
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನೆ ಹುಡುಕುವುದು ದಿನದಿಂದ ದಿನಕ್ಕೆ ದೊಡ್ಡ ಸವಾಲಾಗಿದೆ. ಮನೆ ಬಾಡಿಗೆ ಮತ್ತು ಸೆಕ್ಯೂರಿಟಿ ಡೆಪಾಸಿಟ್ ದರಗಳು ದುಪ್ಪಾಟ್ಟಾಗಿವೆ. ಇದಕ್ಕೆ ಬಾಡಿಗೆದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗಿದ್ದು, ಅದು ಹಲವು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.
ಇಲ್ಲಿ, ಆಫೀಸ್‌ಗೆ ಹತ್ತಿರದಲ್ಲಿದೆ ಎಂಬ ಒಂದೇ ಕಾರಣಕ್ಕೆ 2BHK ಮನೆಗೆ ತಿಂಗಳಿಗೆ ಸುಮಾರು 70,000 ರೂಪಾಯಿ ಬಾಡಿಗೆ ಕೇಳಿದ್ದಾನೆ ಮಾಲೀಕ. ಅಲ್ಲದೇ 3 ರಿಂದ 4 ಲಕ್ಷ ರೂಪಾಯಿ ಸೆಕ್ಯೂರಿಟಿ ಡೆಪಾಸಿಟ್ ಕೇಳಿದ್ದಾನೆ. ಆದರೆ ಇಷ್ಟೊಂದು ಹಣ ನೀಡಿದರೂ ಮನೆಯಲ್ಲಿ ಕನಿಷ್ಠ ಸೌಲಭ್ಯಗಳೂ ಇರಲಿಲ್ಲ ಎಂಬುದು ಬಾಡಿಗೆದಾರರ ದೂರು.
ಮನೆಯನ್ನು ಫುಲ್ಲಿ ಫರ್ನಿಷ್ಟ್ ಎಂದು ಜಾಹೀರಾತು ನೀಡಿದ್ದರು. ಒಳಗಡೆ ಹೋದಾಗ ಫ್ರಿಡ್ಜ್.. ವಾಷಿಂಗ್ ಮೆಷಿನ್, ಡೈನಿಂಗ್ ಟೇಬಲ್ ಇರಲಿಲ್ಲ. ಎರಡನೇ ರೂಮ್‌ನಲ್ಲಿ ಮಲಗಲು ಮಂಚವೂ ಇರಲಿಲ್ಲ. ನನ್ನ ಪ್ರಕಾರ ಇದಕ್ಕಿಂತ ಉತ್ತಮವಾದ ಸೌಲಭ್ಯಗಳು ಬ್ರ್ಯಾಂಡೆಡ್ ಪಿಜಿಗಳಲ್ಲಿ (PG) ಸಿಗುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮನೆ ಮಾಲೀಕರು ವರ್ಷಕ್ಕೆ ಶೇಕಡಾ 7 ರಿಂದ 8 ರಷ್ಟು ಬಾಡಿಗೆ ಹೆಚ್ಚಳ ಮಾಡುವ ಷರತ್ತು ವಿಧಿಸಿದ್ದಾರೆಂತೆ. ಇತರರು ಶೇಕಡಾ 10 ರಷ್ಟು ಕೇಳುತ್ತಾರೆ. ನಾನೇ ನಿಮಗೆ ಕಡಿಮೆ ಹಣ ಕೇಳುತ್ತಿದ್ದೇನೆ ಎಂದು ಮಾಲೀಕ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.
70,000 ರೂಪಾಯಿ ಬಾಡಿಗೆ ನೀಡುತ್ತಿದ್ದೇವೆ ಎಂದರೆ ಅರಮನೆಯನ್ನೇನೂ ನಿರೀಕ್ಷಿಸುವುದಿಲ್ಲ. ನೀಡುವ ಹಣಕ್ಕೆ ತಕ್ಕಂತೆ ವ್ಯವಸ್ಥೆಗಳು ಇರಬೇಕು. ವಿಶಾಲವಾದ ಕೊಠಡಿಗಳು ಮತ್ತು ಮೂಲ ಸೌಲಭ್ಯಗಳು ಇರಬೇಕು. ನಾನು 65,000 ಬಾಡಿಗೆ ಮತ್ತು 3 ತಿಂಗಳ ಡೆಪಾಸಿಟ್ ನೀಡಲು ಒಪ್ಪಿದೆ. ಆದರೆ ಮಾಲೀಕರು ಒಪ್ಪಲಿಲ್ಲ. ಹಾಗಾಗಿ ನಾನು ಆ ಒಪ್ಪಂದವನ್ನು ಅಲ್ಲಿಗೆ ಬಿಟ್ಟು ಯಾವುದೇ ಪಶ್ಚಾತ್ತಾಪವಿಲ್ಲದೆ ಹೊರಬಂದೆ ಎಂದಿದ್ದಾರೆ.
ಮಾಲೀಕರು ಬಾಯಿಗೆ ಬಂದಹಾಗೆ ಬಾಡಿಗೆ, ಡೆಪಾಸಿಟ್ ಕೇಳೋದು ಕಾಮನ್ ಆಗಿ ಬಿಟ್ಟಿದೆ. ಅವರು ಕೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿದರೆ ಅಷ್ಟೇ. ಸುಮ್ಮನೇ ಹಣ ವ್ಯರ್ಥ ಮಾಡುತ್ತ ಕೂರೋದು ಬದಲು ಭವಿಷ್ಯದ ನಿಧಿಗೆ ಹಣವನ್ನು ಬಳಸಿಕೊಳ್ಳಬಹುದಾಗಿದೆ. ಹಾಗಾಗಿ ಮನೆಗೆ ಬಾಡಿಗೆ ಹೆಚ್ಚು ಕೊಡೋದ್ರಲ್ಲಿ ಯಾವುದೇ ಅರ್ಥವಿಲ್ಲ. ನೀವು ಪ್ರೀಮಿಯಂ ಬಾಡಿಗೆ ಪಾವತಿಸುತ್ತಿದ್ದರೆ, ಪ್ರೀಮಿಯಂ ಸೌಲಭ್ಯಗಳನ್ನು ಕೇಳಿ ಪಡೆಯಿರಿ. ಬಾಡಿಗೆ ಮಾರುಕಟ್ಟೆಯಲ್ಲಿ ಹಣ ಪೋಲು ಮಾಡುವುದನ್ನು ನಿಲ್ಲಿಸಿ. ಮನೆ ಒಂದೆಲ್ಲ ಒಂದು ಕಡೆ ಸಿಕ್ಕೇ ಸಿಗುತ್ತದೆ. ಅಲ್ಲಿಂದ ಮೊದಲು ಜಾಗ ಖಾಲಿ ಮಾಡಿ ಅಷ್ಟೇ.