ದೂರು ಕೊಟ್ಟವಳ ವರಿಸಲು ವ್ಯಕ್ತಿಗೆ ಪೊಲೀಸ್‌ ಬೆದರಿಕೆ, ಹೈಕೋರ್ಟ್‌ ಕೆಂಡಾಮಂಡಲ

Published : Apr 20, 2026, 07:08 AM IST
Karnataka High court

ಸಾರಾಂಶ

ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ ಆರೋಪದ ಪ್ರಕರಣದಲ್ಲಿ, ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದರೂ ಆರೋಪಿಗೆ ಕಿರುಕುಳ ನೀಡಿದ ದೂರುದಾರೆ ಮತ್ತು ಪೊಲೀಸ್ ಅಧಿಕಾರಿಗೆ ನ್ಯಾಯಾಲಯವು ತೀವ್ರ ಎಚ್ಚರಿಕೆ ನೀಡಿದೆ. ಕಿರುಕುಳ ಮುಂದುವರಿದರೆ ಇಬ್ಬರನ್ನೂ ಬಂಧಿಸಲು ಆದೇಶಿಸಬೇಕಾಗುತ್ತದೆ ಎಂದಿದೆ.

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು (ಏ.20): ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪದಲ್ಲಿ ದೂರುದಾರೆಯನ್ನು ವಿವಾಹವಾಗುವಂತೆ ಆರೋಪಿಗೆ ಬೆದರಿಕೆ ಹಾಕಿದ ಪೊಲೀಸ್‌ ಅಧಿಕಾರಿ ಮತ್ತು ದೂರುದಾರೆಯನ್ನೇ ಬಂಧಿಸಲು ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ಎಚ್ಚರಿಕೆ ನೀಡಿದೆ. ಪ್ರಕರಣದ ಸಂಬಂಧ ತನ್ನ ವಿರುದ್ಧ ಮಹಿಳೆ ದಾಖಲಿಸಿರುವ ದೂರು ರದ್ದು ಕೋರಿ ಬೆಂಗಳೂರಿನ ಬೇಗೂರಿನ ವೈಭವ್‌ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶ ಮಾಡಿದೆ.

ದೂರುದಾರೆಯನ್ನು ಮದುವೆಯಾಗುವಂತೆ ಅರ್ಜಿದಾರನಿಗೆ ಬಲವಂತ ಮಾಡಿ ಕಿರುಕುಳ ನೀಡಿದ ಬಗ್ಗೆ ಮಂಗಳವಾರ ಮಧ್ಯಾಹ್ನ 2.30ಕ್ಕೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ವಿವರಣೆ ನೀಡಬೇಕು. ಈ ಕುರಿತ ಆರೋಪ ನಿಜವಾಗಿದ್ದರೆ, ಏಕೆ ನಿಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶಿಸಬಾರದು ಎಂಬುದಕ್ಕೆ ಕಾರಣ ತೋರಿಸಬೇಕು ಎಂದು ಸೂರ್ಯನಗರ ಪೊಲೀಸ್ ಠಾಣಾ ಅಧಿಕಾರಿ ಸಂಜೀವ್‌ ಮಹಾಜನ್‌ಗೆ ನ್ಯಾಯಪೀಠ ತಾಕೀತು ಮಾಡಿದೆ.

ಮಹಿಳೆಯೊಬ್ಬರು ಅರ್ಜಿದಾರನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 69 ಅಡಿಯಲ್ಲಿ ಕಳೆದ ಫೆ.16ರಂದು ದಾಖಲಿಸಿದ ದೂರು ಆಧರಿಸಿ ಬೊಮ್ಮನಹಳ್ಳಿ ಠಾಣಾ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಅದರ ರದ್ದತಿ ಕೋರಿ ಅರ್ಜಿದಾರ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಮಾ.10ರಂದು ವಿಚಾರಣೆಗೆ ಬಂದಾಗ ಅರ್ಜಿದಾರ ಪರ ವಕೀಲ ಡಿ.ಮೋಹನ್‌ ಕುಮಾರ್, ದೂರುದಾರೆಯೊಂದಿಗೆ ಅರ್ಜಿದಾರ ಸಂಬಂಧ ಹೊಂದಿದ್ದರು. ಆದರೆ, ದೂರುದಾರೆ ಮೊದಲೇ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದರು. ವಿಚ್ಛೇದನಕ್ಕೆ ಅರ್ಜಿ ಸಹ ಸಲ್ಲಿಸಿದ್ದಾರೆ. ವಿಚ್ಛೇದನ ಪಡೆಯುವ ಹಂತದಲ್ಲಿದ್ದಾಗ ಅರ್ಜಿದಾರ ದೂರುದಾರೆಯೊಂದಿಗೆ ಸಂಬಂಧ ಬೆಳೆಸಿದ್ದಾರೆ. ಹೀಗಿದ್ದರೂ ದೂರುದಾರೆ, ಅರ್ಜಿದಾರನ ವಿರುದ್ಧ ಮದುವೆಯಾಗುವುದಾಗಿ ವಂಚಿಸಿದ ಕೇಸು ದಾಖಲಿಸಿದ್ದಾರೆ ಎಂದು ನ್ಯಾಯಾಲಕ್ಕೆ ವಿವರಿಸಿದರು.

ಈ ವಾದ ಪರಿಗಣಿಸಿದ್ದ ಹೈಕೋರ್ಟ್‌, ‘ದೂರುದಾರರು ಈಗಾಗಲೇ ವಿವಾಹಿತರಾಗಿದ್ದರೆ, ಅರ್ಜಿದಾರರು ಮದುವೆಯ ಭರವಸೆಗಾಗಿ ಅಪರಾಧ ನಡೆಸಿದ್ದಾರೆ ಎಂಬುದನ್ನು ಸಮರ್ಥಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯ ಪಟ್ಟು ಅರ್ಜಿದಾರನ ವಿರುದ್ಧದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿತ್ತು.

ಪೊಲೀಸರಿಂದಲೇ ಬೆದರಿಕೆ

ಅರ್ಜಿಯು ಮತ್ತೆ ಏ.18ರಂದು ವಿಚಾರಣೆಗೆ ಬಂದಾಗ ಅರ್ಜಿದಾರ ಪರ ವಕೀಲ ಡಿ.ಮೋಹನ್‌ ಕುಮಾರ್‌ ಹಾಜರಾಗಿ, ಅರ್ಜಿದಾರನ ವಿರುದ್ಧದ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ ನಂತರವೂ ಸಂತ್ರಸ್ತೆ ಅರ್ಜಿದಾರನ ಮನೆಗೆ ಬಂದು ಗಲಾಟೆ ಮಾಡುತ್ತಿದ್ದಾರೆ. ಈ ಕುರಿತು ಅರ್ಜಿದಾರ ಸೂರ್ಯನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಆದರೆ, ಸಂತ್ರಸ್ತೆ ವಿರುದ್ಧ ಕ್ರಮ ಜರುಗಿಸದೆ ಸೂರ್ಯನಗರ ಠಾಣೆಯ ಪೊಲೀಸ್‌ ಅಧಿಕಾರಿ ಸಂಜೀವ್‌ ಮಹಾಜನ್‌, ಸಂತ್ರಸ್ತೆಯನ್ನು ಮದುವೆಯಾಗು. ಕೋರ್ಟ್‌ಗೆ ದಾಖಲಿಸಿರುವ ಅರ್ಜಿ ವಾಪಸ್‌ ಪಡೆದುಕೊ. ನಿನ್ನ ದೂರಿನ ಸಂಬಂಧ ಎಫ್‌ಐಆರ್‌ ದಾಖಲಿಸುವುದಿಲ್ಲ. 20, 30 ಲಕ್ಷ ರು. ಕೊಡು ಎಂದು ಒತ್ತಾಯಿಸಿ ಅರ್ಜಿದಾರನಿಗೆ ಬೆದರಿಕೆ ಹಾಕಿದ್ದಾರೆ. ಸಂತ್ರಸ್ತೆಯಿಂದ ರಕ್ಷಣೆ ಕೋರಿ ಪೊಲೀಸ್‌ ಇಲಾಖೆಯ ತುರ್ತು ಸಹಾಯವಾಣಿ ಸಂಖ್ಯೆ 112ಗೆ ಅರ್ಜಿದಾರರು 110 ಬಾರಿ ಕರೆ ಮಾಡಿದರೂ ರಕ್ಷಣೆ ಕೊಟ್ಟಿಲ್ಲ. ಸಂತ್ರಸ್ತೆ ಗಲಾಟೆ ಮಾಡಿ ಅರ್ಜಿದಾರ ತಾಯಿಯ ಕೈ-ಭುಜ ಕಚ್ಚಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಇದರಿಂದ ಕೆರಳಿದ ನ್ಯಾಯಪೀಠ, ‘ಅರ್ಜಿದಾರರ ಮತ್ತು ದೂರುದಾರೆ ನಡುವೆ ಒಪ್ಪಿತ ಸಂಬಂಧವಿದೆ ಎನ್ನಲಾಗಿದೆ. ಅರ್ಜಿದಾರನ ಪರ ಈ ನ್ಯಾಯಾಲಯವು ಮಧ್ಯಂತರ ಆದೇಶ ಮಾಡಿದ್ದರೂ, ದೂರುದಾರೆ ಹಾಗೂ ಪೊಲೀಸ್‌ ಅಧಿಕಾರಿ ಸಂಜೀವ್‌ ಮಹಾಜನ್‌ ಅರ್ಜಿದಾರನಿಗೆ ನಿತ್ಯ ಕರೆ ಮಾಡಿ, ದೂರುದಾರೆಯನ್ನು ಮದುವೆಯಾಗುವಂತೆ ಬಲವಂತ ಮಾಡುತ್ತಿದ್ದಾರೆ. ಅರ್ಜಿದಾರ ಮತ್ತು ಆತನ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿ ಹಿಂಸೆ ನೀಡುತ್ತಿದ್ದಾರೆ. ಈ ಕುರಿತ ಕೆಲ ಫೋಟೋಗಳನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿತು.

ನಾಳೆ ಹಾಜರಾಗಲು ಸೂಚನೆ

ಪೊಲೀಸ್‌ ಅಧಿಕಾರಿಯು ಮಂಗಳವಾರ ಮಧ್ಯಾಹ್ನ 2.30ಕ್ಕೆ ಕೋರ್ಟ್‌ಗೆ ಹಾಜರಾಗಿ ವಿವರಣೆ ನೀಡಬೇಕು. ಒಂದೊಮ್ಮೆ ಅರ್ಜಿದಾರರಿಗೆ ಮತ್ತೆ ಯಾವುದೇ ರೀತಿ ಕಿರುಕುಳ ನೀಡುವ ಕೃತ್ಯದಲ್ಲಿ ಭಾಗಿಯಾದರೆ, ದೂರುದಾರೆ ಮತ್ತು ಪೊಲೀಸ್‌ ಅಧಿಕಾರಿಯನ್ನು ಬಂಧಿಸಲು ಆದೇಶಿಸಬೇಕಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿ ಮಂಗಳವಾರಕ್ಕೆ ವಿಚಾರಣೆ ಮುಂದೂಡಿದೆ.

 

PREV
Read more Articles on
click me!

Recommended Stories

ಕಾಂಗ್ರೆಸ್‌ನಿಂದ ದೇಶದ ಮಹಿಳಾ ಶಕ್ತಿಗೆ ಅಪಮಾನ: ಸಂಸದ ಬೊಮ್ಮಾಯಿ ಕಿಡಿ
ಮಹಿಳಾ ಶಕ್ತಿ ನಿರ್ಲಕ್ಷಿಸಿದ ಕಾಂಗ್ರೆಸ್ಸನ್ನು ದೇಶದ ಜನ ಕ್ಷಮಿಸಲ್ಲ: ಆರ್‌.ಅಶೋಕ್‌