ಖೋಟಾ ನೋಟು ಮುದ್ರಣಕ್ಕೆ 6 ತಿಂಗಳು ಪ್ರಯೋಗ: ಚಾಮರಾಜಪೇಟೆಯಲ್ಲಿ ನಕಲಿ ಹಣ ಚಲಾವಣೆಗೆ ಯತ್ನ

Published : Oct 02, 2026, 07:13 AM IST
Bengaluru

ಸಾರಾಂಶ

ಚೆನ್ನೈನಲ್ಲಿ 8 ತಿಂಗಳುಗಳ ಕಾಲ ಗೌಪ್ಯವಾಗಿ 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಚಾಮರಾಜಪೇಟೆ ಪೊಲೀಸರು ಭೇದಿಸಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದ ತಮಿಳುನಾಡು ಮತ್ತು ತೆಲಂಗಾಣ ಮೂಲದ 7 ಜನ ಆರೋಪಿಗಳನ್ನು ಬಂಧಿಸಿ, 21 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ.

ಬೆಂಗಳೂರು: ಖೋಟಾ ನೋಟನ್ನು ಮುದ್ರಿಸಿ ಬಳಿಕ ನಗರದಲ್ಲಿ ಚಲಾವಣೆಗೆ ಯತ್ನಿಸಿದ್ದ ಹೊರರಾಜ್ಯಗಳ ನಕಲಿ ನೋಟು ದಂಧೆಕೋರರ ತಂಡವೊಂದು ಚಾಮರಾಜಪೇಟೆ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.

ತೆಲಂಗಾಣ ರಾಜ್ಯದ ಸತ್ಯಂ ಅಲಿಯಾಸ್ ಯಾಟ, ಲಕ್ಷ್ಮಣ, ಕೃಷ್ಣ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಗೋವಿಂದನ್‌, ಬರ್ಕತ್‌, ಚೆನ್ನೈ ನಗರದ ಮುರುಗೇಶನ್‌ ಹಾಗೂ ಸರವಣನ್‌ ಬಂಧಿತರಾಗಿದ್ದು, ಆರೋಪಿಗಳಿಂದ 500 ರು ಮುಖಬೆಲೆಯ 4337 ಖೋಟಾ ನೋಟುಗಳು, 8 ಮೊಬೈಲ್‌ ಹಾಗೂ ಕಾರು ಸೇರಿದಂತೆ 21 ಲಕ್ಷ ರು ಮೌಲ್ಯದ ವಸ್ತುಗಳು ಜಪ್ತಿಯಾಗಿವೆ. ಇತ್ತೀಚಿಗೆ ಚಾಮರಾಜಪೇಟೆಯ ಮೇಲ್ಸೇತುವೆ ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಖೋಟಾ ನೋಟುಗಳ ಚಲಾವಣೆಗೆ ಆರೋಪಿಗಳು ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಇನ್ಸ್‌ಪೆಕ್ಟರ್‌ ವಿ.ಕಿರಣ್ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೆನ್ನೈ ಮುದ್ರಾಣಾಲಯದಲ್ಲಿ ನೋಟ್ ಮುದ್ರಣ

ಚೆನ್ನೈ ನಗರದಲ್ಲಿ ಮುದ್ರಾಣಾಲಯವನ್ನು ಮುರುಗೇಶನ್ ಹೊಂದಿದ್ದು, ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡಿ ಹಣ ಸಂಪಾದಿಸುವ ಬಗ್ಗೆ ತನ್ನ ಸ್ನೇಹಿತ ಹಾಗೂ ತೆಂಗಿನಕಾಯಿ ವ್ಯಾಪಾರಿ ಗೋವಿಂದನ್ ಜತೆ ಮುರುಗೇಶನ್ ಚರ್ಚಿಸಿದ್ದಾನೆ.

ಚೆನ್ನೈ ನಗರದಲ್ಲಿ ಸಗಟು ತೆಂಗಿನಕಾಯಿ ವ್ಯಾಪಾರಿ ಆಗಿದ್ದ ಗೋವಿಂದನ್‌ಗೆ ಹೊರರಾಜ್ಯಗಳಲ್ಲೂ ಕೂಡ ವ್ಯವಹಾರಿಕ ಸಂಪರ್ಕವಿತ್ತು. ಅಂತೆಯೇ ಹಲವು ವರ್ಷಗಳಿಂದ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ತೆಂಗಿನಕಾಯಿ ವ್ಯಾಪಾರಿ ಸತ್ಯ ಜತೆ ಕೂಡ ಆತನಿಗೆ ಒಡನಾಟವಿತ್ತು. ಖೋಟಾ ನೋಟು ಮುದ್ರಣದ ಬಗ್ಗೆ ಗೆಳೆಯನಿಗೆ ಗೋವಿಂದನ್ ಮಾತನಾಡಿದ್ದಾನೆ. ಕೊನೆಗೆ ಹಣದಾಸೆಗೆ ಮುರುಗೇಶನ್‌ ಖೋಟಾ ನೋಟು ದಂಧೆಗೆ ಇನ್ನುಳಿದವರು ಕೈಜೋಡಿಸಿದ್ದಾರೆ.

ಈ ನೋಟು ಮುದ್ರಣಕ್ಕೆ ಅತ್ಯಾಧುನಿಕ ಯಂತ್ರಗಳು ಮಾತ್ರಲ್ಲದೆ ಕಾಗದ ಹಾಗೂ ಶಾಯಿ ಸೇರಿದಂತೆ ಅಗತ್ಯವಾದ ಕಚ್ಚಾವಸ್ತುಗಳನ್ನು ತೆಲಂಗಾಣದ ಸತ್ಯ ಪೂರೈಸಿದ್ದಾನೆ. ಪೂರ್ವಯೋಜಿತದಂತೆ ಗೌಪ್ಯವಾಗಿ ಮುರುಗೇಶ್‌ ಮುದ್ರಾಣಾಲಯದಲ್ಲಿ ನಕಲಿ ನೋಟುಗಳು ಅಚ್ಚಾಗಿವೆ.

ಎಂಟು ತಿಂಗಳ ಯೋಜನೆ

ಅಸಲಿ 500 ರು ಮುಖಬೆಲೆಯಂತೆ ನಕಲಿ ನೋಟು ಮುದ್ರಣಕ್ಕೆ ಎಂಟು ತಿಂಗಳ ಸಮಯವನ್ನು ಮುರುಗೇಶನ್ ಗ್ಯಾಂಗ್ ತೆಗೆದುಕೊಂಡಿದೆ. ಮೊದಲು ಆರು ತಿಂಗಳು ನೋಟು ಮುದ್ರಣ ಪ್ರಯೋಗ ನಡೆದಿದೆ. ರಿಸರ್ವ್ ಬ್ಯಾಂಕ್ ಗೌರ್ವರ್ ಸಹಿಯುಳ್ಳ ಮುದ್ರೆ, ಭಾರತ ಸರ್ಕಾರದ ಲಾಂಛನ ಹೀಗೆ ಅಸಲಿನ ನೋಟಿನಲ್ಲಿದ್ದ ಪ್ರತಿಯೊಂದು ತಪ್ಪದೆ ಮುದ್ರಿಸಿದ್ದರು. ಸತತ ಪ್ರಯತ್ನ ಬಳಿಕ ಸಂಚು ಯಶ್ವಸಿಯಾಗಿ ಕಾರ್ಯರೂಪಕ್ಕಿಳಿದೆ. ಎರಡು ತಿಂಗಳ 21 ಲಕ್ಷ ರು ಮೌಲ್ಯದ 4331 ನೋಟುಗಳನ್ನು ಆರೋಪಿಗಳು ಮುದ್ರಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ನಗರಕ್ಕೆ 15 ಲಕ್ಷ ತಂದಿದ್ದ ಆರೋಪಿಗಳು

ನಕಲಿ ನೋಟು ಮುದ್ರಣವಾದ ಬಳಿಕ ನಗರಕ್ಕೆ 15 ಲಕ್ಷ ರು ನಕಲಿ ನೋಟು ಜತೆ ಮುರುಗೇಶನ್‌, ಗೋವಿಂದನ್ ಹಾಗೂ ಬರ್ಕತ್ ಬಂದಿದ್ದರು. ಮೈಸೂರು ರಸ್ತೆಯ ಪೆಟ್ರೋಲ್ ಬಂಕ್‌ ಸಮೀಪ ಖೋಟಾ ನೋಟು ಬದಲಾವಣೆಗೆ ಮುರುಗೇಶನ್ ತಂಡ ಅಣಿಯಾಗಿತ್ತು. ಅಷ್ಟರಲ್ಲಿ ಈ ದಂಧೆ ಬಗ್ಗೆ ಇನ್ಸ್‌ಪೆಕ್ಟರ್ ವಿ.ಕಿರಣ್ ತಂಡಕ್ಕೆ ಮಾಹಿತಿ ಲಭಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಆನಂತರ ಈ ಮೂವರು ನೀಡಿದ ಮಾಹಿತಿ ಮೇರೆಗೆ ಇನ್ನುಳಿದ ನಾಲ್ವರು ಬಂಧನವಾಗಿದೆ. ಮುರುಗೇಶ್ ಮನೆಯಲ್ಲಿ ಮುದ್ರಣ ಯಂತ್ರಗಳು, ಮತ್ತೆ 6 ಲಕ್ಷ ರು ನಕಲಿ ನೋಟು ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

PREV
Read more Articles on
click me!

Recommended Stories

SIR: ಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಎಫ್‌ಐಆರ್‌ಗೆ ಪಟ್ಟು ಹಿಡಿದಿರೋದಕ್ಕೆ ಅಸಲಿ ಕಾರಣವೇನು?
ರಾಜ್ಯದ ಇತಿಹಾಸದಲ್ಲೇ ಮೊದಲು: ಸಂಪುಟ ಸಭೆ ಬದಿಗೊತ್ತಿ ಮಂತ್ರಿಗಳ ಜತೆ ಪ್ರತಿಭಟನೆ ಚುನಾವಣಾ ಆಯೋಗದೆದುರು ಸಿಎಂ ಧರಣಿ!