ಫೋಟೋ, ಸಾಕ್ಷ್ಯಚಿತ್ರಗಳ ಮೂಲಕ ಎಚ್ಚರಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸುಧೀರ್ ಶೆಟ್ಟಿ| ಒಳನುಸುಳುವಿಕೆ, ನಡವಳಿಕೆ ಬಗ್ಗೆ ಜಾಗೃತಿ ಮೂಡಿಸಿದರೂ ರಾಜ್ಯದ ಅಧಿಕಾರಿಗಳಿಂದ ಕ್ರಮ ಇಲ್ಲ| ಸರ್ಕಾರಗಳು ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ| ಅಕ್ರಮ ಬಾಂಗ್ಲಾ ವಲಸಿಗರು ಇಂದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ|
ಬೆಂಗಳೂರು[ಅ. 30]: ರಾಜ್ಯವು ಅಕ್ರಮ ಬಾಂಗ್ಲಾ ವಲಸಿಗರ ಆವಾಸ ತಾಣವಾಗುತ್ತಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸುಧೀರ್ ಶೆಟ್ಟಿ ಅವರು ಹತ್ತಾರು ವರ್ಷಗಳ ಹಿಂದಿನಿಂದಲೂ ಎಚ್ಚರಿಸುತ್ತಾ ಬಂದರೂ ಆಳುವ ಸರ್ಕಾರಗಳು ಮತ್ತು ಅಧಿಕಾರಿಗಳು ತಾಳಿದ ದಿವ್ಯ ನಿರ್ಲಕ್ಷ್ಯದಿಂದ ಅಕ್ರಮ ಬಾಂಗ್ಲಾ ವಲಸಿಗರು ಇಂದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.
2008 ರಿಂದಲೇ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಸುದೀರ್ಘ ಅಧ್ಯಯನ ನಡೆಸಿಕೊಂಡು ಬಂದ ಸಾಮಾಜಿಕ ಕಾರ್ಯಕರ್ತ ಸುಧೀರ್ ಶೆಟ್ಟಿ ಅವರು, ಬಾಂಗ್ಲನ್ನರು ಭಾರತಕ್ಕೆ ಹೇಗೆ ನುಸುಳುತ್ತಾರೆ, ಯಾವ ಮಾರ್ಗದ ಮೂಲಕ ಬೆಂಗಳೂರಿಗೆ ಬರುತ್ತಿದ್ದಾರೆ, ಅವರ ಭಾಷೆ, ಬಣ್ಣ, ನಡವಳಿಕೆ ಹೇಗಿರುತ್ತದೆ, ಇಲ್ಲಿಗೆ ಬಂದ ಬಳಿಕ ಅವರು ಮಾಡುವ ಕೆಲಸವೇನು, ಅಕ್ರಮ ಬಾಂಗ್ಲಾ ವಲಸಿಗರ ಜಾಲ ರಾಜ್ಯ ಹಾಗೂ ಬೆಂಗಳೂರಿನಲ್ಲಿ ಹೇಗೆ ವ್ಯವಸ್ಥಿತವಾಗಿ ವಿಸ್ತಾರಗೊಳ್ಳುತ್ತಿದೆ ಎಂಬ ಬಗ್ಗೆ ಐದಕ್ಕೂ ಹೆಚ್ಚು ಬಾರಿ ಸವಿವರವಾದ ಸಾಕ್ಷ್ಯಚಿತ್ರಗಳ ಪ್ರದರ್ಶನ, ಹಲವು ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಬೆಂಗಳೂರಲ್ಲಿ 60 ಬಾಂಗ್ಲಾ ಅಕ್ರಮ ವಲಸಿಗರ ಬಂಧನ
ಈ ಕಾರ್ಯಕ್ರಮಗಳಿಗೆ ಸರ್ಕಾರದ ಸಚಿವರು, ಉನ್ನತ ಅಧಿಕಾರಿಗಳನ್ನೇ ಕರೆಸಿ ಗಮನ ಸೆಳೆಯುವ ಕೆಲಸವನ್ನೂ ಮಾಡಿದ್ದಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ಅಧಿಕಾರ ನಡೆಸಿದ ಬಹುತೇಕ ಎಲ್ಲ ಸರ್ಕಾರಗಳು ಹಾಗೂ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಪೊಲೀಸ್ ಹಾಗೂ ಇತರೆ ತನಿಖಾ ಸಂಸ್ಥೆಗಳ ಅಧಿಕಾರಿಗಳು ತೋರಿದ ನಿರ್ಲಕ್ಷ್ಯದಿಂದಾಗಿ ಇಂದು ಅಕ್ರಮ ಬಾಂಗ್ಲಾ ವಲಸಿಗರ ಸಮಸ್ಯೆ ರಾಜ್ಯವನ್ನೂ ಬಿಡದೆ ದೊಡ್ಡ ಪೆಡಂಭೂತದಂತೆ ಕಾಡುತ್ತಿದೆ. ಅಕ್ರಮ ಬಾಂಗ್ಲಾ ವಲಸಿಗರು ದೇಶದ ಆಂತರಿಕ ಭದ್ರತೆಗೇ ಕಂಟಕವಾಗುತ್ತಿರುವುದಾಗಿ ದೇಶದ ತನಿಖಾ ಸಂಸ್ಥೆಗಳೇ ಆತಂಕ ವ್ಯಕ್ತಪಡಿಸುವ ಸ್ಥಿತಿ ಬಂದಿದೆ.
ಈ ಸಂಬಂಧ ‘ಕನ್ನಡಪ್ರಭ’ ಸುಧೀರ್ ಶೆಟ್ಟಿ ಅವರನ್ನು ಮಾತನಾಡಿಸಿದಾಗ, ಸರ್ಕಾರಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. 2008ರಿಂದಲೇ ರಾಜ್ಯಕ್ಕೆ ಬಾಂಗ್ಲನ್ನರ ವಲಸೆ ಆರಂಭವಾಗಿತ್ತು. ಈ ಬಗ್ಗೆ ಕೆಲ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅಧ್ಯಯನ ನಡೆಸಿದ ನಾನು ಅವರ ಸಂಪೂರ್ಣ ಜೀವನಶೈಲಿ ಬಗ್ಗೆ 2011ರಿಂದ 2017ರ ವರೆಗೆ ಐದು ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಸಿದ್ದೇನೆ. 2015ರಲ್ಲಿ ವಿಧಾನಸೌಧದಲ್ಲೇ ನನ್ನ ಸಾಕ್ಷ್ಯಚಿತ್ರಗಳನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿ ಅಂದಿನ ಸರ್ಕಾರವನ್ನು ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು. ನಂತರ 2017ರಲ್ಲಿ ಕೂಡ ಮತ್ತೊಂದು ಸಾಕ್ಷ್ಯಚಿತ್ರ ಪ್ರದರ್ಶನ ನಡೆಸಿ ಸರ್ಕಾರದ ಗಮನ ಸೆಳೆಯಲಾಯಿತು. ನನ್ನ ಪ್ರತಿಯೊಂದು ಸಾಕ್ಷ್ಯಚಿತ್ರ ಪ್ರದರ್ಶನಕ್ಕೂ ಸರ್ಕಾರದ ಸಚಿವರು, ಅಧಿಕಾರಿಗಳನ್ನೇ ಕರೆಸಿದ್ದೇನೆ. ಈ ಬಗ್ಗೆ ಸಾಕಷ್ಟುಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಿ ಜನ ಜಾಗೃತಿಗೊಳಿಸುವ ಕೆಲಸ ಮಾಡಿದ್ದೇನೆ. ಇದರ ಉದ್ದೇಶ ಸರ್ಕಾರವನ್ನು, ಜನರನ್ನು ಎಚ್ಚೆತ್ತುಕೊಳ್ಳುವಂತೆ ಮಾಡುವುದಾಗಿತ್ತು. ಆದರೆ, ಯಾವ ಸರ್ಕಾರ ಅಥವಾ ಅಧಿಕಾರಿಗಳೂ ಬಾಂಗ್ಲಾ ವಲಸಿಗರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪರಿಣಾಮ ಇಂದು ಅದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಲ್ಲೆಲ್ಲಿದ್ದಾರೆ?
ಬಾಂಗ್ಲಾ ವಲಸಿಗರನ್ನು ಗುರುತು ಹಚ್ಚುವುದು ಹೇಗೆ, ಅಂತಹವರು ಬಂದರೆ ಮನೆ ಬಾಡಿಗೆ, ಕೆಲಸ ನೀಡದಂತೆ ಎಚ್ಚರ ವಹಿಸಲು ತಿಳಿವಳಿಕೆ ನೀಡಿಸುವ ಪ್ರಯತ್ನ ಮಾಡಿದೆವು. ಬಾಂಗ್ಲನ್ನರು ನೋಡಲು ತಮಿಳರನ್ನು ಹೋಲುತ್ತಾರೆ. ಉರ್ದು ಮಿಶ್ರಿತ ಹಿಂದಿ ಮಾತನಾಡುವುದರಿಂದ ಅವರನ್ನು ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಜನಜಾಗೃತಿ ಕಾರ್ಯಕ್ರಮಗಳಿಂದಾಗಿ ಬೆಂಗಳೂರಿನ ಒಂದಷ್ಟುಜನರು ಈಗ ಬಾಂಗ್ಲಾ ವಲಸಿಗರನ್ನು ಗುರುತಿಸುವ ಮಟ್ಟಕ್ಕೆ ಬಂದಿದ್ದಾರೆ.
ಅಕ್ರಮ ಬಾಂಗ್ಲಾ ವಲಸಿಗರ ಲೆಕ್ಕ ಯಾವ ಸರ್ಕಾರಿ ಲೆಕ್ಕದಲ್ಲೂ ಇಲ್ಲ
ಬೆಂಗಳೂರಿನ ವರ್ತೂರು, ಬೇಗೂರು, ಮುನ್ನೇಕೊಳಲು, ಜಕ್ಕಸಂದ್ರ, ಕಾಡುಬೀಸನಹಳ್ಳಿ ಸೇರಿದಂತೆ ಅನೇಕ ಕಡೆ ಇಂದಿಗೂ ಬಾಂಗ್ಲನ್ನರು ಅಕ್ರಮವಾಗಿ ನೆಲೆಸಿದ್ದಾರೆ. ರಾಜ್ಯದಲ್ಲಿ ಸುಮಾರು 40 ಸಾವಿರ ಅಕ್ರಮ ಬಾಂಗ್ಲಾ ವಲಸಿಗರು ವಿವಿಧ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಇಲ್ಲಿ, ಅಕ್ರಮ ವಲಸಿಗರೇ ಬೇರೆ, ವೀಸಾ ಮುಗಿದ ಮೇಲೂ ಇಲ್ಲೇ ಉಳಿದಿರುವವರು ಬೇರೆ. ಸರ್ಕಾರ ಇಬ್ಬರನ್ನೂ ಪತ್ತೆ ಹೆಚ್ಚಿ ಗಡೀಪಾರಿಗೆ ಕ್ರಮ ಕೈಗೊಳ್ಳಬೇಕು. ಅದಕ್ಕೆ ಒಂದಷ್ಟುಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಈ ಅಕ್ರಮ ವಲಸಿಗರನ್ನು ಪತ್ತೆ ಹೆಚ್ಚಿ ಒಂದೆಡೆ ಇಡಲು ಈಗಿನ ಸರ್ಕಾರ ಎನ್‌ಆರ್‌ಸಿ ಕೇಂದ್ರ ಸ್ಥಾಪನೆಗೆ ಮುಂದಾಗಿರುವುದು ಒಳ್ಳೆಯ ಕೆಲಸವಾಗಿದೆ ಎಂದು ಸುಧೀರ್ ಶೆಟ್ಟಿ ಹೇಳಿದರು.