ತೀರಾ ಮಂದಗತಿಯಲ್ಲಿ ಕಾಮಗಾರಿ, ಜೂನ್‌ 2027ಕ್ಕೂ ಹೆಬ್ಬಾಳ-ಏರ್‌ಪೋರ್ಟ್‌ ಮೆಟ್ರೋ ಲಿಂಕ್‌ ಅನುಮಾನ!

Published : Aug 20, 2026, 05:14 PM IST
Hebbal Metro

ಸಾರಾಂಶ

ಹೆಬ್ಬಾಳ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ನಮ್ಮ ಮೆಟ್ರೋ ಸಂಪರ್ಕವು ನಿಧಾನಗತಿಯ ಕಾಮಗಾರಿಯಿಂದಾಗಿ 2027ರ ಜೂನ್ ಗಡುವು ತಪ್ಪುವ ಸಾಧ್ಯತೆಯಿದೆ. ಗುತ್ತಿಗೆದಾರ ಸಂಸ್ಥೆಯು ಮೂರನೇ ಬಾರಿಗೆ ಗಡುವು ವಿಸ್ತರಣೆ ಕೋರಿದೆ.

ಬೆಂಗಳೂರು (ಆ.20): ನಗರದ ಪ್ರಮುಖ ಹೆಬ್ಬಾಳ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIA) ನಡುವಿನ ನಮ್ಮ ಮೆಟ್ರೋ ಸಂಪರ್ಕವು ತನ್ನ ಇತ್ತೀಚಿನ ಗಡುವಾದ 2027ರ ಜೂನ್‌ ವೇಳೆಗೆ ಪೂರ್ಣಗೊಳ್ಳುವುದು ಬಹುತೇಕ ಅನುಮಾನವಾಗಿದೆ. ಯಲಹಂಕ ದಾಟಿದ ನಂತರದ ಮಾರ್ಗದಲ್ಲಿ ಕಾಮಗಾರಿ ತೀರಾ ಮಂದಗತಿಯಲ್ಲಿ ಸಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) 27.44 ಕಿಮೀ ಉದ್ದದ ಹೆಬ್ಬಾಳ-ವಿಮಾನ ನಿಲ್ದಾಣ ವಿಭಾಗವನ್ನು 2027ರ ಜೂನ್ ವೇಳೆಗೆ ಉದ್ಘಾಟಿಸಲು ಯೋಜಿಸಿತ್ತು. ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಕೂಡ ಜೂನ್‌ನಲ್ಲಿ ಈ ಗಡುವನ್ನು ಪುನರುಚ್ಚರಿಸಿದ್ದರು. ಈ ವಿಭಾಗವು ನಮ್ಮ ಮೆಟ್ರೋ ಎರಡನೇ ಹಂತ '2B' ಯೋಜನೆಯ ಒಟ್ಟು 38.44 ಕಿಮೀ ಉದ್ದದ ಕೆ.ಆರ್. ಪುರಂ-ಏರ್‌ಪೋರ್ಟ್ ಮೆಟ್ರೋ ಕಾರಿಡಾರ್‌ನ ಭಾಗವಾಗಿದೆ.

ಮೆಟ್ರೋ ಮಾರ್ಗದ ಕಾರ್ಯಾಚರಣೆ ಯೋಜನೆ

2023ರಲ್ಲಿ ಸಂಭವಿಸಿದ ಭೀಕರ ಅಪಘಾತದ ನಂತರ ಒಂಬತ್ತು ತಿಂಗಳ ಕಾಲ ಕಾಮಗಾರಿ ಸ್ಥಗಿತಗೊಂಡಿದ್ದರಿಂದ 11 ಕಿಮೀ ಉದ್ದದ ಕೆ.ಆರ್. ಪುರಂ-ಹೆಬ್ಬಾಳ ವಿಭಾಗದ ಪ್ರಗತಿ ಹಿನ್ನಡೆ ಅನುಭವಿಸಿತ್ತು. ಆದರೂ, BMRCL ಹೆಬ್ಬಾಳ-ಏರ್‌ಪೋರ್ಟ್ ಮಾರ್ಗವನ್ನು 2027ರ ಜೂನ್ ವೇಳೆಗೆ ಕಮಿಷನ್ ಮಾಡುವ ಭರವಸೆ ಹೊಂದಿತ್ತು. ಕೆಂಪಾಪುರ ನಿಲ್ದಾಣ ಸಿದ್ಧವಾಗುವವರೆಗೆ ವಿಮಾನ ನಿಲ್ದಾಣ ಮತ್ತು ಯಲಹಂಕ ನಡುವೆ ಎರಡೂ ಟ್ರ್ಯಾಕ್‌ಗಳಲ್ಲಿ ಹಾಗೂ ಯಲಹಂಕ ಮತ್ತು ಹೆಬ್ಬಾಳ ನಡುವೆ ಒಂದೇ ಟ್ರ್ಯಾಕ್‌ನಲ್ಲಿ (Single Track) ಮೆಟ್ರೋ ರೈಲುಗಳನ್ನು ಓಡಿಸಲು ಯೋಜಿಸಲಾಗಿತ್ತು. ಏಕೆಂದರೆ ಹೆಬ್ಬಾಳ ನಿಲ್ದಾಣದಲ್ಲಿ ರೈಲುಗಳು ಹಿಂತಿರುಗಲು (Turnout) ಸೌಲಭ್ಯವಿಲ್ಲದ ಕಾರಣ ಈ ವ್ಯವಸ್ಥೆ ಮಾಡಲಾಗಿತ್ತು.

ಮೂರು ಪ್ಯಾಕೇಜ್‌ಗಳ ಕಾಮಗಾರಿ ವಿವರ

ಹೆಬ್ಬಾಳ-ವಿಮಾನ ನಿಲ್ದಾಣದ ವಿಭಾಗವನ್ನು ಮೂರು ಪ್ಯಾಕೇಜ್‌ಗಳಲ್ಲಿ ನಿರ್ಮಿಸಲಾಗುತ್ತಿದೆ:

  • ಪ್ಯಾಕೇಜ್-ಎ: ಹೆಬ್ಬಾಳದಿಂದ ಬಾಗಲೂರು ಕ್ರಾಸ್ (11.67 ಕಿಮೀ)
  • ಪ್ಯಾಕೇಜ್-ಬಿ: ಐಎಎಫ್ ಯಲಹಂಕದಿಂದ ಏರ್‌ಪೋರ್ಟ್ ಟರ್ಮಿನಲ್ (15.01 ಕಿಮೀ)
  • ಪ್ಯಾಕೇಜ್-ಸಿ: ವಿಮಾನ ನಿಲ್ದಾಣದ ಆವರಣದೊಳಗೆ ಅಟ್-ಗ್ರೇಡ್ ವಿಭಾಗ, ಸುರಂಗ ಮಾರ್ಗ ಮತ್ತು ನಿಲ್ದಾಣಗಳ ನಿರ್ಮಾಣ.

ಎನ್​ಸಿಸಿ ಲಿಮಿಟೆಡ್ (NCC Ltd) ಮೊದಲ ಎರಡು ಪ್ಯಾಕೇಜ್‌ಗಳನ್ನು ಕಾರ್ಯಗತಗೊಳಿಸುತ್ತಿದ್ದರೆ, ಎಐಸಿ ಇನ್ಫ್ರಾಸ್ಟ್ರಕ್ಚರ್ಸ್ ಪ್ರೈವೇಟ್ ಲಿಮಿಟೆಡ್ (AIC Infrastructures) ಮೂರನೇ ಪ್ಯಾಕೇಜ್ ನಿರ್ವಹಿಸುತ್ತಿದೆ.

ಮೂರನೇ ಬಾರಿಗೆ ಗಡುವು ವಿಸ್ತರಣೆ ಕೋರಿದ ಎನ್‌ಸಿಸಿ

ಐಎಎಫ್ ಯಲಹಂಕ-ಏರ್‌ಪೋರ್ಟ್ ಟರ್ಮಿನಲ್ ವಿಭಾಗವನ್ನು ಪೂರ್ಣಗೊಳಿಸಲು ಎನ್‌ಸಿಸಿ ಸಂಸ್ಥೆಯು ಈಗ 2027ರ ಮಾರ್ಚ್‌ವರೆಗೆ ಸಮಯ ಕೋರಿದ್ದು, ಇದು ಮೂರನೇ ವಿಸ್ತರಣೆಯಾಗಿದೆ! ಈ ಯೋಜನೆಯ ಮೂಲ ಗಡುವು 2024ರ ಮಾರ್ಚ್ ಆಗಿತ್ತು, ಅದನ್ನು ಮೊದಲು 2025ರ ಜೂನ್‌ಗೆ ಹಾಗೂ ನಂತರ 2026ರ ಜೂನ್‌ಗೆ ವಿಸ್ತರಿಸಲಾಗಿತ್ತು.

ಇತ್ತೀಚಿನ ಪರಿಶೀಲನೆಯ ಪ್ರಕಾರ, ಈ ವಿಭಾಗದ ಕಾಮಗಾರಿ ಕೇವಲ ಶೇ. 80 ರಷ್ಟು ಮಾತ್ರ ಪೂರ್ಣಗೊಂಡಿದೆ. ಆದ್ದರಿಂದ ಎನ್‌ಸಿಸಿ ಹೆಚ್ಚುವರಿ 9 ತಿಂಗಳ ಕಾಲಾವಕಾಶ ಕೇಳಿದೆ. ಸಿವಿಲ್ ಕಾಮಗಾರಿ ಪೂರ್ಣಗೊಂಡ ನಂತರ ಟ್ರಯಲ್ ರನ್ ನಡೆಸಿ ಮಾರ್ಗವನ್ನು ಕಮಿಷನ್ ಮಾಡಲು ಸಾಮಾನ್ಯವಾಗಿ ಕನಿಷ್ಠ ಆರು ತಿಂಗಳು ಬೇಕಾಗುತ್ತದೆ. ಹೀಗಾಗಿ, ಈ ಮಾರ್ಗವು 2027ರ ಸೆಪ್ಟೆಂಬರ್ ಒಳಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿಲ್ಲ.

ರೈಲ್ವೆ ಹಳಿಗಳ ಮೇಲೆ ಬೃಹತ್ ಗಿರ್ಡರ್ ಅಳವಡಿಕೆ

ಬರುವ ವಾರಗಳಲ್ಲಿ ಮೆಟ್ರೋ ಮೇಲ್ಸೇತುವೆಗಾಗಿ ಯಲಹಂಕದ ರೈಲ್ವೆ ಹಳಿಯ ಮೇಲೆ ಓಪನ್ ವೆಬ್ ಗಿರ್ಡರ್ (OWG) ಹಾಗೂ ದೊಡ್ಡಜಾಲ ಮತ್ತು ಶೆಟ್ಟಿಗೆರೆ ಬಳಿ ರೈಲ್ವೆ ಹಳಿಗಳ ಸಮೀಪ ಕಾಂಪೊಸಿಟ್ ಗಿರ್ಡರ್‌ಗಳನ್ನು ಅಳವಡಿಸಲು BMRCL ಯೋಜಿಸಿದೆ. "ರೈಲ್ವೆಯಿಂದ ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆ. ಸಿದ್ಧತೆಗಳು ನಡೆಯುತ್ತಿದ್ದು, ಲೈನ್ ಮತ್ತು ಪವರ್ ಬ್ಲಾಕ್ (Line & Power block) ಸಿಕ್ಕ ತಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೂರ್ಣಗೊಂಡ ವಿಭಾಗಗಳಲ್ಲಿ ಹಳಿ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ನಂತರ ಸಿಸ್ಟಮ್ಸ್ ಕಾಮಗಾರಿಗಳು ಜರುಗಲಿವೆ.

ಸಂಚಾರ ಪೊಲೀಸರ ಜೊತೆ ಹೈ-ಲೆವೆಲ್ ಮೀಟಿಂಗ್

ಕಾಮಗಾರಿಯನ್ನು ವೇಗಗೊಳಿಸಲು ಸಂಚಾರ ಪೊಲೀಸರೊಂದಿಗೆ ನಿಯಮಿತ ಸಮನ್ವಯ ಸಭೆಗಳನ್ನು ನಡೆಸಲಾಗುವುದು ಎಂದು BMRCL ಬುಧವಾರ ತಿಳಿಸಿದೆ. BMRCL ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್ ಮತ್ತು ಹಿರಿಯ ಅಧಿಕಾರಿಗಳು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಜಂಟಿ ಕಮಿಷನರ್ (ಸಂಚಾರ) ಕಾರ್ತಿಕ್ ರೆಡ್ಡಿ ಮತ್ತು ಇತರ ಹಿರಿಯ ಸಂಚಾರ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿದರು.

ವಿಶೇಷವಾಗಿ ಕೆ.ಆರ್. ಪುರಂ ಮತ್ತು ಹೆಬ್ಬಾಳ ನಡುವೆ ಮೆಟ್ರೋ ನಿರ್ಮಾಣದ ಸಮಯದಲ್ಲಿ ಎದುರಾಗುತ್ತಿರುವ ಸವಾಲುಗಳು ಮತ್ತು ನಡೆಯುತ್ತಿರುವ ಕಾಮಗಾರಿಗಳ ಕುರಿತು BMRCL ಅಧಿಕಾರಿಗಳು ವಿವರಿಸಿದರು. ಸವಾಲುಗಳನ್ನು ಒಪ್ಪಿಕೊಂಡ ಪೊಲೀಸ್ ಕಮಿಷನರ್ ಪರಿಹಾರ ಕ್ರಮಗಳನ್ನು ಸಲಹೆ ಮಾಡಿದರು. ಕಾಮಗಾರಿ ಸ್ಥಳಗಳಲ್ಲಿ ಸಂಚಾರ ನಿರ್ವಹಣೆಯ ವಿವರವಾದ ಯೋಜನೆಗಳ ಬಗ್ಗೆಯೂ ಚರ್ಚಿಸಲಾಯಿತು. BMRCL ಡಿಸೆಂಬರ್ 2027 ರ ವೇಳೆಗೆ ಕೆ.ಆರ್. ಪುರಂ-ಹೆಬ್ಬಾಳ ವಿಭಾಗವನ್ನು ತೆರೆಯುವ ಗುರಿಯನ್ನು ಹೊಂದಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಪ್ರವಾಸಿ ತಾಣಗಳಿಗೆ ಹೈಟೆಕ್ ಲುಕ್: ಮಯೂರ ಹೋಟೆಲ್‌ಗೆ 2 ಕೋಟಿ ಅನುದಾನ, 6 ತಿಂಗಳಲ್ಲಿ ಮ್ಯೂಸಿಯಂ ನವೀಕರಣ ಪೂರ್ಣ!
Karnataka Rains: ದೀರ್ಘ ಬರಗಾಲದ ಬಳಿಕ ರಾಜ್ಯದಲ್ಲಿ ವ್ಯಾಪಕ ಮಳೆ; ಈ ಪ್ರದೇಶಗಳಲ್ಲಿ ಗಂಟೆಗೆ 60KM ವೇಗದಲ್ಲಿ ಗಾಳೆ, ಮಳೆಯ ಎಚ್ಚರಿಕೆ