ಬೆಂಗಳೂರಿನ ಕೆರೆ, ರಾಜಕಾಲುವೆಗಳ ಮೇಲೆಯೇ ರಸ್ತೆ ನಿರ್ಮಾಣ: ಜಿಬಿಎ-ಬಿಡಿಎ ನೂತನ ಪ್ರಸ್ತಾವನೆಗೆ ಭಾರಿ ವಿರೋಧ!

Published : Oct 23, 2026, 04:08 PM IST
gba proposed roads on lakes

ಸಾರಾಂಶ

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಜಿಬಿಎ ಮತ್ತು ಬಿಡಿಎ ಪ್ರಸ್ತಾಪಿಸಿರುವ ಹೊಸ ರಸ್ತೆಗಳು ಕೆರೆಗಳು ಹಾಗೂ ರಾಜಕಾಲುವೆಗಳ ಬಫರ್ ಝೋನ್ ಆಕ್ರಮಿಸುವ ಆತಂಕ ಎದುರಾಗಿದೆ. ಇದರಿಂದ ನಗರದ ಹಸಿರು ಮತ್ತು ಜಲಮೂಲಗಳಿಗೆ ಭಾರಿ ಹಾನಿಯಾಗಲಿದ್ದು, ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಅ.23): ಬೆಂಗಳೂರು ನಗರದ ತೀವ್ರ ಸಂಚಾರ ದಟ್ಟಣೆಯನ್ನು (Traffic Congestion) ಶಮನಗೊಳಿಸುವ ಉದ್ದೇಶದಿಂದ ನಿರ್ಮಿಸಲು ಉದ್ದೇಶಿಸಿರುವ ನೂತನ ರಸ್ತೆಗಳ ಜಾಲವು ಕೇವಲ ರಾಜಕಾಲುವೆಗಳು ಮತ್ತು ಕೆರೆಗಳ ಬಫರ್ ಝೋನ್ (Buffer Zones) ವ್ಯಾಪ್ತಿಯಲ್ಲಿ ಮಾತ್ರವಲ್ಲದೆ, ಜಲಮೂಲಗಳ ಭಾಗಶಃ ಜಾಗವನ್ನು ಆಕ್ರಮಿಸಿಕೊಂಡು ತಲೆಎತ್ತುವ ಸಾಧ್ಯತೆಯಿದೆ. ನಗರದಲ್ಲಿ ಈಗಾಗಲೇ ದಿನೇ ದಿನೇ ಕ್ಷೀಣಿಸುತ್ತಿರುವ ಹಸಿರು ಮತ್ತು ಜಲಮೂಲ ವಲಯಗಳಿಗೆ (Blue-green spaces) ಹಾಗೂ ನೈಸರ್ಗಿಕ ಚರಂಡಿ ವ್ಯವಸ್ಥೆಗೆ ಇದು ಭಾರಿ ಮಾರಕವಾಗಲಿದೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ನಗರದ ಸಂಪರ್ಕ ಜಾಲವನ್ನು ಸುಧಾರಿಸುವ ಮತ್ತು ವಾಹನ ಸಂಚಾರವನ್ನು ಸರಾಗಗೊಳಿಸುವ ಯೋಜನೆಯ ಭಾಗವಾಗಿ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (GBA) ಮತ್ತು 'ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ' (BDA) ನೂರಾರು ಕಿಲೋಮೀಟರ್ ಉದ್ದದ ರಸ್ತೆಗಳನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿವೆ. ಆದರೆ, 9 ರಿಂದ 24 ಮೀಟರ್ ಅಗಲದ ಉದ್ದೇಶಿತ ರಸ್ತೆಗಳ ವಿನ್ಯಾಸವು (Alignment) ನೈಸರ್ಗಿಕ ನೀರಿನ ಹರಿವು, ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಮತ್ತು ನಗರ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ರಸ್ತೆ ಜಾಲ ವಿಸ್ತರಣೆಯ ಜೊತೆಗೆ, ಈವರೆಗೆ ತಲುಪಲು ಸಾಧ್ಯವಾಗದಿದ್ದ ಹಲವು ಭೂಭಾಗಗಳು ಉದ್ಯಮ ಮತ್ತು ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಮುಕ್ತವಾಗಲಿವೆ. ರಸ್ತೆ ಸಂಪರ್ಕ ಸಿಗುವುದರಿಂದ ಈವರೆಗೆ 'ಅಭಿವೃದ್ಧಿ ರಹಿತ ವಲಯ'ದಲ್ಲಿದ್ದ (No-development zone) ಹಸಿರು ಪ್ರದೇಶಗಳು ವಾಣಿಜ್ಯ ಮತ್ತು ವಸತಿ ಯೋಜನೆಗಳಿಗೆ ಬಳಕೆಯಾಗಲಿದ್ದು, ಆಯಾ ಪ್ರದೇಶಗಳ ನೈಸರ್ಗಿಕ ಸ್ವರೂಪವೇ ಬದಲಾಗುವ ಅಪಾಯವಿದೆ.

ಸಾರ್ವಜನಿಕ ಆಕ್ಷೇಪಣೆಗೆ 60 ದಿನಗಳ ಕಾಲಾವಕಾಶ

ಜಿಬಿಎ, ಬಿಡಿಎ ಮತ್ತು ಬೆಂಗಳೂರು ಮಹಾನಗರ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ (BMRDA) ಇತ್ತೀಚೆಗೆ ನೂತನ ಸಂಚಾರ ಜಾಲದ ನಕ್ಷೆಗಳನ್ನು (Circulation network maps) ಪ್ರಕಟಿಸಿವೆ. ಇವುಗಳಲ್ಲಿ ಭವಿಷ್ಯದ ಅಭಿವೃದ್ಧಿಗಾಗಿ ಪ್ರಸ್ತಾಪಿಸಲಾದ ರಸ್ತೆಗಳ ವಿನ್ಯಾಸವನ್ನು ಗುರುತಿಸಲಾಗಿದೆ. ಸಾರ್ವಜನಿಕರ ಆಕ್ಷೇಪಣೆಗಳನ್ನು ಸಲ್ಲಿಸಲು ನೀಡಲಾಗಿರುವ 60 ದಿನಗಳ ಗಡುವು ಮುಕ್ತಾಯಗೊಂಡ ನಂತರ, ಈ ನಕ್ಷೆಗಳನ್ನು 'ಪರಿಷ್ಕೃತ ಮಾಸ್ಟರ್ ಪ್ಲಾನ್ 2015' ರಲ್ಲಿ (Revised Master Plan 2015) ಸೇರ್ಪಡೆಗೊಳಿಸುವ ನಿರೀಕ್ಷೆಯಿದೆ.

ಮಾಹಿತಿಗಾಗಿ, ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 200 ಕೆರೆಗಳು ಮತ್ತು 850 ಕಿ.ಮೀ ಉದ್ದದ ರಾಜಕಾಲುವೆ ಜಾಲವಿದೆ. ಉದ್ದೇಶಿತ ರಸ್ತೆ ನಕ್ಷೆಗಳನ್ನು ಪರಿಶೀಲಿಸಿದಾಗ, ಬೆಂಗಳೂರಿನಾದ್ಯಂತ ಹಲವಾರು ಕೆರೆಗಳು ಮತ್ತು ಜಲಮೂಲಗಳ ಪಕ್ಕದಲ್ಲೇ ರಸ್ತೆ ಹಾದುಹೋಗುತ್ತಿದ್ದು, ಕೆಲವು ಕಡೆಗಳಲ್ಲಿ ರಸ್ತೆಗಳು ನೇರವಾಗಿ ಜಲಮೂಲಗಳ ಜಾಗವನ್ನು ಅತಿಕ್ರಮಿಸುವಂತೆ ಕಾಣುತ್ತಿವೆ.

ಪೂರ್ವ ಬೆಂಗಳೂರಿನ ದೊಡ್ಡನೆಕ್ಕುಂದಿ ಮತ್ತು ನಲ್ಲೂರುಹಳ್ಳಿ ಕೆರೆಗಳ ಸುತ್ತ ರಸ್ತೆಗಳನ್ನು ಪ್ರಸ್ತಾಪಿಸಲಾಗಿದೆ, ದಕ್ಷಿಣ ಬೆಂಗಳೂರಿನಲ್ಲಿ ಬೇಗೂರು ಮತ್ತು ಪುಟ್ಟೇನಹಳ್ಳಿ ಕೆರೆಗಳನ್ನು ಈ ರಸ್ತೆ ವಿನ್ಯಾಸಗಳು ಆವರಿಸಿವೆ ಹಾಗೂ ಉತ್ತರ ಬೆಂಗಳೂರಿನಲ್ಲಿ ದೊಡ್ಡಬೊಮ್ಮಸಂದ್ರ ಕೆರೆ ಕೂಡ ಈ ಪ್ರಸ್ತಾವನೆಯಿಂದ ಪ್ರಭಾವಿತಗೊಂಡಿದೆ. ಬೆಳ್ಳಂದೂರು ಕೆರೆ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿಯ ಕೆರೆ, ಬಾಸಾಪುರ ಕೆರೆ ಮತ್ತು ಗಾರೆಭಾವಿಪಾಳ್ಯ ಕೆರೆಗಳ ಬಹುತೇಕ ಬದಿಗಳಲ್ಲಿ ರಸ್ತೆ ನಿರ್ಮಾಣಕ್ಕೆ ಗುರುತು ಮಾಡಲಾಗಿದೆ.

ಇದಲ್ಲದೆ, ಹೊಸೂರು ರಸ್ತೆ ಮತ್ತು ತುಮಕೂರು ರಸ್ತೆಯನ್ನು ಸಂಪರ್ಕಿಸುವ 'ನೈಸ್ ರಸ್ತೆ'ಗೆ (NICE Road) ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳನ್ನು ಈ ಜಾಲ ಒಳಗೊಂಡಿದೆ. ಇವು ಮೈಲಸಂದ್ರ ಕೆರೆ, ಸುಬೇದಾರ್ ಪಾಳ್ಯ ಕೆರೆ, ಅಂಜನಾಪುರ ಟೌನ್‌ಶಿಪ್‌ನ ಕೆಂಬತ್ತಹಳ್ಳಿ ಮತ್ತು ಸೋಂಪುರ ಪ್ರದೇಶಗಳ ಸುತ್ತ ಕೇಂದ್ರೀಕೃತವಾಗಿವೆ. ದೊಡ್ಡಕಲ್ಲಸಂದ್ರದಿಂದ ನೈಸ್ ರಸ್ತೆಯತ್ತ ಹರಿಯುವ ಹಳ್ಳದ ಎರಡೂ ಬದಿಗಳಲ್ಲಿ ರಸ್ತೆಯನ್ನು ಪ್ರಸ್ತಾಪಿಸಲಾಗಿದೆ.

ಭೂಸ್ವಾಧೀನದ ಕಿರಿಕಿರಿ ತಪ್ಪಿಸಲು ಸುಲಭ ದಾರಿ?

ಸಾಮಾನ್ಯವಾಗಿ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಪ್ರಸ್ತಾಪಿಸಲಾದ ರಸ್ತೆಗಳು ಖಾಸಗಿ ಆಸ್ತಿಗಳ ಮೂಲಕ ಹಾದುಹೋಗುತ್ತವೆ. ಅಲ್ಲಿ ಆಸ್ತಿಯ ಮಾಲೀಕರು ಪರಿಹಾರ ಅಥವಾ ಹೆಚ್ಚುವರಿ ಕಟ್ಟಡ ನಿರ್ಮಾಣ ಪ್ರದೇಶದ (Built-up space) ಬದಲಾಗಿ ಭೂಮಿಯನ್ನು ಬಿಟ್ಟುಕೊಡಬೇಕಾಗುತ್ತದೆ. ಆದರೆ, ಭೂಸ್ವಾಧೀನದ ಅಡೆತಡೆಗಳು ಮತ್ತು ಜಾರಿಗೊಳಿಸುವಲ್ಲಿನ ವಿಳಂಬದಿಂದಾಗಿ ಮಹಾಸಮಗ್ರ ಅಭಿವೃದ್ಧಿ ಯೋಜನೆ (CDP) ಅಡಿಯ ಬಹುತೇಕ ರಸ್ತೆಗಳು ಕೇವಲ ಕಾಗದದ ಮೇಲಷ್ಟೇ ಉಳಿದುಹೋಗಿವೆ.

ಈ ಹಳೆಯ ಅನುಭವವನ್ನು ಗಮನದಲ್ಲಿಟ್ಟುಕೊಂಡು, ಅಧಿಕಾರಿಗಳು ಕೆರೆಗಳು ಮತ್ತು ರಾಜಕಾಲುವೆಗಳ ಬಫರ್ ಝೋನ್ ವ್ಯಾಪ್ತಿಯಲ್ಲಿ ರಸ್ತೆಗಳನ್ನು ನಿರ್ಮಿಸುವ ಸುಲಭ ಹಾದಿಯನ್ನು ಕಂಡುಕೊಂಡಂತೆ ತೋರುತ್ತಿದೆ.

ದಕ್ಷಿಣ ಬೆಂಗಳೂರಿನ ನಿವಾಸಿ ಲಿಂಗರಾಜು ಡಿ. ಮಾತನಾಡಿ, "ರಸ್ತೆಗಳ ವಿನ್ಯಾಸವನ್ನು ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಗುರುತಿಸಲಾಗಿದೆ. ಕೆರೆ ಮತ್ತು ರಾಜಕಾಲುವೆಗಳ ಮೇಲೆ ಗುರುತಿಸಲಾದ ರಸ್ತೆಗಳು ಮುಂದಿನ ರಸ್ತೆಗೆ ಸಂಪರ್ಕ ಕಲ್ಪಿಸುತ್ತವೆಯೇ ಇಲ್ಲವೇ ಎಂಬುದನ್ನು ಪರಿಗಣಿಸಿಲ್ಲ. ಪುಟ್ಟೇನಹಳ್ಳಿ ಕೆರೆಯು 30 ಅಡಿ ಅಗಲದ ಏರಿಯನ್ನು ಹೊಂದಿದೆ, ಆದರೆ ಅಲ್ಲಿ 60 ಅಡಿ ಅಗಲದ ರಸ್ತೆಯನ್ನು ಪ್ರಸ್ತಾಪಿಸಲಾಗಿದೆ. ಎಂದರೆ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತದೆ. ಬೆಂಗಳೂರು ಈಗಾಗಲೇ ನೀರಿನ ಅಭಾವ ಎದುರಿಸುತ್ತಿರುವಾಗ ಇದು ಸುಸ್ಥಿರ ಪರಿಹಾರವಲ್ಲ" ಎಂದಿದ್ದಾರೆ.

'ಸಿಟಿಜನ್ಸ್ ಅಜೆಂಡಾ ಫಾರ್ ಬೆಂಗಳೂರು' ಸಂಸ್ಥೆಯ ಸಂಸ್ಥಾಪಕ ಸಂದೀಪ್ ಅನಿರುದ್ಧನ್ ಮಾತನಾಡಿ, "ಬೆಂಗಳೂರಿನಲ್ಲಿ ಕೇವಲ ಶೇ. 5 ರಷ್ಟು ಮಾತ್ರ ನೀಲಿ-ಹಸಿರು ಸಂಪನ್ಮೂಲಗಳು ಬಾಕಿ ಉಳಿದಿವೆ. ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗಾಗಿ ಸಂರಕ್ಷಿತ ಬಫರ್ ಝೋನ್‌ಗಳನ್ನು ಬಲಿ ನೀಡಲಾಗುತ್ತಿದೆ. ನಗರವು ನೈಸರ್ಗಿಕ ಆಸ್ತಿಗಳನ್ನು ಕಳೆದುಕೊಳ್ಳುತ್ತಿರುವಾಗ, ಕೆರೆಗಳನ್ನು ರಕ್ಷಿಸಬೇಕಾದ ಸರ್ಕಾರವೇ ಕಾನೂನನ್ನು ಸಡಿಲಗೊಳಿಸುತ್ತಿರುವುದು ಆಡಳಿತದ ದುರುದ್ದೇಶವನ್ನು ತೋರಿಸುತ್ತದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.

ಜಿಬಿಎ ಮುಖ್ಯ ಆಯುಕ್ತರ ಸ್ಪಷ್ಟನೆ

ಸಾರ್ವಜನಿಕರ ಆತಂಕ ಮತ್ತು ವಿರೋಧದ ಕುರಿತು ಪ್ರತಿಕ್ರಿಯಿಸಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, "ಕಾನೂನಿನ ಪ್ರಕಾರ ಕೆರೆಗಳು ಮತ್ತು ರಾಜಕಾಲುವೆಗಳ ಬಫರ್ ಝೋನ್ ವ್ಯಾಪ್ತಿಯಲ್ಲಿ ರಸ್ತೆಗಳನ್ನು ನಿರ್ಮಿಸಲು ಅವಕಾಶವಿದೆ. ಒಂದು ವೇಳೆ ಸಾರ್ವಜನಿಕರಿಂದ ನಿರ್ದಿಷ್ಟ ಆಕ್ಷೇಪಣೆಗಳು ಬಂದರೆ, ನಾವು ಅವುಗಳನ್ನು ಪರಿಶೀಲಿಸುತ್ತೇವೆ ಮತ್ತು ರಸ್ತೆ ವಿನ್ಯಾಸವನ್ನು (Alignment) ಬದಲಾಯಿಸುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತಾವಿತ ರಸ್ತೆಯು (ನೇರಳೆ ಬಣ್ಣದಲ್ಲಿ ಗುರುತಿಸಲಾಗಿದೆ) ಪೂರ್ವ ಬೆಂಗಳೂರಿನ ನಲ್ಲೂರಹಳ್ಳಿ ಕೆರೆಯ ಮೂಲಕ ಹಾದುಹೋಗುತ್ತದೆ.

PREV
Read more Articles on
click me!

Recommended Stories

ನಮ್ಮ ಮೆಟ್ರೋ ಆರೆಂಜ್ ಲೈನ್ ಡಬಲ್ ಡೆಕ್ಕರ್ ಕಾನ್ಸೆಪ್ಟ್ ರದ್ದು, 4 ಫ್ಲೈಓವರ್, ಗೊರಗುಂಟೆಪಾಳ್ಯದಲ್ಲಿ 2 ಕಿ.ಮೀ ಸುರಂಗ ರಸ್ತೆಯ ಹೊಸ ಪ್ಲ್ಯಾನ್‌!
ಅಕ್ಟೋಬರ್‌ ಅಂತ್ಯಕ್ಕೆ ಕೆಆರ್‌ ಪುರ-ಮಾರತಹಳ್ಳಿ ನಡುವೆ ಬ್ಲ್ಯೂ ಲೈನ್‌ ಮೆಟ್ರೋ ಪ್ರಾಯೋಗಿಕ ಸಂಚಾರ!