
ಬೆಂಗಳೂರು: ಬೆಂಗಳೂರಿನಲ್ಲಿ ಮಲಗಿದ್ದ ಬೀದಿ ನಾಯಿ ಮೇಲೆ ಕಾರ್ ಹತ್ತಿಸಿ ವಿಕೃತಿ ಮೆರೆದಿರುವ ಇನ್ನೊಂದು ಘಟನೆ ಸುಂಕದಕಟ್ಟೆಯಲ್ಲಿ ನಡೆದಿದೆ. ನಗರದ ಸುಕಂದಕಟ್ಟೆಯ ಅಂಜನಾ ನಗರದಲ್ಲಿ ಘಟನೆ ನಡೆದಿದೆ. ಮಂಜುನಾಥ್ ಎಂಬುವವರ ಮನೆ ಮುಂದೆ ಕಾರನ್ನು ಬೀದಿ ನಾಯಿಯ ಮೇಲೆ ತಿಳಿದೂ ಹತ್ತಿಸಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 6ನೇ ತಾರೀಖು ನಡೆದ ಘಟನೆ ತಡವಾಗಿ ಬೆಳಕಿಗೆ. ಮನೆ ಮುಂದೆ ಮಲಗಿದ್ದ ಬೀದಿ ನಾಯಿಯ ಮೇಲೆ ಏಕಾಏಕಿ ಕಾರು ಚಾಲಕ ಕಾರು ಹರಿಸಿದ್ದಾನೆ. ಕಾರ್ ಹತ್ತಿಸಿದ ಪರಿಣಾಮ ನಾಯಿಗೆ ಗಂಭೀರ ಗಾಯಗಳಾಗಿವೆ. ನಾಗರಬಾವಿ ವೆಟರನಿಟಿ ಆಸ್ಪತ್ರೆಯಲ್ಲಿ ನಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡ ನಾಯಿಗೆ ವೈದ್ಯರು ಆಪರೇಷನ್ ಮಾಡಿದ್ದು ಚಿಕಿತ್ಸೆ ಮುಂದುವರೆಸಿದ್ದಾರೆ. ಕಾರ್ ನಂಬರ್ ಪರಿಶೀಲನೆ ನಡೆಸುತ್ತಿರುವ ಪೊಲೀಸರು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಾಲ್ಕನೇ ಪ್ರಕರಣ:
ಉದ್ಯಮಿ ಆದಿಕೇಶವಲು ಅವರ ಮೊಮ್ಮಗ ವಿಷ್ಣು ಈ ಹಿಂದೆ ಕುಡಿದ ಮತ್ತಿನಲ್ಲಿ ನಾಯಿಯ ಮೇಲೆ ಬೇಕೆಂದೇ ಕಾರು ಹರಿಸಿದ್ದ. ಅದಾದ ನಂತರ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾದ ಪರಿಣಾಮ ಬಂಧನಕ್ಕೊಳಗಾಗಿದ್ದ. ಇಂದಿರಾ ನಗರ ಸಮೀಪ ಮತ್ತೊಂದು ಬೀದಿ ನಾಯಿ ದಾರುಣವಾಗಿ ಹತ್ಯೆಗೀಡಾಗಿದೆ. ರಸ್ತೆಯಲ್ಲಿ ಮಲಗಿದ್ದ ಬೀದಿ ನಾಯಿ ಮೇಲೆ ಕಾರು ಹರಿಸಿ ಕೊಂದ ಆರೋಪದ ಮೇರೆಗೆ ಖಾಸಗಿ ಕಂಪನಿ ಕಾರು ಚಾಲಕನೊಬ್ಬನ್ನು ಇಂದಿರಾ ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಜಕ್ಕೂರು ನಿವಾಸಿ ಅಮುಲ್ ರಾಜ್ ಬಂಧಿತನಾಗಿದ್ದು, ಎರಡು ದಿನಗಳ ಹಿಂದೆ ಇಂದಿರಾ ನಗರ 2ನೇ ಹಂತದಲ್ಲಿ ಕೆ.ಜಿ.ರಸ್ತೆಯ ‘ಬ್ರೋನಿ’ ಹೆಸರಿನ ಬೀದಿ ನಾಯಿ ಮೇಲೆ ರಾಜ್ ಕಾರು ಹರಿಸಿದ್ದ.
ಈ ಬಗ್ಗೆ ಸ್ಥಳೀಯ ನಿವಾಸಿ ಸ್ನೇಹ ನಂದಿಹಾಳ್ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾಸಗಿ ಕಂಪನಿಯ ಕಾರು ಚಾಲಕನಾಗಿರುವ ರಾಜ್, ಜೂ.5ರಂದು ರಾತ್ರಿ 7ರ ಸುಮಾರಿಗೆ ಇಂದಿರಾ ನಗರದ 2ನೇ ಹಂತದಲ್ಲಿ ತನ್ನ ಸಂಬಂಧಿ ಮನೆಗೆ ಬಂದಿದ್ದ. ಅಲ್ಲಿಂದ ಮರಳುವಾಗ ಕಾರಿನ ಮುಂದೆ ಮಲಗಿದ್ದ ಬೀದಿ ನಾಯಿ ಮೇಲೆ ರಾಜ್ ಕಾರು ಹರಿಸಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ನಾಯಿ ಮೃತಪಟ್ಟಿತ್ತು. ಈ ಕೃತ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಬೊಗಳಿತೆಂದು ನಾಯಿ ಹಾಗೂ ಮಾಲೀಕನ ಮೇಲೆ ಅಮಾನುಷ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
‘ನಾವು ಬ್ರೋನಿ ಹೆಸರಿನ ಬೀದಿ ನಾಯಿಯನ್ನು ಸಾಕಿದ್ದೆವು. ರಸ್ತೆಯಲ್ಲಿ ಮಲಗಿದ್ದ ನಾಯಿ ಮೇಲೆ ಉದ್ದೇಶ ಪೂರ್ವಕವಾಗಿಯೇ ಹತ್ತಿಸಿ ಆರೋಪಿ ಕೊಂದಿದ್ದಾನೆ’ ಎಂದು ಸ್ನೇಹಾ ಆರೋಪಿಸಿದ್ದರು. ‘ನಾನು ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿಲ್ಲ. ಕಾರಿನ ಮುಂದೆ ನಾಯಿ ಮಲಗಿರುವುದನ್ನು ಗಮನಿಸದೆ ಆಕಸ್ಮಿಕವಾಗಿ ಘಟನೆ ನಡೆದಿದೆ’ ಎಂದು ವಿಚಾರಣೆ ವೇಳೆ ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದರು. ಕೆಲ ದಿನಗಳ ಹಿಂದೆ ಲಾರಾ ಹೆಸರಿನ ನಾಯಿ ಮೇಲೆ ಕಾರು ಹರಿಸಿ ಉದ್ಯಮಿ ದಿ.ಆದಿಕೇಶವಲು ಮೊಮ್ಮಗ ಪೈಶಾಚಿಕ ಕೃತ್ಯಕ್ಕೆ ಜನಾಕ್ರೋಶ ವ್ಯಕ್ತವಾಗಿದ್ದನ್ನು ಸ್ಮರಿಸಬಹುದಾಗಿದೆ.
ಬೀದಿನಾಯಿಗಳ ದಾಳಿಗೆ ಪೌರ ಸಂಸ್ಥೆಗಳೇ ಹೊಣೆ: ಬೀದಿ ನಾಯಿಗಳ ದಾಳಿಯಿಂದ ನಾಗರಿಕರು ಗಾಯಗೊಂಡರೆ ಅಥವಾ ಸಾವಿಗೀಡಾದರೆ ಆಯಾ ಸ್ಥಳೀಯ ಪೌರಾಡಳಿತ ಸಂಸ್ಥೆಗಳೇ ಹೊಣೆಯಾಗುತ್ತವೆ, ಹಾಗಾಗಿ ಪರಿಹಾರ ಸಹ ನೀಡಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಬೀದಿ ನಾಯಿಗಳ ದಾಳಿಯಿಂದ ಬಾಲಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ 10 ಲಕ್ಷ ರು. ಪರಿಹಾರ ಪಾವತಿಸುವಂತೆ ಬೆಳಗಾವಿ ಜಿಲ್ಲಾಡಳಿತಕ್ಕೆ ಆದೇಶಿಸಿದೆ. ಬೀದಿ ನಾಯಿಗಳ ದಾಳಿಯಿಂದ ಸಾವನ್ನಪ್ಪಿದ ಎರಡು ವರ್ಷದ ಮಗನನ್ನು ಕಳೆದುಕೊಂಡಿದ್ದ ಬೆಳಗಾವಿಯ ಬಾಳೆಕುಂದ್ರಿ ನಿವಾಸಿ ಯೂಸಬ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಧಾರವಾಡ ಪೀಠದಲ್ಲಿ ಈ ಆದೇಶ ಮಾಡಿದ್ದಾರೆ.
ಹೈಕೋರ್ಟ್ ನಿರ್ದೇಶನಗಳು
- ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಲು ಬೀದಿ ನಾಯಿಗಳಿಗೆ ಸಂತಾನ ಹರಣ ಮತ್ತು ವ್ಯಾಕ್ಸಿನೇಷನ್ ಅನ್ನು ಪ್ರಾಣಿ ಕಲ್ಯಾಣ ಸಂಸ್ಥೆಗಳು ಮತ್ತು ಮೇಲ್ವಿಚಾರಣಾ ಸಮಿತಿಗಳು ಖಾತರಿಪಡಿಸಬೇಕು. ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಕೆಲಸ ಮಾಡಬೇಕು. ಅದಕ್ಕೆ ಎನ್‌ಜಿಒ ಮತ್ತು ಇತರೆ ಸಂಸ್ಥೆಗಳನ್ನು ಬಳಸಿಕೊಳ್ಳಬೇಕು.
-ವಾಸಿಯಾಗದ ಕಾಯಿಲೆ/ಮಾರಣಾಂತಿಕ ಗಾಯಗಳಿಂದ ನರಳುತ್ತಿರುವ ಬೀದಿ ನಾಯಿಗಳಿಗೆ ತಜ್ಞ ಪಶುವೈದ್ಯಕೀಯ ವೈದ್ಯರಿಂದ ದಯಾ ಮರಣ ಕಲ್ಪಿಸಬೇಕು.
- ಆಕ್ರಮಣಕಾರಿ ನಾಯಿಗಳ ಮತ್ತು ರೇಬಿಸ್ ರೋಗದಿಂದ ನರಳುತ್ತಿರುವ ನಾಯಿಗಳ ಕುರಿತು ದೂರುಗಳು ಬಂದರೆ ಸ್ಥಳೀಯ ಸಂಸ್ಥೆಗಳ ಶ್ವಾನ ದಳ ಪರಿಶೀಲಿಸಬೇಕು. ನಾಯಿಗೆ ರೇಬಿಸ್ ಇದ್ದರೆ ಸಹಜ ಸಾವು ಬರುವವರೆಗೂ ಅದನ್ನು ಐಸೋಲೇಷನ್‌ನಲ್ಲಿ ಇಡಬೇಕು.
Uttara kannada; ಭಟ್ಕಳದ ವಿವಿಧೆಡೆ ಬೀದಿ ನಾಯಿ ದಾಳಿ, 7 ಮಂದಿಗೆ ಗಾಯ
- ಬೀದಿ ನಾಯಿಗಳ ಕುರಿತು ನಾಗರಿಕರು ದೂರು ಸಲ್ಲಿಸಲು ದೂರು ಘಟಕ ಸ್ಥಾಪಿಸಬೇಕು.
- ಜನ ವಸತಿ ಪ್ರದೇಶದಲ್ಲಿ ನಾಯಿಗಳು ಹಾವಳಿ ಹೆಚ್ಚಾಗದಂತೆ ಸಮರ್ಪಕವಾಗಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು
- ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತಿಗಳು ನಾಯಿ ದಾಳಿಗೆ ತುತ್ತಾದವರಿಗೆ ಪರಿಹಾರ ಕಲ್ಪಿಸಲು ಸೂಕ್ತ ಮಾರ್ಗಸೂಚಿ ರಚಿಸಬೇಕು.