ಇನ್ನೂ 3 ದಿನ ಭಾರಿ ಮಳೆ: ಬಿಬಿಎಂಪಿ ಅಧಿಕಾರಿಗಳ ರಜೆ ರದ್ದು

By Kannadaprabha NewsFirst Published Oct 23, 2019, 8:08 AM IST
Highlights

ಬೆಂಗಳೂರಿನಲ್ಲಿ ಈಗಾಗಲೇ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಭೀಕರ ಮಳೆಗೆ ನಗರ ತುತ್ತಾಗಿದ್ದು ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳ ರಜೆ ರದ್ದು ಮಾಡಲಾಗಿದೆ.

ಬೆಂಗಳೂರು [ಅ.23]:  ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮೂರು ದಿನ ಯಾವುದೇ ಕಾರಣಕ್ಕೂ ರಜೆ ಹಾಕಬಾರದೆಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಸೂಚನೆ ನೀಡಿದ್ದಾರೆ.

ನಗರದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೇಯರ್‌ ಗೌತಮ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ವಿಶೇಷ ಆಯುಕ್ತರು ಹಾಗೂ ವಲಯದ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ ಅವರೊಂದಿಗೆ ಆಯುಕ್ತರು ತುರ್ತು ಸಭೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ಹವಾಮಾನ ಇಲಾಖೆ ನಗರಕ್ಕೆ ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಿದೆ. ಹಾಗಾಗಿ, ಮುಂದಿನ ಮೂರು ದಿನ ಪಾಲಿಕೆಯ ಎಲ್ಲ ವಿಭಾಗದ ಅಧಿಕಾರಿಗಳು ಸಿಬ್ಬಂದಿಗೆ ಯಾವುದೇ ಕಾರಣಕ್ಕೆ ರಜೆ ತೆಗೆದುಕೊಳ್ಳಬಾರದು, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ. ಒಂದು ವೇಳೆ ಮಳೆ ಮುಂದುವರಿದರೆ ದೀಪಾವಳಿ ಹಬ್ಬದ ರಜೆಯನ್ನು ರದ್ದು ಪಡಿಸಲಾಗುವುದು ಎಂದು ತಿಳಿಸಿದರು.

ಪಾಲಿಕೆಯ ಎಲ್ಲ ನಿಯಂತ್ರಣ ಕೊಠಡಿ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಂದ ದೂರು ಕೇಳಿ ಬಂದ ತಕ್ಷಣ ಸಂಂಬಂಧ ಪಟ್ಟಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಕೇಂದ್ರ ವಲಯದಲ್ಲಿದ್ದ ‘ಪ್ರಹರಿ’ ವಾಹನಗಳನ್ನು ಹೊರ ವಲಯಗಳಿಗೆ ನಿಯೋಜನೆ ಮಾಡಲಾಗಿದೆ. ಜತೆಗೆ ‘ಪ್ರಹರಿ’ ವಾಹನದಲ್ಲಿ ತುರ್ತು ಸೇವೆಗೆ ಬೇಕಾದ ಎಲ್ಲ ಸಾಧನಾ ಸಲಕರಣೆಗಳ ಕಿಟ್‌ ನೀಡಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಉಪ ಮೇಯರ್‌ ರಾಮ್‌ ಮೋಹನ್‌ ರಾಜ್‌, ಯೋಜನಾ ವಿಭಾಗದ ವಿಶೇಷ ಆಯುಕ್ತ ರವಿಕುಮಾರ್‌ ಸುರಪುರ, ಹಣಕಾಸು ವಿಭಾಗದ ವಿಶೇಷ ಆಯುಕ್ತ ಎಂ.ಲೋಕೇಶ್‌, ವಲಯ ಜಂಟಿ ಆಯುಕ್ತರು, ಬೃಹತ್‌ ನೀರುಗಾಲುವೆ ವಿಭಾಗದ ಮುಖ್ಯಎಂಜಿನಿಯರ ಪ್ರಹ್ಲಾದ್‌ ಮೊದಲಾದವರು ಉಪಸ್ಥಿತರಿದ್ದರು.

ಕೆರೆಗಳ ಪರಿಶೀಲನೆಗೆ ಸೂಚನೆ

ಕಳೆದ ಕೆಲವು ದಿನಗಳ ಹಿಂದೆ ದೊಡ್ಡ ಬಿದರಕಲ್ಲು ಕೆರೆ ಒಡೆದು ಪ್ರವಾಹ ಉಂಟಾಗಿತ್ತು. ಹಾಗಾಗಿ, ನಗರದಲ್ಲಿರುವ ಕೆರೆಗಳನ್ನು ಪರಿಶೀಲನೆ ಮಾಡುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ, ಮುಂದಿನ ದಿನಗಳಲ್ಲಿ ಕೆರೆಗಳಿಗೆ ಡ್ಯಾಂ ಮಾದರಿಯಲ್ಲಿ ಒಳ ಹರಿವು ಮತ್ತು ಹೊರಹರಿವು ಮಾಹಿತಿ ಸಂಗ್ರಹಣೆ ವ್ಯವಸ್ಥೆ ಹಾಗೂ ಕ್ರೆಸ್ಟ್‌ ಗೇಟ್‌ ವ್ಯವಸ್ಥೆ ಮಾಡುವುದಕ್ಕೆ ಯೋಜನೆ ಸಿದ್ಧ ಪಡಿಸುವಂತೆ ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

184ಕ್ಕೆ ತಗ್ಗು ಪ್ರದೇಶಗಳ ಗುರುತು

ಇನ್ನು ಮಳೆಯಿಂದ ಜಲಾವೃತವಾಗುವ 184 ಪ್ರದೇಶಗಳನ್ನು ಗುರುತಿಸಲಾಗಿದೆ. ಒಂದು ವೇಳೆ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದರೆ ನೀರು ತೆರವಿಗೆ 47 ಎಚ್‌ಪಿಯ ಎರಡು ನೀರೆತ್ತುವ ದೊಡ್ಡ ಪಂಪ್‌ಗಳಿವೆ. ವಲಯವಾರು 10 ಎಚ್‌ಪಿಯ ನೀರೆತ್ತುವ ಪಂಪ್‌ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ವಲಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

840 ಕಿ.ಮೀ ರಾಜಕಾಲುವೆಯಲ್ಲಿ ಸುಮಾರು 440 ಕಿ.ಮೀ ರಾಜಕಾಲುವೆ ನವೀಕರಣವಾಗಿದೆ. ಅದರಲ್ಲಿ ಕಲ್ಲಿನಿಂದ ನಿರ್ಮಿಸಿದ ಹಳೆಯ ತಡೆಗೋಡೆಗಳು ಶಿಥಿಲಗೊಂಡಿದೆ. ಕುಸಿಯುವ ಹಂತದಲ್ಲಿರುವ ಗೋಡೆಗಳ ಪಕ್ಕದಲ್ಲಿ ತಾತ್ಕಾಲಿಕವಾಗಿ ಮರಳಿನ ಚೀಲ ಹಾಕುವುದಕ್ಕೆ ತಿಳಿಸಲಾಗಿದೆ. ಇನ್ನು ಕೆಲವು ಕಡೆ ತಡೆಗೋಡೆ ಕಾಮಗಾರಿ ಪೂರ್ಣಗೊಳ್ಳದೇ ಬಾಕಿ ಉಳಿದಿದ್ದು, ಅಲ್ಲಿ ನೀರು ಜನವಸತಿ ಪ್ರದೇಶಕ್ಕೆ ಬರದಂತೆ ಕ್ರಮ ವಹಿಸುವುದಕ್ಕೆ ತಿಳಿಸಲಾಗಿದೆ ಎಂದು ವಿವರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರವಾಹ ಉಂಟಾಗುವ ಮುನ್ಸೂಚನೆ ಇರುವ ಪ್ರದೇಶಗಳಲ್ಲಿರುವ ಜನರನ್ನು ಸರ್ಕಾರಿ,ಪಾಲಿಕೆ ಶಾಲೆ, ಸಮುದಾಯ ಭವನಗಳಿಗೆ ಸ್ಥಳಾಂತರಿಸುವುದಕ್ಕೆ ವಲಯವಾರು ಶಾಲೆ ಮತ್ತು ಸಮುದಾಯ ಭವನಗಳ ಪಟ್ಟಿಸಿದ್ದಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಆಯುಕ್ತ ಅನಿಲ್‌ಕುಮಾರ್‌ ಹೇಳಿದರು.

ಮೆಟ್ರೊ ಇಲಾಖೆ ಜೊತೆ ಸಭೆ :  ಮೆಟ್ರೊ ಕಾಮಗಾರಿ ನಡೆಯುತ್ತಿರುವ ಬಹುತೇಕ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿದ ಪರಿಣಾಮ ವಾಹನ ಸವಾರರಿಗೆ ಹೆಚ್ಚು ತೊಂದರೆಯಾಗುವುದರ ಜೊತೆಗೆ ಸಂಚಾರ ದಟ್ಟಣೆ ಕೂಡಾ ಹೆಚ್ಚಾಗುತ್ತಿದೆ. ಈ ಸಂಬಂಧ ಕೂಡಲೆ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕರ ಜೊತೆ ಒಂದು ಸಭೆ ಆಯೋಜಿಸುವಂತೆ ಮೇಯರ್‌ ಗೌತಮ್‌ ಕುಮಾರ್‌ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಅವರಿಗೆ ನಿರ್ದೇಶನ ನೀಡಿದ್ದಾರೆ.

click me!