
ಬೆಂಗಳೂರು (ಸೆ. 26): ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಯೋಜನೆಗಾಗಿ ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್. ಪುರಂ ಹೋಬಳಿಯ ಬೆನ್ನಿಗಾನಹಳ್ಳಿ ಗ್ರಾಮದಲ್ಲಿ 1.27 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿರುವುದನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಈ ಮೂಲಕ ಭೂಮಾಲೀಕರು ಹೂಡಿದ್ದ ದೀರ್ಘಕಾಲದ ಕಾನೂನು ಸಮರಕ್ಕೆ ತೆರೆ ಬಿದ್ದಂತಾಗಿದೆ. ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿ ಭೂಷಣ್ ಅವರನ್ನೊಳಗೊಂಡ ವಿಭಾಗೀಯ ಪೀಠವು, 2005ರಲ್ಲಿ ಪ್ರಾರಂಭವಾಗಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿ 2014ರಲ್ಲಿ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ವಜಾಗೊಳಿಸಿ ಈ ಮಹತ್ವದ ತೀರ್ಪು ನೀಡಿದೆ.
ಬೆನ್ನಿಗಾನಹಳ್ಳಿಯ 1.27 ಎಕರೆ ಜಮೀನನ್ನು ರಕ್ಷಣಾ ಇಲಾಖೆಯ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು 2005ರಲ್ಲಿ ಪ್ರಕ್ರಿಯೆ ಆರಂಭಿಸಲಾಗಿತ್ತು. ಇದನ್ನು ಪ್ರಶ್ನಿಸಿ ಭೂಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಹೊಸ ಸುತ್ತಿನ ಕಾನೂನು ಸಮರದಲ್ಲಿ ಭೂಮಾಲೀಕರು, "ವಿಶೇಷ ಭೂಸ್ವಾಧೀನ ಅಧಿಕಾರಿಯು (SLAO) ನಮ್ಮ ಆಕ್ಷೇಪಣೆಗಳನ್ನು ಸೂಕ್ತವಾಗಿ ಪರಿಶೀಲಿಸದೆ, ಕೇವಲ ಮೇಲಧಿಕಾರಿಗಳಿಗೆ ರವಾನಿಸಿದ್ದಾರೆ. ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 5A ಪ್ರಕಾರ ಭೂಮಾಲೀಕರಿಗೆ ಮತ್ತು ಆಸಕ್ತ ವ್ಯಕ್ತಿಗಳಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಇರುವ ಹಕ್ಕಿನ ಅಡಿಯಲ್ಲಿ ಸರಿಯಾದ ವಿಚಾರಣೆ ನಡೆದಿಲ್ಲ," ಎಂದು ವಾದಿಸಿದ್ದರು. ಈ ವಾದವನ್ನು ಪುರಸ್ಕರಿಸಿದ್ದ ಏಕಸದಸ್ಯ ಪೀಠವು 2014ರಲ್ಲಿ ಭೂಸ್ವಾಧೀನವನ್ನು ರದ್ದುಗೊಳಿಸಿತ್ತು.
ಏಕಸದಸ್ಯ ಪೀಠದ ಆದೇಶವನ್ನು ಬದಿಗೊತ್ತಿದ ವಿಭಾಗೀಯ ಪೀಠವು, ಸ್ವಾಧೀನಪಡಿಸಿಕೊಂಡ ಜಮೀನಿನ ಒಂದು ಭಾಗವು ಖಾಲಿ ಬಿದ್ದಿದೆ ಅಥವಾ ತಕ್ಷಣಕ್ಕೆ ಬಳಕೆಯಾಗಿಲ್ಲ ಎಂಬ ಕಾರಣಕ್ಕಾಗಿಯೇ ಭೂಸ್ವಾಧೀನ ಪ್ರಕ್ರಿಯೆಯನ್ನು ಅಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
"ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ ಎಂಬ ಕಾರಣಕ್ಕೆ ಖಾಸಗಿ ಭೂಮಾಲೀಕರ ಹಕ್ಕುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂಬ ಅರಿವು ನಮಗಿದೆ. ಆದರೆ, ಅದೇ ಸಮಯದಲ್ಲಿ ಭೂಮಾಲೀಕರ ಹಕ್ಕುಗಳನ್ನು, ರಾಷ್ಟ್ರವನ್ನು ರಕ್ಷಿಸುವ ಮತ್ತು ರಾಷ್ಟ್ರೀಯ ರಕ್ಷಣೆ ಹಾಗೂ ಭದ್ರತೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುವ ರಾಜ್ಯದ ಬೃಹತ್ ಸಾಂವಿಧಾನಿಕ ಹೊಣೆಗಾರಿಕೆಯೊಂದಿಗೆ ಸಮತೋಲನಗೊಳಿಸಬೇಕಾಗುತ್ತದೆ," ಎಂದು ನ್ಯಾಯಪೀಠ ಉಲ್ಲೇಖಿಸಿದೆ.
ತೀರ್ಪಿನಲ್ಲಿ ಡಿಆರ್‌ಡಿಒ ಮತ್ತು ಕೃತಕ ಬುದ್ಧಿಮತ್ತೆ ಹಾಗೂ ರೊಬೊಟಿಕ್ಸ್ ಕೇಂದ್ರದ (CAIR) ಪ್ರಾಮುಖ್ಯತೆಯನ್ನು ಎತ್ತಿಹಿಡಿದ ನ್ಯಾಯಪೀಠ, "ಈ ಪ್ರಕರಣದಲ್ಲಿ ರಕ್ಷಣಾ ಇಲಾಖೆಯ ಅಗತ್ಯತೆಯು ಯೋಜನೆಯ ಸ್ವರೂಪದ ದೃಷ್ಟಿಯಿಂದ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಸಿಎಐಆರ್ (CAIR) ಒಂದು ಪ್ರಮುಖ ರಕ್ಷಣಾ ಪ್ರಯೋಗಾಲಯವಾಗಿದ್ದು, ರಾಷ್ಟ್ರೀಯ ರಕ್ಷಣೆಗಾಗಿ ಸುಧಾರಿತ ತಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ," ಎಂದಿದೆ.
"ತಂತ್ರಜ್ಞಾನ, ಆಟೊಮೇಷನ್, ಕೃತಕ ಬುದ್ಧಿಮತ್ತೆ (Artificial Intelligence), ರೊಬೊಟಿಕ್ಸ್ ಮತ್ತು ಸಂಕೀರ್ಣ ವ್ಯವಸ್ಥೆಗಳು ರಾಷ್ಟ್ರೀಯ ಭದ್ರತೆಯ ಬೆದರಿಕೆಗಳನ್ನು ಪ್ರಭಾವಿಸುತ್ತಿರುವ ಇಂದಿನ ಯುಗದಲ್ಲಿ, ಸಿಎಐಆರ್‌ನಂತಹ ಸಂಸ್ಥೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ನಿರಂತರ ಸಂಶೋಧನೆ ಮತ್ತು ತಾಂತ್ರಿಕ ನಾವೀನ್ಯತೆಗಳ ಮೂಲಕ ಸುಧಾರಿತ ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಇಂತಹ ಸಂಸ್ಥೆಗಳು ದೇಶವನ್ನು ರಕ್ಷಿಸಲು ಮತ್ತು ಭದ್ರತೆಯನ್ನು ಬಲಪಡಿಸಲು ದಣಿವರಿಯಿಲ್ಲದೆ ಶ್ರಮಿಸುತ್ತವೆ. ಹೀಗಾಗಿ ಇಂತಹ ಸಂಸ್ಥೆಗಳ ನಿರಂತರ ಬೆಳವಣಿಗೆ ರಾಷ್ಟ್ರದ ರಕ್ಷಣೆಗೆ ಅತ್ಯಗತ್ಯ," ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.