
ಬೆಂಗಳೂರು (ಡಿ.4): ತಾಂತ್ರಿಕ ದೋಷ, ಮತ್ತಿತರ ಕಾರಣದ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೇವೆ ನೀಡುತ್ತಿದ್ದ ಇಂಡಿಗೋ ಸಂಸ್ಥೆಯ 62 ವಿಮಾನಗಳ ಸೇವೆಯನ್ನು ಬುಧವಾರ ರದ್ದುಗೊಳಿಸಲಾಗಿದೆ.
ವಿಪರೀತ ಮಂಜಿನ ವಾತಾವರಣದಿಂದಾಗಿ ಕಳೆದ ಕೆಲ ದಿನಗಳಿಂದ ವಿಮಾನ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಆದರೆ, ಬುಧವಾರ ವಿಪರೀತ ಮಂಜು, ತಾಂತ್ರಿಕ ದೋಷ, ಸಿಬ್ಬಂದಿ ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಸೇವೆ ನೀಡುವ 62 ವಿಮಾನಗಳ ಸೇವೆಯನ್ನು ರದ್ದು ಮಾಡಲಾಗಿದೆ. ಅದರಲ್ಲಿ ತಲಾ 31 ವಿಮಾನಗಳು ಬರುವ ಮತ್ತು ಹೋಗುವ ವಿಮಾನಗಳಾಗಿವೆ. ಇಂಡಿಗೋ ಸಂಸ್ಥೆಯು ಪ್ರತಿದಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಸರಾಸರಿ 750 ವಿಮಾನಗಳ ಮೂಲಕ ಸೇವೆ ನೀಡುತ್ತಿದೆ.
ವಿಮಾನ ಸೇವೆಗಳ ರದ್ದಿನ ಕುರಿತು ಸ್ಪಷ್ಟನೆ ನೀಡಿರುವ ಇಂಡಿಗೋ ಸಂಸ್ಥೆ, ಕಳೆದೆರಡು ದಿನಗಳಿಂದ ಉಂಟಾಗಿರುವ ನೆಟ್‌ವರ್ಕ್ ಸಮಸ್ಯೆಯಿಂದಾಗಿ ವಿಮಾನ ಸೇವೆಗಳನ್ನು ರದ್ದು ಮಾಡಲಾಗುತ್ತಿದೆ. ಇದು ಸಣ್ಣ ಸಮಸ್ಯೆಯಾಗಿದ್ದು, ಅದನ್ನು ಸರಿಪಡಿಸಲಾಗುತ್ತಿದೆ. ಮುಂದಿನ 48 ಗಂಟೆಗಳೊಳಗೆ ಸಮಸ್ಯೆ ಬಗೆಹರಿಯಲಿದ್ದು, ಈ ಅವಧಿಯಲ್ಲಿ ವಿಮಾನ ಸೇವೆ ರದ್ದು, ಸಮಯ ಮರು ನಿಗದಿ ಮಾಡಲಾಗುತ್ತಿದೆ. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕು. ಪ್ರಯಾಣಿಕರ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಅಥವಾ ಟಿಕೆಟ್ ಮೊತ್ತ ಮರುಪಾವತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.