ಬಾರಯ್ಯ ನನ್ನ ಮುಟ್ಟು ನೋಡೋಣ, ಗೃಹ ಇಲಾಖೆ ಏನು ನಿಮ್ಮಪ್ಪನ ಮನೆ ಆಸ್ತಿನಾ? ಏಕವಚನದಲ್ಲೇ ಪ್ರಿಯಾಂಕ್‌ ಖರ್ಗೆಗೆ ಪ್ರಶ್ನಿಸಿದ ಎಚ್‌ಡಿಕೆ

Published : Oct 15, 2026, 12:29 PM IST
HD Kumaraswamy on Priyank kharge

ಸಾರಾಂಶ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನೈಸ್ ಹಗರಣ, ಸಿಎಂ ವೀಡಿಯೋ ರಹಸ್ಯ ಹಾಗೂ ಪೊಲೀಸ್ ದುರ್ಬಳಕೆ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಗೃಹ ಸಚಿವರಿಗೆ ನೇರ ಸವಾಲು ಹಾಕಿರುವ ಅವರು, ತಾಕತ್ತಿದ್ದರೆ ತಮ್ಮನ್ನು ಬಂಧಿಸುವಂತೆ ಗುಡುಗಿದ್ದಾರೆ.

ಬೆಂಗಳೂರು (ಅ.15): ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಗುರುವಾರ ಜೆಪಿ ಭವನದಲ್ಲಿ ಮಾಧ್ಯಮಗಳ ಸಮ್ಮುಖದಲ್ಲಿ ಬೃಹತ್ ಸುದ್ದಿಗೋಷ್ಠಿ ನಡೆಸ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರವು ಅಧಿಕಾರದ ಬಲದಿಂದ ತಮ್ಮ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ ಅವರು, ಮೇಜು ತಟ್ಟಿ ಸರ್ಕಾರದ ವಿರುದ್ಧ ಸವಾಲೆಸೆದರು.

ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವರ ಹೇಳಿಕೆಗೆ ಉತ್ತರ ನೀಡಿದ ಕುಮಾರಸ್ವಾಮಿ, "ನೆನ್ನೆ ಅದೇನೋ ತನಿಖೆ ಪ್ರಕಟಿಸಿ ಅತ್ಯಂತ ಕಠಿಣ ಪದಗಳನ್ನು ಪ್ರಯೋಗಿಸಿದ್ದಾರೆ. ಜಾರಿ ನಿರ್ದೇಶನಾಲಯ (ED) ರಂಗಪ್ರವೇಶ ಮಾಡಿದ್ದರಿಂದ ಇವರ ಅಕ್ರಮಗಳು ಎಕ್ಸ್‌ಪೋಸ್ ಆಗಿವೆ. ಇಲ್ಲದಿದ್ದರೆ ಇವರು ಎಲ್ಲವನ್ನೂ ಮುಚ್ಚಿಡುತ್ತಿದ್ದರು. ಪ್ರಿಯಾಂಕ್ ಖರ್ಗೆ ಅವರು ಪಂಚಾಯತ್ ರಾಜ್ ಸಚಿವರಾಗಿದ್ದಾಗ ಕೆಪಿಎಸ್‌ಸಿ ಮೂಲಕ 24 ಜನ ಎಂಜಿನಿಯರ್‌ಗಳ ನೇಮಕಾತಿ ಅಕ್ರಮದ ಬಗ್ಗೆ ನಾನು ಪ್ರಸ್ತಾಪಿಸಿದ್ದೆ. ಗೃಹ ಸಚಿವರೇ, ನೀವು ಅಷ್ಟೊಂದು ಪ್ರಾಮಾಣಿಕರಿದ್ದರೆ ಎಇಇ (AEE) ನೇಮಕಾತಿ ಹೇಗೆ ನಡಿಯಿತು ಎಂಬುದನ್ನು ಮೊದಲು ತನಿಖೆಗೆ ಒಪ್ಪಿಸಿ" ಎಂದು ಆಗ್ರಹಿಸಿದರು.

ಅಲ್ಲದೆ, "ಸುಪ್ರೀಂ ಕೋರ್ಟ್‌ನಲ್ಲಿ ನಿಮ್ಮ ಇಲಾಖೆಯ ಉನ್ನತ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ವಾದ ಮಂಡಿಸುತ್ತಿದ್ದೀರಲ್ಲವೇ?" ಎಂದು ಪ್ರಿಯಾಂಕ್ ಖರ್ಗೆ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸಿದರು.

ಸಚಿವ ಸಂಪುಟದಿಂದ ಸ್ಟಿಂಗ್ ಆಪರೇಷನ್ ಲೀಕ್ - ನೈಸ್ (NICE) ಹಗರಣ ಮರೆಮಾಚುವ ಹುನ್ನಾರ?

ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ವಿವಾದಗಳ ಬಗ್ಗೆ ಮಾತನಾಡಿದ ಅವರು, "ಇದೆಲ್ಲವನ್ನೂ ಕುಮಾರಸ್ವಾಮಿ ಸೃಷ್ಟಿ ಮಾಡಿದ್ದಾ? ಸಚಿವ ಸಂಪುಟ ಸಭೆಯಲ್ಲಿ ನಡೆಯುವ ಚರ್ಚೆಗಳು ಅತ್ಯಂತ ಗೌಪ್ಯವಾಗಿರಬೇಕು. ಆದರೆ ಕ್ಯಾಬಿನೆಟ್‌ನಲ್ಲಿ ಸ್ಟಿಂಗ್ ಆಪರೇಷನ್ ಬಗ್ಗೆ ಚರ್ಚೆ ಮಾಡಿ, ಆ ಫೈಲ್‌ಗಳನ್ನು ಹಿಡಿದುಕೊಂಡು ಮಾಧ್ಯಮಗಳಿಗೆ ಕಾಣುವಂತೆ ಹೊರಹೋದವರು ಯಾರು? ನಾನು ಅಂದು 'ನೈಸ್' ಹಗರಣದ ಬಗ್ಗೆ ಸುದ್ದಿಗೋಷ್ಠಿ ಕರೆದಿದ್ದಾಗ, ಆ ಸುದ್ದಿ ಜನರಿಗೆ ತಲುಪಬಾರದು ಎಂಬ ಒಂದೇ ಕಾರಣಕ್ಕೆ ಈ ಸ್ಟಿಂಗ್ ಆಪರೇಷನ್ ಸುದ್ದಿಯನ್ನು ಮುನ್ನೆಲೆಗೆ ತರಲಾಯಿತು" ಎಂದು ಬಾಂಬ್ ಸಿಡಿಸಿದರು.

ಮುಂದುವರಿದು, ಶಾಂಗ್ರಿಲಾ ಹೋಟೆಲ್‌ನಲ್ಲಿ ಯಾರನ್ನು ಭೇಟಿಯಾದಿರಿ? ನಿಮ್ಮ ಮನೆಗೂ ಅವರನ್ನು ಕರೆಸಿಕೊಂಡಿದ್ದಿರಲ್ಲವೇ? ನೈಸ್ ಕಂಪನಿಯ ಗುತ್ತಿಗೆದಾರನ ಜೊತೆ 14 ಗಂಟೆಗಳ ಕಾಲ ಸಂದರ್ಶನ ನಡೆಸಿದವರು ಯಾರು? ಆ ನೈಸ್ ಗುತ್ತಿಗೆದಾರ ನಿಮ್ಮ ಮನೆಗೂ ಬಂದು ಹೋಗುತ್ತಿದ್ದಾನಲ್ಲವೇ? ಎಂದು ಸಿಎಂ ಹಾಗೂ ಆಪ್ತರ ವಿರುದ್ಧ ನೇರ ಆರೋಪ ಮಾಡಿದರು.

ಸಿಎಂ ವೀಡಿಯೋಗಳು ಹೊರಬರುವ ಭೀತಿಯೇ?

ಪತ್ರಿಕಾ ವರದಿಗಳನ್ನು ಉಲ್ಲೇಖಿಸಿದ ಕುಮಾರಸ್ವಾಮಿ, "ರಮೇಶ್ ಜಾರಕಿಹೊಳಿ ಅವರು ಮೇ 8, 2024 ರಂದು ಪ್ರಜ್ವಲ್ ರೇವಣ್ಣ ವೀಡಿಯೋದಂತೆಯೇ ಸಿಎಂ ಸಿದ್ದರಾಮಯ್ಯ ಅವರ ವೀಡಿಯೋಗಳೂ ಹೊರಬರಬಹುದು ಎಂದು ಹೇಳಿದ್ದರು. ಸ್ಟಿಂಗ್ ಆಪರೇಷನ್‌ನ ಮೂಲಪುರುಷ ಮತ್ತು ಸಿಎಂ ಇಬ್ಬರೂ ಕುಳಿತು ಸಭೆ ನಡೆಸಿ, ಪ್ರಕರಣವೊಂದರಲ್ಲಿ 164 ಹೇಳಿಕೆ ಕೊಡಿಸಿ ನನ್ನ ಮೇಲೆ ಆರೋಪ ಹೊರಿಸಲು ಯತ್ನಿಸಿದ್ದಾರೆ. ಯಾವುದೋ ಹೆಣ್ಣುಮಗಳಿಗೆ ಮುಖಕ್ಕೆ ಟವಲ್ ಅಡ್ಡ ಹಾಕಿಸಿ ಹೇಳಿಕೆ ಕೊಡಿಸಿದರಲ್ಲ, ನನ್ನನ್ನು ರೇವಣ್ಣ ಅಂದುಕೊಂಡಿರಾ?" ಎಂದು ಕಿಡಿಕಾರಿದರು.

"ಸಿಎಂ ಅದೇನೋ ಫೋನ್‌ನಲ್ಲಿ ಮಾತನಾಡಿದ್ದಾರಲ್ಲ, ಅದರ ಬಗ್ಗೆ ಗೃಹ ಸಚಿವರು ತನಿಖೆ ಮಾಡಿಸಿದ್ರಾ? ಮಾಧ್ಯಮಗಳಿಗೆ ಸ್ಟೇ ತಂದಿರುವ ಅರ್ಜಿಯಲ್ಲೇ ಎಲ್ಲ ವಿವರಗಳಿವೆ. ಅದರಲ್ಲಿರುವ ಹೆಣ್ಣುಮಗಳು ಹಾಗೂ ಮತ್ತೊಬ್ಬರ ಧ್ವನಿ ಮುಖ್ಯಮಂತ್ರಿಗಳಿಗೆ ಅತ್ಯಂತ ಆತ್ಮೀಯರದ್ದಲ್ಲವೇ?" ಎಂದು ಕೇಳಿದರು.

ಸಾಮಾಜಿಕ ಜಾಲತಾಣದ ಯುವಕನ ಮೇಲೆ ದೌರ್ಜನ್ಯ - ಪೋಲೀಸ್ ತನಿಖೆಗೆ ಆಕ್ರೋಶ

"ನೆನ್ನೆ ಬೆಳಿಗ್ಗೆ ನಮ್ಮ ಸಾಮಾಜಿಕ ಜಾಲತಾಣ ವಿಭಾಗದ ಹುಡುಗನ ಮನೆಗೆ ಹೋಗಿ, ತನಿಖೆಗೆ ಬಾ ಎಂದು ಕರೆದೊಯ್ದಿದ್ದಾರೆ. ಸಿನಿಮಾಗಳಲ್ಲಿ ತೋರಿಸುವಂತಹ ಯಾವುದೋ ಒಂದು ಶೆಡ್‌ಗೆ ಕರೆದೊಯ್ದು ತನಿಖೆ ನಡೆಸುತ್ತಿದ್ದಾರೆ. ಇದೇನಾ ನಿಮ್ಮ ತನಿಖಾ ವೈಖರಿ? ಪೊಲೀಸರೇ, ಪ್ರತಿಯೊಬ್ಬರ ಮೊಬೈಲ್ ಹುಡುಕುವ ಬದಲು ನಿಮ್ಮ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳ ಫೋನ್ ಚೆಕ್ ಮಾಡಿ, ಎಲ್ಲ ಸತ್ಯಗಳೂ ಸಿಗುತ್ತವೆ. ಈ ಅಮಾಯಕ ಹುಡುಗರನ್ನು ಕರೆದೊಯ್ದು ಕುಮಾರಸ್ವಾಮಿ ಮೇಲೆ ತಪ್ಪು ಹೊರಿಸಲು ಸಿದ್ಧತೆ ನಡೆಸುತ್ತಿದ್ದೀರಾ?" ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಕೇಶ್ ಶೆಟ್ಟಿ ಹಾಗೂ ಕೃಪಾ ಆಳ್ವಾ ಹೆಸರು ಉಲ್ಲೇಖಿಸಿ ವಾಗ್ದಾಳಿ

ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದ ಎಚ್‌ಡಿಕೆ, "ಆ ಹೆಣ್ಣುಮಗಳನ್ನು ಕೂರಿಸಿಕೊಂಡು ಎಲ್ಲ ರೆಕಾರ್ಡ್ ಮಾಡಿಸಿಕೊಂಡಿದ್ದೀರಲ್ಲ, ಯಾತಕ್ಕಾಗಿ ಅದನ್ನೆಲ್ಲ ಮಾಡಿಸಿಕೊಂಡ್ರಿ? ಅದರಲ್ಲಿ ಏನೇನು ಕಂಟೆಂಟ್ ಇದೆ ಎಂದು ನೀವೇ ಹೇಳಿದ್ದೀರಿ. ಕಾಂಗ್ರೆಸ್ ನಾಯಕರೇ ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಮಾತನಾಡಿ. ಸಿದ್ದರಾಮಯ್ಯ ಹರಕೆಯ ಕುರಿಯಾಗಬಾರದು ಎಂದು ನಾನು ಮಾತನಾಡಿದ್ದೇನೆ" ಎಂದರು.

"ಯಾರ್ರೀ ಈ ರಾಕೇಶ್ ಶೆಟ್ಟಿ? ರಾಜ್ಯದ ಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತಾನಲ್ಲ, ಇವನು ಎಷ್ಟು ಮನೆ ಹಾಳು ಮಾಡಿದ್ದಾನೆ? ಇವನಿಗೆ ಪೊಲೀಸ್ ಪ್ಲಟೂನ್ ಬೇರೆ ಕೊಟ್ಟಿದ್ದೀರಾ? ಆ ಹೆಣ್ಣುಮಗಳ ಬಳಿ ಹೋಗಿ 'ನಿಮ್ಮ ರೂಮ್‌ನಲ್ಲಿ ಬಂದು ಎಷ್ಟು ಗಂಟೆ ಕುಳಿತಿದ್ದರು, ದೇಹದ ಮೇಲಿನ ಗುರುತು ಗುರುತಿಸುತ್ತೀರಾ' ಎಂದು ಕೇಳುವ ಈತನ ಮನೆಗೆ ಮುಖ್ಯಮಂತ್ರಿಗಳು ಯಾಕೆ ಹೋದರು? ಇನ್ನು ಕೃಪಾ ಆಳ್ವಾ ಎಂಬುವವರಿದ್ದಾರೆ, ಆರಂಭದಲ್ಲಿ ವೀಡಿಯೋದಲ್ಲಿದ್ದ ಮಹಿಳೆಗೆ 5 ಲಕ್ಷ ರೂ. ನೀಡಿ ಬ್ಯಾಲೆನ್ಸ್ ಮಾಡಿದ್ದೇ ಕೃಪಾ ಆಳ್ವಾ ಎಂಬ ಮಾಹಿತಿಯಿದೆ. ಅವರನ್ನು ಯಾವುದಕ್ಕೋ ಚೇರ್ಮನ್ ಮಾಡಿದ್ರಲ್ಲ, ನಿಮಗೆ ಅವರು ಗೊತ್ತಿಲ್ಲವೇ?" ಎಂದು ಪ್ರಶ್ನಿಸಿದರು.

"ಬಾರಪ್ಪ ಅರೆಸ್ಟ್ ಮಾಡು, ಈಗಲೇ ಕಮಿಷನರ್ ಕಚೇರಿಗೆ ಬರಲಾ?" - ಹೆಚ್‌ಡಿಕೆ ಖಡಕ್ ಸವಾಲು

"ನಿಮಗೆ ಇಷ್ಟ ಬಂದ ಹಾಗೆ ಕರೆಸಲು ನಿಮ್ಮಪ್ಪ ಅಪ್ಪಣೆ ಕೊಟ್ಟಿಲ್ಲ. ಗೃಹ ಇಲಾಖೆ ನಿಮ್ಮಪ್ಪನ ಆಸ್ತಿಯಾ? ಅಧಿಕಾರವಿದೆ ಎಂದು ಎಷ್ಟು ಕುಟುಂಬಗಳನ್ನು ಹಾಳು ಮಾಡುತ್ತೀರಾ? ತನಿಖೆಗೆ ಕರೆಸಬೇಡಪ್ಪ, ನಾನೇ ನೇರವಾಗಿ ನಿಮ್ಮ ಕಚೇರಿಗೆ ಬರುತ್ತೇನೆ! ನನ್ನ ತಾಳ್ಮೆಗೆ ಇತಿಮಿತಿ ಇದೆ. ಕಂಡವರ ಮನೆ ಹಾಳು ಮಾಡುವ ಕೆಲಸ ಬಿಟ್ಟು ಬಾರಪ್ಪ, ನೋಡೋಣ ನಾನು ತಯಾರಿದ್ದೇನೆ. ನೀನು ಗೃಹ ಸಚಿವಾನಾ? ತಾಕತ್ತಿದ್ದರೆ ಒಬ್ಬ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಿ. ನಾನು ಗಂಡಸಾಗಿ ಮಾತನಾಡುತ್ತಿದ್ದೇನೆ, ಹೋರಾಟ ಶುರು ಮಾಡಿದ್ದೇನೆ. ಬರಬೇಕಾ, ಈಗಲೇ ಪೊಲೀಸ್ ಕಮಿಷನರ್ ಆಫೀಸ್‌ಗೆ ಬರಲಾ? ಬಾರಪ್ಪ ಅರೆಸ್ಟ್ ಮಾಡು ನೋಡ್ತೀನಿ' ಎಂದು ಗರ್ಜಿಸಿದರು.

"ನಾಳೆಯಿಂದ ಐದಾರು ದಿನ ಕೋರ್ಟ್ ರಜೆ ಇದೆ ಎಂದು ಅಧಿಕಾರ ಬಳಸಿ ಕೆಲವರನ್ನು ಅರೆಸ್ಟ್ ಮಾಡಿಸಿ, ನಿಮಗಿಷ್ಟ ಬಂದಂತೆ ಬರೆಸಿಕೊಳ್ಳಲು ನೋಡಿದರೆ ಅದೆಲ್ಲ ನಡೆಯಲ್ಲ. ರಾಕೇಶ್ ಶೆಟ್ಟಿ ಎಷ್ಟು ಕೋಟಿ ಆಸ್ತಿ ಮಾಡಿದ್ದಾನೆ, ಅವನ ಧ್ವನಿ ವೀಡಿಯೋದಲ್ಲಿದ್ದರೂ ಅವನಿಗೆ ರಕ್ಷಣೆ ಕೊಟ್ಟು ಕೂರಿಸಿಕೊಂಡಿದ್ದೀರಿ. ಮಾಧ್ಯಮದ ಹೆಸರು ದುರುಪಯೋಗಪಡಿಸಿಕೊಂಡು ಲೂಟಿ ಮಾಡಲು ಕೈಜೋಡಿಸಿರುವ ಆತನ ವಿರುದ್ಧ ಸುಪ್ರೀಂ ಕೋರ್ಟ್ ಅರೆಸ್ಟ್ ಮಾಡಲು ಹೇಳಿದ್ದರೂ ಯಾಕೆ ಬಂಧಿಸಿಲ್ಲ?" ಎಂದು ಪ್ರಸ್ತಾಪಿಸಿದರು.

ಜನರ ಕ್ಷಮೆ ಕೇಳಿದ ಕುಮಾರಸ್ವಾಮಿ

ಮಾತಿನ ಕೊನೆಯಲ್ಲಿ ಕೊಂಚ ಶಾಂತರಾದ ಕುಮಾರಸ್ವಾಮಿ, "ನಾನು ನನ್ನ ರಾಜಕೀಯ ಜೀವನದಲ್ಲಿ ಎಂದೂ ಇಂತಹ ಕಠಿಣ ಪದಗಳನ್ನು ಬಳಸಿರಲಿಲ್ಲ. ರಾಜ್ಯದ ಜನರ ಕ್ಷಮೆ ಕೇಳುತ್ತೇನೆ. ರಾಜ್ಯ ಉಳಿಯಬೇಕು ಎಂಬ ಕಳಕಳಿಯಿಂದ ತಡೆಯಲಾರದೆ ಮಾತನಾಡಿದ್ದೇನೆ. ಸಾರಿ ಬ್ರದರ್, ಇವತ್ತು ಮನಸ್ಸಿಗೆ ತೀವ್ರ ಬೇಜಾರಾಗಿ ಎಮೋಷನಲ್ ಆಗಿ ಮಾತನಾಡಿದ್ದೇನೆ. ನಾನು ಹೋರಾಟದಿಂದ ಬಂದವನು, ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಹೋರಾಡುತ್ತಿರುವುದಕ್ಕೆ ನನ್ನ ಮೇಲೆ ಬೀಳುತ್ತಿದ್ದಾರೆ. ಆದರೆ ನನ್ನ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ತಾನೊಂದು ಬಗೆದರೆ ದೈವ ಬೇರೊಂದು ಬಗೆಯುತ್ತದೆ ಎಂಬುದು ನೆನಪಿರಲಿ ಎಂದು ಮಾತು ಮುಗಿಸಿದ್ದಾರೆ.

PREV
Read more Articles on
click me!

Recommended Stories

'ನಾನು ಬಾಯಿ ಬಿಟ್ರೆ ಇನ್ನೊಮ್ಮೆ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಬೇಕಾಗುತ್ತೆ' ಎಚ್‌ಡಿ ಕುಮಾರಸ್ವಾಮಿಗೆ ಸಚಿವ ಪ್ರಿಯಾಂಕ್ ಖರ್ಗೆ ಕೌಂಟರ್‌
Bengaluru: ನನ್ನ ವಿರುದ್ಧ ಕೇಸಿದೆ ಎಂದು ಸುಪ್ರೀಂಗೆ ತಪ್ಪು ಮಾಹಿತಿ: ಡಿಜಿಪಿ ಅಲೋಕ್‌ ಅಸಮಾಧಾನ