
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಕರಣದ ಸಂಬಂಧ ಜೆಡಿಎಸ್ ಕಾರ್ಯಕರ್ತನ ಮನೆ ಮೇಲೆ ದಾಳಿ ನಡೆಸಿ ಶೋಧನೆಗೆ ತೆರಳಿದ್ದಾಗ ಸಿಸಿಬಿ ಮಹಿಳಾ ಇನ್‌ಸ್ಪೆಕ್ಟರ್ ಒಬ್ಬರ ಚಿನ್ನದ ಬ್ರೇಸ್‌ಲೈಟ್ ಕಳವಾಗಿದೆ.
ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಇನ್‌ಸ್ಪೆಕ್ಟರ್ ಕವಿತಾ ಅವರ ಚಿನ್ನದ ಬ್ರೇಸ್‌ಲೈಟ್ ಕಳುವಾಗಿದ್ದು, ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಜೆಡಿಎಸ್ ಕಾರ್ಯಕರ್ತ ಮೋಹನ್‌ಗೌಡ ಪತ್ನಿ ಪವಿತ್ರಾ ಸೇರಿದಂತೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೂರು ದಿನಗಳ ಹಿಂದೆ ಚಿಕ್ಕಗೊಲ್ಲರಹಟ್ಟಿ ಸಮೀಪದ ರತ್ನನಗರದಲ್ಲಿರುವ ಮೋಹನ್ ಮನೆಗೆ ಇನ್‌ಸ್ಪೆಕ್ಟರ್ ಕವಿತಾ ನೇತೃತ್ವದ ತಂಡ ಶೋಧನೆಗೆ ತೆರಳಿದ್ದಾಗ ಈ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ.
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಇಬ್ಬರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಸಚಿವ ಡಾ। ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ ಬಗ್ಗೆ ನಾವು ದೂರು ದಾಖಲಿಸಿದ್ದೇವೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸುವಂತೆ ಮನವಿ ಮಾಡಿದ್ದೇವೆ. ತನಿಖೆ ನಡೆಸುವ ಜವಾಬ್ದಾರಿ ಪೊಲೀಸರ ಮೇಲಿದೆ ಎಂದರು.
ಯಾರು ಆರೋಪಿಗಳಿದ್ದಾರೋ ಅವರನ್ನು ಹುಡುಕಿ ಹಿಡಿಯುತ್ತಾರೆಂಬ ವಿಶ್ವಾಸ ಇದೆ. ಸ್ಟಿಂಗ್‌ನಲ್ಲಿರುವ ಇಬ್ಬರನ್ನು ಬಂಧಿಸಿ, ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕೆಂಬ ಉದ್ದೇಶದಿಂದಲೇ ತಂದೆಯವರು ಮೊದಲಿನಿಂದ ಆಗ್ರಹ ಮಾಡುತ್ತಿದ್ದಾರೆ. ಆ ಕಾರಣಕ್ಕೆ ದೂರು ನೀಡಿದ್ದಾರೆ ಎಂದು ಅವರು ಹೇಳಿದರು.
ಸ್ಟಿಂಗ್ ಆಪರೇಷನ್ ವಿಚಾರವಾಗಿ ಸೀಡಿ ಫ್ಯಾಕ್ಟರಿ ಹಿಂದೆ ಕೆಪಿಸಿಸಿ ಕಚೇರಿಯಲ್ಲಿತ್ತು. ಈಗ ಅದು ವಿಧಾನಸೌಧಕ್ಕೆ ವರ್ಗಾವಣೆ ಆಗಿದೆ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲ ದಿನಗಳಿಂದ ಸಿಎಂ ಸಿದ್ದರಾಮಯ್ಯ ಅವರ ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಇದರ ಬಗ್ಗೆ ತನಿಖೆ ನಡೆಸಲು ಸಿಎಂ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಆಸಕ್ತಿ ಕಾಣಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಇದೆ ಎಂದರೆ ಅದಕ್ಕೆ ಸಿದ್ದರಾಮಯ್ಯನವರೇ ಕಾರಣ. ಅಂತಹವರನ್ನೇ ಯೂಸ್ ಆ್ಯಂಡ್ ಥ್ರೋ ಮಾಡಲಾಗಿದೆ. ಕಾಂಗ್ರೆಸ್ ಮುಖಂಡರು ಕಾಲಾಹರಣ ಮಾಡುವುದನ್ನು ಬಿಟ್ಟು ಅದಕ್ಕೊಂದು ತಾರ್ಕಿಕ ಅಂತ್ಯ ಹಾಡಬೇಕು. ಸೀಡಿ, ಪೆನ್‌ಡ್ರೈವ್ ಫ್ಯಾಕ್ಟರಿ ಯಾರದ್ದು ಎಂದು ಕಾಂಗ್ರೆಸ್ಸಿಗರೇ ಮಾತನಾಡುತ್ತಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ಈ ಕುರಿತು ಹೇಳಿಕೆ ನೀಡಿದ್ದು, ಕಾಂಗ್ರೆಸ್ ಶಾಸಕರು, ಸಚಿವರು ಎಲ್ಲರೂ ಭಯಭೀತರಾಗಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಯವರು ನಾಲಿಗೆ ಹರಿಬಿಟ್ಟಿದ್ದಾರೆ. ಮೋದಿ ಹಾಗೂ ಅವರ ತಂದೆಯ ಬಗ್ಗೆ ಮಾತಾಡಿದ್ದಾರೆ. ಈ ಮಾತು ಮಲ್ಲಿಕಾರ್ಜುನ ಖರ್ಗೆಯವರ ಬಾಯಲ್ಲಿ ಬಂದಿದೆ. ಈ ಹೇಳಿಕೆ ಮೂಲಕ ಅವರು ರಾಹುಲ್ ಗಾಂಧಿ ಮನಸ್ಥಿತಿಯನ್ನು ಬಿಚ್ಚಿಡುವ ಕೆಲಸ ಮಾಡಿದ್ದಾರೆ. ಗಾಂಧಿ ಕುಟುಂಬ ಬಿಟ್ಟು, ಬೇರೆ ಯಾರು ಪ್ರಧಾನಿಯಾಗಬಾರದು ಎಂಬ ಭಾವನೆ ಅವರದ್ದು ಮಲ್ಲಿಕಾರ್ಜುನ ಖರ್ಗೆ ದೇಶದ ಜನರನ್ನು ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.