
ಬೆಂಗಳೂರು: ಬ್ಯುಸಿನೆಸ್‌ಗಳು ಯಾವುದೂ ಅಷ್ಟು ಸುಲಭಕ್ಕೆ ಲಾಭ ತಂದು ಕೊಡಲ್ಲ. ಅದರ ಹಿಂದೆ ಅಪಾರ ಪರಿಶ್ರಮ ಮತ್ತು ತಾಳ್ಮೆ ಮುಖ್ಯವಾಗಿರುತ್ತದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಹೂಡಿಕೆಯಲ್ಲಿ ತಾಳ್ಮೆ ಎಷ್ಟು ಮುಖ್ಯವಾಗಿರುತ್ತದೆ ಅನ್ನೋದನ್ನು ವಿವರಿಸಿದ್ದಾರೆ.
Reddit ನಲ್ಲಿ ಇವರು ತಿಳಿಸಿರುವ ಮಾಹಿತಿ ಪ್ರಕಾರ.. ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್ ಮೇಲೆ ಇನ್ವೆಸ್ಟ್ ಮಾಡಿದ್ದರು. ಕೆಲವು ವರ್ಷಗಳಿಂದ ನಷ್ಟದಂತೆ ಕಂಡಿತು. ಇದೀಗ ಅವರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ತಮ್ಮ ಆರಂಭಿಕ ಕಷ್ಟಗಳ ದಿನಗಳ ಬಗ್ಗೆ ಮಾತನ್ನಾಡಿದ ಅವರು.. 2013ರಲ್ಲಿ ಇವರು ಬೆಂಗಳೂರಿನ ಹರ್ಲೂರು ರಸ್ತೆಯಲ್ಲಿ 1,900 ಚದರ ಅಡಿಯ 3BHK ಫ್ಲ್ಯಾಟ್ ಬುಕ್ ಮಾಡಿದ್ದರು.
ಪ್ರತಿ ಚದರ ಅಡಿಗೆ 3,250 ರೂಪಾಯಿಯಂತೆ ಬುಕ್ ಮಾಡಿದ್ದರು. ಅದರಿಂದ ಮುಂದಿನ 6 ವರ್ಷಗಳ ಕಾಲ ಅಂದರೆ 2019ರವರೆಗೆ ಯಾವುದೇ ಲಾಭ ಸಿಕ್ಕಿರಲಿಲ್ಲ. ಅಪಾರ್ಟ್‌ಮೆಂಟ್ ನಿರ್ಮಾಣವೂ ತೀವ್ರವಾಗಿ ವಿಳಂಬವಾಗಿದೆ. ಅಲ್ಲದೇ ಬೆಲೆಯೂ ಏರಿಕೆ ಆಗಿರಲಿಲ್ಲ. ಆದರೆ ನಾನು ತಾಳ್ಮೆಯಿಂದಲೇ ಇದ್ದೆ. ನನ್ನ ಜೊತೆಗಿದ್ದ ಇತರ ಗ್ರಾಹಕರು ಸಿಕ್ಕ ಸಿಕ್ಕ ಬೆಲೆಗೆ ಮಾರಿ ಹೊರಬಂದರು. ಅನೇಕರು ಇದೇ ನಷ್ಟದಲ್ಲೇ ಮಾರಿಬಿಡಿ. ಬಂದಷ್ಟು ಬರಲಿ ಎಂದಿದ್ದರು. ಆದರೆ ಅವರು ಹಾಗೆ ಮಾಡಲಿಲ್ಲ. ತಾಳ್ಮೆಯಿಂದ ಕಾದು ಆ ಫ್ಲ್ಯಾಟ್ ಉಳಿಸಿಕೊಂಡಿದ್ದರು.
2019ರ ನಂತರ ಮಾರುಕಟ್ಟೆ ಅನಿರೀಕ್ಷಿತವಾಗಿ ಚೇತರಿಸಿಕೊಂಡಿತು. 2025ರ ವೇಳೆಗೆ ಈ ಫ್ಲ್ಯಾಟ್‌ನ ಬೆಲೆ ಚದರ ಅಡಿಗೆ ಬರೋಬ್ಬರಿ ₹16,000ಕ್ಕೆ ಏರಿದೆ. ಅಂದರೆ ಮೂಲ ಬೆಲೆಗಿಂತ ಸುಮಾರು 5 ಪಟ್ಟು (4.9 ಪಟ್ಟು) ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಮಾರಾಟ ಮಾಡುವ ಮುನ್ನ ತಿಂಗಳಿಗೆ ಬರೋಬ್ಬರಿ ₹1.08 ಲಕ್ಷ ಬಾಡಿಗೆ ಆದಾಯವೂ ಅವರಿಗೆ ಸಿಗಲು ಆರಂಭಿಸಿತು. ಅಂತಿಮವಾಗಿ ಅವರು 2025ರಲ್ಲಿ ಉತ್ತಮ ಲಾಭಕ್ಕೆ ಮಾರಾಟ ಮಾಡಿದ್ದಾರೆ.
ಈ ತಾಳ್ಮೆಯ ಪಾಠವನ್ನು ಮಾಡಿದ ಅವರು.. ತಮ್ಮ ಹೂಡಿಕೆಯನ್ನು ಇತರ ಕ್ಷೇತ್ರಗಳಿಗೆ ಹೋಲಿಸಿದ್ದಾರೆ. ನಿಫ್ಟಿ (ಷೇರುಪೇಟೆ): ಸುಮಾರು 2.4 ಪಟ್ಟು ಬೆಳೆಯಿತು. ಚಿನ್ನ: 10 ಗ್ರಾಂಗೆ ₹32,500 ರಿಂದ ₹1.36 ಲಕ್ಷಕ್ಕೆ ಏರಿತು. ಬಿಟ್‌ಕಾಯಿನ್: 20 ಪಟ್ಟಿಗಿಂತ ಹೆಚ್ಚು ಬೆಳೆಯಿತು. ಇವರ ಫ್ಲ್ಯಾಟ್: 4.9 ಪಟ್ಟು ಬೆಲೆ ಏರಿಕೆಯಾಗಿದ್ದಲ್ಲದೆ, ನಿರಂತರ ಬಾಡಿಗೆ ಆದಾಯವನ್ನೂ ನೀಡಿತು ಎಂದು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ಏರಿಳಿತಗಳು ಸಹಜ. ಮಾರುಕಟ್ಟೆ ಕುಸಿದಾಗ ಗಾಬರಿ ಪಡಬೇಕಾಗಿಲ್ಲ. ದೀರ್ಘಾವಧಿಯವರೆಗೆ ತಾಳ್ಮೆಯಿಂದ ಕಾಯ್ದರೆ ದೊಡ್ಡ ಮಟ್ಟದ ಲಾಭ ಪಡೆಯಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಆಗಿದೆ. ಸದ್ಯ ಅವರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜನರು ತಮ್ಮದೇ ಅರ್ಥದಲ್ಲಿ ಚರ್ಚೆ ಮಾಡುತ್ತಿದ್ದಾರೆ.