅನುಕೂಲವಾಗುತ್ತದೆ. ಮಳೆ, ಗಾಳಿಯಂತಹ ಸಂದರ್ಭದಲ್ಲಿ ಉಂಟಾಗುವ ವಿದ್ಯುತ್ ಅಡಚಣೆ ವೇಳೆ ಶೀಘ್ರ ಘಟಕದ ಕಚೇರಿಗೆ ಧಾವಿಸಿ ದೂರು ನೀಡಲು ಕೆಂಗೇರಿ ಉಪನಗರದ ಐದನೇ ಮುಖ್ಯ ರಸ್ತೆ ಕಚೇರಿ ಎಲ್ಲರಿಗೂ ಅನುಕೂಲಕರವಾಗಿದೆ. ಹೀಗಾಗಿ ಇದನ್ನು ಸಾರ್ವಜನಿಕರು, ಗ್ರಾಹಕರ ಹಿತದೃಷ್ಟಿಯಿಂದ ಸ್ಥಳಾಂತರಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ.