
ಬೆಂಗಳೂರು (ಆ.20): ನಗರದ ಪ್ರಮುಖ ಪ್ರವಾಸಿ, ಸಾಂಸ್ಕೃತಿಕ ಹಾಗೂ ಪರಂಪರೆಯ ತಾಣಗಳು ಶೀಘ್ರದಲ್ಲೇ ಹೊಸ ಹೈಟೆಕ್ ಕಳೆ ಪಡೆದುಕೊಳ್ಳಲಿವೆ. ರಾಜಧಾನಿಯ ಕೆಎಸ್‌ಟಿಡಿಸಿ (KSTDC) ಮಯೂರ ಹೋಟೆಲ್‌ಗೆ 2 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಯಕಲ್ಪ ನೀಡಲು ಹಾಗೂ ಸರ್ಕಾರಿ ವಸ್ತುಸಂಗ್ರಹಾಲಯದ (Government Museum) ಸುಸಜ್ಜಿತ ನವೀಕರಣ ಕಾಮಗಾರಿಯನ್ನು ಮುಂಬರುವ 6 ತಿಂಗಳ ಒಳಗಾಗಿ ಪೂರ್ಣಗೊಳಿಸಲು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ನಿರ್ದೇಶನ ನೀಡಿದ್ದಾರೆ.
ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಿಗೆ ದಿಢೀರ್ ಭೇಟಿ ನೀಡಿದ ಸಚಿವರು, ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ನಗರದ ಬಾಲ ಭವನ, ಕೆಎಸ್‌ಟಿಡಿಸಿಯ ಮಯೂರ ಹೋಟೆಲ್, ಬೆಂಗಳೂರು ಸರ್ಕಾರಿ ವಸ್ತುಸಂಗ್ರಹಾಲಯ ಹಾಗೂ ವೆಂಕಟಪ್ಪ ಆರ್ಟ್ ಗ್ಯಾಲರಿಗಳ ಅಭಿವೃದ್ಧಿಗೆ ತಕ್ಷಣದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನಗರದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರವಾಸಿಗರಿಗೆ ಉತ್ತಮ ರೀತಿಯಲ್ಲಿ ತಲುಪಿಸುವುದು ಮತ್ತು ಮಕ್ಕಳು ಹಾಗೂ ಕುಟುಂಬಗಳಿಗೆ ಪ್ರವಾಸ ಅನುಕೂಲಕರವಾಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಕೆಎಸ್‌ಟಿಡಿಸಿಯ ಮಯೂರ ಹೋಟೆಲ್‌ನ ಸಂಪೂರ್ಣ ನವೀಕರಣಕ್ಕಾಗಿ ವಿವರವಾದ ಅಭಿವೃದ್ಧಿ ಯೋಜನೆಯನ್ನು (DPR) ಸಿದ್ಧಪಡಿಸುವಂತೆ ಸಚಿವರು ಸೂಚಿಸಿದ್ದಾರೆ. ಇದಕ್ಕಾಗಿ ಸುಮಾರು 2 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ.
ಹೋಟೆಲ್‌ನ ಮೂಲಸೌಕರ್ಯಗಳನ್ನು ಆಧುನಿಕಗೊಳಿಸುವುದು ಹಾಗೂ ಪ್ರವಾಸಿಗರಿಗೆ ಉತ್ತಮ ಅನುಭವ ನೀಡುವುದು ಇದರ ಮುಖ್ಯ ಗುರಿಯಾಗಿದೆ. ವಿಶೇಷವಾಗಿ ಇಲ್ಲಿ ನೀಡಲಾಗುವ ಆಹಾರದ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮಕ್ಕಳಿಗೆ ಇಷ್ಟವಾಗುವ ಉಪಹಾರ ಹಾಗೂ ತಿನಿಸುಗಳನ್ನು ಮೆನುವಿನಲ್ಲಿ ಸೇರಿಸಲು ತಿಳಿಸಲಾಗಿದೆ. ಮಯೂರ ಹೋಟೆಲ್ ಅನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿ, ಮುಂದೆ ರಾಜ್ಯದ ಇತರ ಕೆಎಸ್‌ಟಿಡಿಸಿ ಹೋಟೆಲ್‌ಗಳಿಗೂ ಇದನ್ನು ವಿಸ್ತರಿಸುವ ಯೋಜನೆಯಿದೆ. ಈ ಉಪಹಾರ ಗೃಹದ ಸುತ್ತಮುತ್ತಲಿನ ಸುಧಾರಣೆಯ ಭಾಗವಾಗಿ, ಪ್ರಸ್ತುತ ಇರುವ ಗುತ್ತಿಗೆಯನ್ನು ಲೀಸ್ ವಿಸ್ತರಿಸುವ ಕುರಿತು ಬಾಲ ಭವನದ ಅಧ್ಯಕ್ಷರ ಜೊತೆಯೂ ಸಚಿವರು ಚರ್ಚಿಸಿದ್ದಾರೆ.
ಬಾಲ ಭವನ ಮತ್ತು ಸರ್ಕಾರಿ ವಸ್ತುಸಂಗ್ರಹಾಲಯಗಳು ಸಾರ್ವಜನಿಕರು ಹಾಗೂ ಮಕ್ಕಳಿಗೆ ಜ್ಞಾನ ಮತ್ತು ಮನರಂಜನೆ ನೀಡುವ ಪ್ರಮುಖ ಸ್ಥಳಗಳಾಗಿವೆ. ಬಾಲ ಭವನದಲ್ಲಿ ಮಕ್ಕಳಿಗೆ ಉತ್ತಮ ಸೌಲಭ್ಯಗಳು ಹಾಗೂ ಸುಸಜ್ಜಿತ ಆಹಾರ ದೊರೆಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಇದರ ಬೆನ್ನಲ್ಲೇ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಸಚಿವರು, ಪ್ರಸ್ತುತ ನಡೆಯುತ್ತಿರುವ ನವೀಕರಣ ಕಾಮಗಾರಿಗಳನ್ನು ವೀಕ್ಷಿಸಿದರು. ಬಾಕಿ ಇರುವ ಕೆಲಸಗಳನ್ನು ಶರವೇಗದಲ್ಲಿ ಮುಗಿಸಿ, ಮುಂದಿನ 6 ತಿಂಗಳ ಒಳಗೆ ಮ್ಯೂಸಿಯಂ ಅನ್ನು ಸಂಪೂರ್ಣವಾಗಿ ನವೀಕರಿಸಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಭೇಟಿ ನೀಡಿ ಪ್ರದರ್ಶನದಲ್ಲಿದ್ದ ಕಲಾಕೃತಿಗಳನ್ನು ವೀಕ್ಷಿಸಿದ ಕೆ.ಜೆ. ಜಾರ್ಜ್, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಹೊಸ ಯೋಜನೆ ರೂಪಿಸುವಂತೆ ತಿಳಿಸಿದರು. ಆರ್ಟ್ ಗ್ಯಾಲರಿಯನ್ನು ಕೇವಲ ಚಿತ್ರಕಲೆಗಳ ಪ್ರದರ್ಶನಕ್ಕೆ ಸೀಮಿತಗೊಳಿಸದೆ, ನಿರಂತರವಾಗಿ ಕಲಾ ಪ್ರದರ್ಶನಗಳು (Art Exhibitions), ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಇದನ್ನೊಂದು ಕ್ರಿಯಾಶೀಲ ಸಾಂಸ್ಕೃತಿಕ ಕೇಂದ್ರವನ್ನಾಗಿ (Active Cultural Destination) ಪರಿವರ್ತಿಸಲು ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.