ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್‌ನಲ್ಲಿ ಬೆಂಗಳೂರಿನ 2ನೇ IKEA ಸಿಟಿ ಸ್ಟೋರ್‌, ಆರಂಭ ಯಾವಾಗ

Published : Oct 29, 2026, 06:33 PM ISTUpdated : Oct 29, 2026, 06:54 PM IST
IKEA Store

ಸಾರಾಂಶ

ಸ್ವೀಡನ್‌ನ ಪ್ರಸಿದ್ಧ ಸಂಸ್ಥೆ ಐಕಿಯಾ, ಕನಕಪುರ ರಸ್ತೆಯಲ್ಲಿ ತನ್ನ ನೂತನ 'ಸಿಟಿ ಸೆಂಟರ್ ಸ್ಟೋರ್' ಅನ್ನು 2026 ರ ನವೆಂಬರ್ 5 ರಂದು ಆರಂಭಿಸಲಿದೆ. 80,000 ಚದರ ಅಡಿ ವಿಸ್ತೀರ್ಣದ ಈ ಮಳಿಗೆಯಲ್ಲಿ ಸ್ಥಳೀಯರ ಅಗತ್ಯಕ್ಕೆ ತಕ್ಕಂತೆ 5,200ಕ್ಕೂ ಹೆಚ್ಚು ವೈವಿಧ್ಯಮಯ ಉತ್ಪನ್ನಗಳು ಲಭ್ಯವಾಗಲಿವೆ.

ಬೆಂಗಳೂರು (ಅ.29): ಸ್ವೀಡನ್‌ನ ಪ್ರಸಿದ್ಧ ಗೃಹೋಪಯೋಗಿ ವಸ್ತುಗಳ ಚಿಲ್ಲರೆ ಮಾರಾಟ ಸಂಸ್ಥೆಯಾದ 'ಐಕಿಯಾ' (IKEA), ಭಾರತದಲ್ಲಿ ತನ್ನ ನಗರ ಪ್ರದೇಶದ ಶಾಪಿಂಗ್ ಜಾಲವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ತನ್ನ ಮೊದಲ ಬೃಹತ್ ಮಳಿಗೆಯನ್ನು ಪ್ರಾರಂಭಿಸಿದ ನಾಲ್ಕೂವರೆ ವರ್ಷಗಳ ನಂತರ, ದಕ್ಷಿಣ ಬೆಂಗಳೂರಿನ ಗ್ರಾಹಕರನ್ನು ತಲುಪುವ ಉದ್ದೇಶದಿಂದ 2026 ರ ನವೆಂಬರ್ 5 ರಂದು ನೂತನ 'ಸಿಟಿ ಸೆಂಟರ್ ಸ್ಟೋರ್' (City Centre Store) ಅನ್ನು ಅಧಿಕೃತವಾಗಿ ಉದ್ಘಾಟಿಸಲಿದೆ.

ಬೆಂಗಳೂರು ದಕ್ಷಿಣ ಭಾಗದ ಕನಕಪುರ ಮುಖ್ಯ ರಸ್ತೆಯಲ್ಲಿರುವ ದೊಡ್ಡಕಲ್ಲಸಂದ್ರ, ಕೋಣನಕುಂಟೆ ಕ್ರಾಸ್‌ನ 'ಪೂರ್ವಾ ಝೆಂಟೆಕ್ ಬಿಸಿನೆಸ್ ಪಾರ್ಕ್'ನಲ್ಲಿ (Purva Zentech Business Park) ಈ ನೂತನ ಮಳಿಗೆ ತಲೆ ಎತ್ತಿದೆ. ಬರೋಬ್ಬರಿ 80,000 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಹೊಸ ಸಿಟಿ ಸ್ಟೋರ್‌ನಲ್ಲಿ 5,200 ಕ್ಕೂ ಹೆಚ್ಚು ವೈವಿಧ್ಯಮಯ ಐಕಿಯಾ ಗೃಹೋಪಯೋಗಿ ಪ್ರಾಡಕ್ಟ್‌ಗಳು ಗ್ರಾಹಕರಿಗೆ ಲಭ್ಯವಾಗಲಿವೆ.

ದಕ್ಷಿಣ ಬೆಂಗಳೂರಿನ ಅಗತ್ಯಕ್ಕೆ ತಕ್ಕಂತೆ ವಿಶೇಷ ವಿನ್ಯಾಸ

ದಕ್ಷಿಣ ಬೆಂಗಳೂರಿನ ವಸತಿ ಮಾದರಿಯು ಸ್ವತಂತ್ರ ಮನೆಗಳು, ಬಹುಪೀಳಿಗೆಯ ಜಂಟಿ ಕುಟುಂಬಗಳ ನಿವಾಸಗಳು ಹಾಗೂ ಕಾಂಪ್ಯಾಕ್ಟ್ ಅಪಾರ್ಟ್‌ಮೆಂಟ್‌ಗಳ ವಿಶಿಷ್ಟ ಮಿಶ್ರಣವನ್ನು ಹೊಂದಿದೆ. ಈ ಭಾಗದ ಜನರ ಬದಲಾಗುತ್ತಿರುವ ಮನೆ ಅಲಂಕಾರದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಸಿಟಿ ಆವೃತ್ತಿಯ ಸ್ಟೋರ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಇಲ್ಲಿ ಜಾಗವನ್ನು ಉಳಿಸುವ (Space-saving storage) ಹಾಗೂ ಒಂದಕ್ಕಿಂತ ಹೆಚ್ಚು ಉದ್ದೇಶಗಳಿಗೆ ಬಳಕೆಯಾಗುವ 'ಮಲ್ಟಿಫಂಕ್ಷನಲ್ ಫರ್ನಿಚರ್‌ಗಳಿಗೆ' (Multifunctional Furniture) ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಗ್ರಾಹಕರಿಗೆ ಸುಲಭವಾಗಿ ಕೈಗೆಟುಕುವಂತೆ ಪ್ರದರ್ಶಿಸಲಾಗುತ್ತದೆ.

ಬೆಂಗಳೂರು ನಮಗೆ ಅತ್ಯಂತ ವಿಶೇಷ: ಐಕಿಯಾ ಇಂಡಿಯಾ ಸಿಇಒ ಸಂತಸ

ಹೊಸ ಮಳಿಗೆಯ ಲೋಕಾರ್ಪಣೆ ಕುರಿತು ಹರ್ಷ ವ್ಯಕ್ತಪಡಿಸಿರುವ ಐಕಿಯಾ ಇಂಡಿಯಾ (IKEA India) ಸಿಇಒ ಪ್ಯಾಟ್ರಿಕ್ ಆಂಟೋನಿ (Patrik Antoni), ನಮ್ಮ ಭಾರತದ ವಾಣಿಜ್ಯ ಪ್ರಯಾಣದಲ್ಲಿ ಬೆಂಗಳೂರು ನಗರಕ್ಕೆ ಅತ್ಯಂತ ವಿಶೇಷವಾದ ಸ್ಥಾನವಿದೆ. ಕಳೆದ ಐದು ವರ್ಷಗಳಲ್ಲಿ ರಾಜಧಾನಿಯ ಸಾವಿರಾರು ಕುಟುಂಬಗಳು ನಮ್ಮನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿವೆ. ಅಲ್ಲಿನ ಜನರು ಹೇಗೆ ಬಾಳುತ್ತಾರೆ, ಅವರ ಮೌಲ್ಯಗಳು ಹಾಗೂ ಅಗತ್ಯಗಳು ಕಾಲಕ್ಕೆ ತಕ್ಕಂತೆ ಹೇಗೆ ಬದಲಾಗುತ್ತಿವೆ ಎಂಬುದನ್ನು ಅವರಿಂದ ನೇರವಾಗಿ ಕಲಿಯುವ ಅದ್ಭುತ ಅವಕಾಶ ನಮಗೆ ಸಿಕ್ಕಿದೆ ಎಂದು ಸ್ಮರಿಸಿದ್ದಾರೆ.

ಅಲ್ಲದೆ, ಬೆಂಗಳೂರಿನಲ್ಲಿ ಮತ್ತೊಂದು ನೂತನ ಸಿಟಿ ಸ್ಟೋರ್ ತೆರೆಯುತ್ತಿರುವುದು ಸಂಸ್ಥೆಗೆ ದೊರೆತ ದೊಡ್ಡ ಮೈಲಿಗಲ್ಲು. ಇದು ಗ್ರಾಹಕರಿಗೆ ಐಕಿಯಾ ಉತ್ಪನ್ನಗಳನ್ನು ಮತ್ತಷ್ಟು ಹತ್ತಿರದಿಂದ, ಸುಲಭವಾಗಿ ಮತ್ತು ಅನುಕೂಲಕರವಾಗಿ ತಲುಪಿಸುವ ನಮ್ಮ ಬದ್ಧತೆಯನ್ನು ಎತ್ತಿಹಿಡಿಯುತ್ತದೆ ಎಂದು ಸಿಇಒ ಪ್ಯಾಟ್ರಿಕ್ ಆಂಟೋನಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಐಕಿಯಾ ಹೆಜ್ಜೆಗುರುತು ಹಾಗೂ ದೇಶಾದ್ಯಂತ ಜಾಲ

ಐಕಿಯಾ ಸಂಸ್ಥೆಯು 2021 ರಲ್ಲಿ ಇ-ಕಾಮರ್ಸ್ (E-commerce) ಮೂಲಕ ಬೆಂಗಳೂರು ನಗರಕ್ಕೆ ಮೊದಲ ಬಾರಿಗೆ ಕಾಲಿಟ್ಟಿತ್ತು. ತದನಂತರ, 2022 ರ ಜೂನ್ 22 ರಂದು ಬೆಂಗಳೂರಿನ ನಾಗಸಂದ್ರದಲ್ಲಿ (Nagasandra) ಬರೋಬ್ಬರಿ 4.6 ಲಕ್ಷ ಚದರ ಅಡಿ ವಿಸ್ತೀರ್ಣದ ಅತ್ಯಂತ ದೊಡ್ಡ ಮಾದರಿಯ (Large-format) ಬೃಹತ್ ಮಳಿಗೆಯನ್ನು ತೆರೆಯುವ ಮೂಲಕ ಕರ್ನಾಟಕದ ಚಿಲ್ಲರೆ ಮಾರುಕಟ್ಟೆಗೆ ಅಧಿಕೃತ ಪ್ರವೇಶ ನೀಡಿತ್ತು. ಇದೀಗ ಕನಕಪುರ ರಸ್ತೆಯಲ್ಲಿ ತೆರೆಯಲಾಗುತ್ತಿರುವ ಶಾಪ್ ನಗರದಲ್ಲಿ ಐಕಿಯಾದ ಎರಡನೇ ಮಳಿಗೆಯಾಗಿದೆ.

ಐಕಿಯಾದ ಪ್ರಸ್ತುತ ನೆಟ್‌ವರ್ಕ್ ವಿವರ

ಪ್ರಸ್ತುತ ಐಕಿಯಾ ಭಾರತದಲ್ಲಿ ಮುಂಬೈನ ವರ್ಲಿ, ನವದೆಹಲಿಯ ಠಾಗೋರ್ ಗಾರ್ಡನ್ ಮತ್ತು ಸಾಕೇತ್‌ನ ಡಿಎಲ್‌ಎಫ್ ಅವೆನ್ಯೂ ಹಾಗೂ ಪುಣೆಯ ಫೀನಿಕ್ಸ್ ಮಾರ್ಕೆಟ್‌ಸಿಟಿಯಲ್ಲಿ ಒಟ್ಟು 4 ಸಿಟಿ ಸ್ಟೋರ್‌ಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಬೆಂಗಳೂರಿನದ್ದು 5ನೇ ಸಿಟಿ ಸ್ಟೋರ್ ಆಗಲಿದೆ. ಹೈದರಾಬಾದ್, ನವಿ ಮುಂಬೈ ಹಾಗೂ ಬೆಂಗಳೂರಿನ ನಾಗಸಂದ್ರದಲ್ಲಿ ಒಟ್ಟು 3 ಬೃಹತ್ ಪ್ರಮಾಣದ ಲಾರ್ಜ್-ಫಾರ್ಮ್ಯಾಟ್ ಮಳಿಗೆಗಳನ್ನು ಕಂಪನಿ ಹೊಂದಿದೆ. ಪ್ರಸ್ತುತ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ-ತೆಲಂಗಾಣ, ಗುಜರಾತ್, ದೆಹಲಿ-ಎನ್‌ಸಿಆರ್, ಆಗ್ರಾ, ಪ್ರಯಾಗ್‌ರಾಜ್, ಅಮೃತಸರ, ಚಂಡೀಗಢ, ಜೈಪುರ, ಕಾನ್‌ಪುರ, ಲಕ್ನೋ, ಲೂಧಿಯಾನ, ವಾರಣಾಸಿ ಹಾಗೂ ಗೋವಾ ರಾಜ್ಯಗಳ ವ್ಯಾಪ್ತಿಯಲ್ಲಿ ಐಕಿಯಾ ಆನ್‌ಲೈನ್ ಶಾಪಿಂಗ್ ಸೇವೆ ಸಕ್ರಿಯವಾಗಿದೆ.

PREV
Read more Articles on
click me!

Recommended Stories

Name Change: ಕಾಂಗ್ರೆಸ್‌ಗೆ ಮತ್ತೆ ಕಾಡಿದ ಕೊನೇ ಕ್ಷಣದ ಬದಲಾವಣೆ: ರಾಜ್ಯೋತ್ಸವ ಪಟ್ಟಿ ಘೋಷಣೆ ಬಳಿಕ ದಿಢೀರ್ ತಿದ್ದುಪಡಿ!
ಮೆಟ್ರೋದಿಂದ ಕರೆಂಟ್‌ವರೆಗೆ, ಹಾಲಿನಿಂದ ನೀರಿನವರೆಗೆ: ಇದು ರಾಜ್ಯ ಸರ್ಕಾರದ ಬೆಲೆ ಏರಿಕೆ ABCD