
ಬೆಂಗಳೂರು (ಸೆ.29): ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನ 3ನೇ ಸೆಕ್ಟರ್‌ನಲ್ಲಿ ಮದ್ಯದ ಅಮಲಿನಲ್ಲಿದ್ದ ಇಬ್ಬರು ಯುವತಿಯರು ಹಾಗೂ ಆಟೋ ಚಾಲಕನ ನಡುವೆ ರಸ್ತೆಯಲ್ಲೇ ನಡೆದ ಭೀಕರ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆದರೆ, ಚಾಲಕನ ಮೇಲೆಯೂ ಹಲ್ಲೆ ನಡೆಸಿದ ಆ ಯುವತಿಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಅವರಿಗೆ 'ನಾಳೆ ಬಾ' ಎಂಬಂತೆ ಕಾಲಾವಕಾಶ ನೀಡಿರುವ ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
"ಚಾಲಕನ ಮೇಲೂ ಹಲ್ಲೆ ನಡೆಸಿದ ಆ ಯುವತಿಯರ ಬಂಧನ ಯಾವಾಗ? ಕಾನೂನು ಬರೀ ಪುರುಷರಿಗೆ ಮಾತ್ರವೇ?" ಎಂದು ನೆಟ್ಟಿಗರು ಎಚ್‌ಎಸ್‌ಆರ್ ಲೇಔಟ್ ಪೊಲೀಸರನ್ನು ತೀವ್ರವಾಗಿ ಪ್ರಶ್ನೆ ಮಾಡಿದ್ದಾರೆ.
ಸೋಮವಾರ (ಸೆ.28) ಮಧ್ಯಾಹ್ನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಇಬ್ಬರು ಯುವತಿಯರು ಮತ್ತು ಆಟೋ ಚಾಲಕ ಪರಸ್ಪರ ಕೈಕೈ ಮಿಲಾಯಿಸಿಕೊಂಡು ರಸ್ತೆಯಲ್ಲೇ ಜಗಳವಾಡಿದ್ದಾರೆ. ಸಾರ್ವಜನಿಕರು ಇದನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವೀಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆಗೆ ಇಳಿದಿದ್ದರು. ಪೊಲೀಸರು ಆಟೋ ಚಾಲಕನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ, "ಯುವತಿಯರು ಆಟೋ ಬಾಡಿಗೆಗೆ ಪಡೆದಿದ್ದರು. ಇಳಿಯುವಾಗ ಹಣ ಪಾವತಿಸಲು ನಿರಾಕರಿಸಿ ಮದ್ಯದ ಅಮಲಿನಲ್ಲಿ ನನ್ನನ್ನು ನಿಂದಿಸಿದರು. ಅಷ್ಟಕ್ಕೇ ಸುಮ್ಮನಾಗದೆ ಅವರೇ ಮೊದಲು ನನ್ನ ಮೇಲೆ ಹಲ್ಲೆ ನಡೆಸಿದರು. ಪ್ರತಿಯಾಗಿ ನಾನು ಹಲ್ಲೆ ಮಾಡಬೇಕಾಯಿತು" ಎಂದು ಚಾಲಕ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಇಡೀ ಘಟನೆಯಲ್ಲಿ ಪೊಲೀಸರು ಯುವತಿಯರನ್ನು ಸಂಪರ್ಕಿಸಿ ದೂರು ನೀಡುವಂತೆ ಕೋರಿದಾಗ, ಅವರು ಠಾಣೆಗೆ ಬರಲು ನಿರಾಕರಿಸಿ ಒಂದೆರಡು ದಿನಗಳ ಕಾಲಾವಕಾಶ ಕೋರಿದ್ದಾರೆ. ಆದರೂ ಎಚ್‌ಎಸ್‌ಆರ್ ಲೇಔಟ್ ಪೊಲೀಸರು, "ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ," ಎಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಪೊಲೀಸರು ಹಂಚಿಕೊಂಡ ಪೋಸ್ಟ್‌ನ ಕಮೆಂಟ್ ವಿಭಾಗದಲ್ಲಿ ಸಾರ್ವಜನಿಕರು ಪೊಲೀಸರ ಇಬ್ಬಂದಿ ನೀತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ ಯುವತಿಯರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಸಾರ್ವಜನಿಕವಾಗಿ ಆ ವ್ಯಕ್ತಿಯ ಮೇಲೆಯೂ ಹಲ್ಲೆಯಾಗಿದೆ, ಆತನ ಗೌರವದ ಕಥೆಯೇನು? ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನೊಬ್ಬ ಯೂಸರ್, 'ಕಾನೂನು ಎನ್ನುವುದು ಬರೀ ಪುರುಷರಿಗೆ ಮಾತ್ರ ಅನ್ವಯಿಸುತ್ತದೆಯೇ? ಮಹಿಳೆಯರಿಗೆ ಅನ್ವಯಿಸುವುದಿಲ್ಲವೇ? ಎರಡು ಕಡೆಯ ವಿಚಾರಣೆಯನ್ನು ಆಲಿಸದೇ ಸ್ಥಳೀಯ ಆಟೋ ಚಾಲಕನೇ ತಪ್ಪು ಎಂದು ಬಿಂಬಿಸುವುದು ಎಷ್ಟು ಸರಿ?" ಎಂದು ಬರೆದುಕೊಂಡಿದ್ದಾರೆ.
"ಯಾರೇ ಆಗಲಿ ಮೊದಲು ಹಲ್ಲೆ ನಡೆಸಿದವರ ಮೇಲೆ ಶಿಕ್ಷೆಯಾಗಬೇಕು. ಚಾಲಕನಿಗೆ ಹೊಡೆದ ಆ ಯುವತಿಯರನ್ನೂ ತಕ್ಷಣವೇ ಜೈಲಿಗೆ ಹಾಕಿ, ಇಲ್ಲವಾದರೆ ನೀವು ಈಗಾಗಲೇ ಆ ಬಡ ಚಾಲಕನಿಗೆ ಅನ್ಯಾಯ ಮಾಡಿದ್ದೀರಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬರು ಆಡಳಿತ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡು, "ಅಲ್ಲಿ ನಡೆದಿರುವ ಘಟನೆಯನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಿ. ಮಹಿಳೆ ಎನ್ನುವ ಮಾತ್ರಕ್ಕೆ ವಿನಾಯಿತಿ ಬೇಡ, ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಮಾನವಾಗಿ ಶಿಕ್ಷೆ ನೀಡಿ" ಎಂದು ಆಗ್ರಹಿಸಿದ್ದಾರೆ. ಇನ್ನೂ ಕೆಲವು ಕನ್ನಡಿಗರು ಕಮೆಂಟ್ ಮಾಡಿ, "ಸಾಮಾನ್ಯರ ಮೇಲೆ ಸುಲಭವಾಗಿ ಪ್ರಕರಣ ದಾಖಲಿಸುವ ಪೊಲೀಸರು, ಸಾರ್ವಜನಿಕವಾಗಿ ಚಾಲಕನ ಮೇಲೆ ಹಲ್ಲೆ ಮಾಡಿದ ಯುವತಿಯರ ದೂರು ದಾಖಲಿಸಿಕೊಳ್ಳಲು 'ನಾಳೆ ಬಾ' ಎಂದು ಕಾಯುತ್ತಿರುವುದು ಪೊಲೀಸರ ಪಕ್ಷಪಾತ ಧೋರಣೆಯನ್ನು ತೋರಿಸುತ್ತದೆ" ಎಂದು ಖಂಡಿಸಿದ್ದಾರೆ.