
ಬೆಂಗಳೂರು (ಅ.27): ಗಣಿ ಗುತ್ತಿಗೆ ನವೀಕರಣದಲ್ಲಿ ಅಕ್ರಮ ಎಸಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ದೊಡ್ಡ ಮಟ್ಟದ ಕಾನೂನು ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಹೈಕೋರ್ಟ್‌ನ ವಿಭಾಗೀಯ ಪೀಠ ವಜಾಗೊಳಿಸಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ಈ ಮಹತ್ವದ ಆದೇಶ ನೀಡಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ (AG) ಶಶಿಕಿರಣ್ ಶೆಟ್ಟಿ ಅವರು ಅರ್ಜಿಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದರು.
ಸರ್ಕಾರದ ಪರ ಬಲವಾದ ವಾದ ಮತ್ತು ದಾಖಲೆಗಳನ್ನು ಗಮನಿಸಿದ ಬಳಿಕ, ಅರ್ಜಿದಾರರ ಪರ ವಕೀಲರು ತಾವು ಈ ಪ್ರಕರಣದಿಂದ ಹಿಂದೆ ಸರಿಯುವುದಾಗಿ (Withdrawal) ನ್ಯಾಯಾಲಯಕ್ಕೆ ಮೆಮೋ ಸಲ್ಲಿಕೆ ಮಾಡಿದರು. ಎಲ್ಲಾ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು, ಸಿದ್ದರಾಮಯ್ಯ ಅವರ ವಿರುದ್ಧದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಂತಿಮವಾಗಿ ವಜಾಗೊಳಿಸಿ ಆದೇಶಿಸಿತು. ಇದರಿಂದಾಗಿ ಸಿದ್ದರಾಮಯ್ಯ ಅವರಿಗೆ ಗಣಿ ಅಕ್ರಮ ಆರೋಪದ ಕಾನೂನು ಸಮರದಲ್ಲಿ ದೊಡ್ಡ ಜಯ ಸಿಕ್ಕಂತಾಗಿದೆ.