ಬಂಧನವಿಲ್ಲದೆ ರಕ್ತದ ಮಾದರಿ ಸಂಗ್ರಹ ಕಾನೂನು ಬಾಹಿರ: ರೇವ್ ಪಾರ್ಟಿ ಕೇಸ್‌ನಲ್ಲಿ ಹೈಕೋರ್ಟ್ ಮಹತ್ವದ ತೀರ್ಪು!

Published : Apr 13, 2026, 06:51 AM IST
karnataka hc

ಸಾರಾಂಶ

ಕಾನೂನುಬದ್ಧವಾಗಿ ಬಂಧಿಸುವ ಮೊದಲು ಆರೋಪಿಯ ರಕ್ತದ ಮಾದರಿ ಸಂಗ್ರಹಿಸುವುದು ಕಾನೂನುಬಾಹಿರ ಮತ್ತು ಅಂತಹ ವರದಿಯನ್ನು ಸಾಕ್ಷಿಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯ ವಿರುದ್ಧದ ವಿಚಾರಣೆಯನ್ನು ನ್ಯಾಯಾಲಯ ರದ್ದುಪಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ಏ.13): ಕಾನೂನುಬದ್ಧವಾದ ಪ್ರಕ್ರಿಯೆ ಅನುಸರಿಸಿ ಬಂಧನ ಮಾಡದೆ ಆರೋಪಿಯ ರಕ್ತದ ಮಾದರಿ ಸಂಗ್ರಹಿಸಲು ಪೊಲೀಸರಿಗೆ ಅವಕಾಶವೇ ಇಲ್ಲ ಹಾಗೂ ಕಾನೂನುಬದ್ಧ ಬಂಧನಕ್ಕೂ ಮುನ್ನ ಸಂಗ್ರಹಿಸಿರುವ ರಕ್ತದ ಮಾದರಿ ಆಧಾರಿತ ವೈದ್ಯಕೀಯ ವರದಿಯನ್ನು ಸಾಕ್ಷಿಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ದೇವನಹಳ್ಳಿ ರಸ್ತೆಯ ಕನ್ನಮಂಗಲದ ಇಲ್ಲಾವೋಮಾ ಹೌಸ್‌ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವನೆ ಆರೋಪ ಮೇಲೆ ಕೆ.ಆರ್‌.ಪುರದ ನಿವಾಸಿ ಇಮನ್‌ ಅಬ್ಬಾಸ್‌ ಟೋಪಿವಾಲಾ ಎಂಬುವವರ ವಿರುದ್ಧ ದಾಖಲಾಗಿದ್ದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 51ರ ಅಡಿ ವೈದ್ಯಕೀಯ ಪರೀಕ್ಷೆ ನಡೆಸಲು ಮೊದಲು ಆರೋಪಿಯ ಕಾನೂನುಬದ್ಧ ಬಂಧನ ಆಗಿರಬೇಕು. ಕಾನೂನುಬದ್ಧ ಬಂಧನವಿಲ್ಲದೆ ರಕ್ತ ಮಾದರಿ ಸಂಗ್ರಹಿಸುವುದೇ ಕಾನೂನು ಬಾಹಿರ ಕ್ರಮ. ಕಾನೂನುಬದ್ಧ ಬಂಧನಕ್ಕೆ ಅಗತ್ಯವಾದ ಕ್ರಮಗಳು ಹಾಗೂ ಬಂಧನಕ್ಕೆ ಕಾರಣ ತಿಳಿಸುವುದು ಕಡ್ಡಾಯ ಎಂದು ಪೀಠ ಹೇಳಿದೆ.

ಪ್ರಕರಣದಲ್ಲಿ ಕಾನೂನುಬಾಹಿರ ಬಂಧನ ನಡೆಸಿ ವೈದ್ಯಕೀಯ ಪರೀಕ್ಷೆ ನಡೆಸಿ, ರಕ್ತ ಸಂಗ್ರಹಿಸಲಾಗಿದೆ. ಬಂಧನಕ್ಕೂ ಸೂಕ್ತ ಕಾರಣ ನೀಡಿಲ್ಲ. ಅರ್ಜಿದಾರರ ಬಂಧನವೇ ಕಾನೂನು ಬಾಹಿರವಾಗಿರುವ ಸಂದರ್ಭದಲ್ಲಿ ಅದರ ಆಧಾರದ ಮೇಲೆ ನಡೆಸಿದ ವೈದ್ಯಕೀಯ ಪರೀಕ್ಷೆ, ರಕ್ತ ಮಾದರಿ ಸಂಗ್ರಹ, ಅದರ ಆಧಾರದ ಮೇಲೆ ಸಿದ್ಧವಾದ ವೈದ್ಯಕೀಯ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ರದ್ದಾಗಲಿವೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದಲ್ಲಿ ರಕ್ತ ಮಾದರಿ ಆಧಾರದ ಮೇಲೆ ಅರ್ಜಿದಾರ ಮಾದಕ ವಸ್ತು ಸೇವನೆ ಮಾಡಿದ್ದರು ಎಂದು ಹೇಳಲಾಗಿದೆ. ಆದರೆ ರಕ್ತ ಮಾದರಿಯೇ ಕಾನೂನು ಬಾಹಿರವಾಗಿ ಸಂಗ್ರಹಿಸಲಾಗಿದೆ. ರಕ್ತ ಮಾದರಿಯ ಪರೀಕ್ಷೆ ವರದಿಯನ್ನು ಸಾಕ್ಷಿಯಾಗಿ ಪರಿಗಣಿಸಲಾಗದು. ಆ ಸಾಕ್ಷ್ಯದ ಆಧಾರದಲ್ಲಿ ನ್ಯಾಯಾಲಯ ವಿಚಾರಣೆ (ಪ್ರಾಸಿಕೂಷನ್‌) ಮುಂದುವರೆಯುವುದಕ್ಕೆ ಸಾಧ್ಯವಿಲ್ಲ. ತನಿಖಾಧಿಕಾರಿಗಳು ಅರ್ಜಿದಾರರ ವಿರುದ್ಧ ಆರೋಪಗಳಿಗೆ ಸಂಬಂಧಿಸಿ ವಿಶ್ವಾಸಾರ್ಹ ಮಾಹಿತಿ ಒದಗಿಸಿಲ್ಲ. ಆದ್ದರಿಂದ ಅರ್ಜಿದಾರರ ರಕ್ತದ ಮಾದರಿ ಸಂಗ್ರಹಿಸಿರುವುದು ಕಾನೂನಿಗೆ ವಿರುದ್ಧವಾಗಿದ್ದು, ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲಾಗುತ್ತಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ

ದೇವನಹಳ್ಳಿ ರಸ್ತೆಯ ಕನ್ನಮಂಗಲದ ಇಲ್ಲಾಮಾವೋ ಹೌಸ್‌ನಲ್ಲಿ ಮೇ 25, 2025ರಂದು ಸಂಜೆ ನಡೆಯುತ್ತಿರುವ ರೇವ್‌ ಪಾರ್ಟಿಯಲ್ಲಿ 30-35 ಮಂದಿ ಭಾಗವಹಿಸಿದ್ದಾರೆ. ಪಾರ್ಟಿ ಮಾಡಲು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ ಎಂಬ ಆರೋಪ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಕೆ.ಆರ್​.ಪುರದ ನಿವಾಸಿಯಾಗಿರುವ ಅರ್ಜಿದಾರರು ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅವರೂ ಸೇರಿ 12 ಮಂದಿ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಂಧನ ಮಾಡಿದ್ದರು.

ಬಂಧಿತರ ರಕ್ತದ ಮಾದರಿಗಳನ್ನು ಸಂಗ್ರಹಿಸಿಕೊಂಡ ನಂತರ ಬಿಡುಗಡೆ ಮಾಡಿದ್ದರು. ಬಳಿಕ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಅರ್ಜಿದಾರರು 12ನೇ ಆರೋಪಿಯಾಗಿದ್ದರು, ತನ್ನ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಕೀಲರು, ಪಾರ್ಟಿಯಲ್ಲಿ ಅತಿಥಿಯಾಗಿ ಅರ್ಜಿದಾರರು ಭಾಗವಹಿಸಿದ್ದರು. ಅವರು ಮಾದಕ ವಸ್ತುಗಳನ್ನು ಸೇವನೆ ಮಾಡಿರಲಿಲ್ಲ. ಪೊಲೀಸರು ಅವರಿಂದ ಮಾದಕ ವಸ್ತುಗಳನ್ನು ವಶಕ್ಕೂ ಪಡೆದಿಲ್ಲ. ಪೊಲೀಸರು ಬಂಧನದ ಕಾರಣ ತಿಳಿಸಿಲ್ಲ. ಬಂಧನ ಮೆಮೊ ಕೂಡ ನೀಡಿಲ್ಲ. ಹೀಗಾಗಿ, ಅರ್ಜಿದಾರ ಬಂಧನ ಅಕ್ರಮವಾಗಿದೆ. ಬಿಎನ್ಎಸ್ಎಸ್ ಸೆಕ್ಷನ್ 51 ಪ್ರಕಾರ ಕಾನೂನುಬದ್ಧ ಬಂಧನ ನಂತರವೇ ವೈದ್ಯಕೀಯ ಪರೀಕ್ಷೆ ನಡೆಸಬಹುದಾಗಿತ್ತು. ಅದಕ್ಕೂ ಮುನ್ನವೇ ರಕ್ತದ ಮಾದರಿ ಸಂಗ್ರಹಿಸಲಾಗಿದೆ. ಅದು ಕಾನೂನಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದರು.

 

PREV
Read more Articles on
click me!

Recommended Stories

ಆ ಮುಸ್ಲಿಂ ಮಹಾನಾಯಕನ ವಿರುದ್ಧ ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌ ವಾಗ್ದಾಳಿ
ಚಿತ್ರದುರ್ಗ ಹಳಿ ಮೇಲೆ ಕೆಟ್ಟು ನಿಂತ ಹುಬ್ಬಳ್ಳಿ-ಬೆಂಗಳೂರು ರೈಲು, ಟಾಟಾನಗರ ಎಕ್ಸ್‌ಪ್ರೆಸ್ ರೈಲು ಕೂಡ ಸ್ಥಗಿತ!