
ಬೆಂಗಳೂರು (ಅ.8): ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಜೈಲು ಪಾಲಾಗಿರುವ ನಟ, 'ಕಿಲ್ಲಿಂಗ್ ಸ್ಟಾರ್' ದರ್ಶನ್ ಹಾಗೂ ಆತನ ಗ್ಯಾಂಗ್ ನ್ಯಾಯಾಲಯದ ದಾರಿ ತಪ್ಪಿಸಲು ಜೈಲಿನಿಂದಲೇ ತಂತ್ರ ರೂಪಿಸಿದ್ದ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರದೂಷ್ ಮೂಲಕ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು, ಆರೋಪಿಗಳ ನಡವಳಿಕೆ ಹಾಗೂ ಕೋರ್ಟ್ ದಾರಿ ತಪ್ಪಿಸುವ ಯತ್ನದ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದೆ.
ಪರಪ್ಪನ ಅಗ್ರಹಾರ ಜೈಲಿನಿಂದ ಕೋರ್ಟ್‌ಗೆ ಕರೆತರುವಾಗ ಮತ್ತು ವಿಚಾರಣೆ ನಡೆಸಿ ವಾಪಸ್ ಕರೆದೊಯ್ಯುವಾಗ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮಾಫಿ ಸಾಕ್ಷಿ ಆಗಿರುವ ಪ್ರದೂಷ್ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಜತೆಗೆ, ಕಾಮಾಕ್ಷಿಪಾಳ್ಯ ಪೊಲೀಸರು ಪ್ರದೂಷ್‌ನನ್ನು ಎಸ್ಕಾರ್ಟ್ ಮಾಡಬಾರದು ಎಂದು ಮನವಿ ಮಾಡಿದ್ದರು.
ಪೊಲೀಸ್ ಅಧಿಕಾರಿಗಳು ಪ್ರದೂಷ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬುದಕ್ಕೆ ಪುರಾವೆಯಾಗಿ ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ವಿಡಿಯೋ ತುಣುಕೊಂದನ್ನು ಸಾಕ್ಷಿಯಾಗಿ ಸಲ್ಲಿಸಿದ್ದರು. ಆದರೆ ಈ ವಿಡಿಯೋವನ್ನು ಕೂಲಂಕುಷವಾಗಿ ಪರಿಶೀಲಿಸಿದ ಸೆಷನ್ಸ್ ನ್ಯಾಯಾಲಯಕ್ಕೆ ಆರೋಪಿಗಳ ಅಸಲಿ ತಂತ್ರ ಗೊತ್ತಾಗಿದೆ.
ಮಾಧ್ಯಮಗಳಲ್ಲಿ ಹಿಂದೆ ಎಂದೋ ಪ್ರಸಾರವಾಗಿದ್ದ ಹಳೆಯ ವಿಡಿಯೋ ತುಣುಕನ್ನು ಈಗಿನದ್ದು ಎಂದು ಬಿಂಬಿಸಿ, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಕೋರ್ಟ್ ದಾರಿ ತಪ್ಪಿಸಲು ಯತ್ನಿಸಲಾಗಿದೆ ಎಂಬುದನ್ನು ನ್ಯಾಯಾಲಯ ಸ್ಪಷ್ಟವಾಗಿ ಗುರುತಿಸಿದೆ. ಈ ಕುರಿತು ತನ್ನ ಆದೇಶದಲ್ಲಿ ಉಲ್ಲೇಖಿಸಿರುವ ಕೋರ್ಟ್, ಹಳೆಯ ವಿಡಿಯೋಗಳನ್ನು ಇಟ್ಟುಕೊಂಡು ಸುಳ್ಳು ಆರೋಪ ಮಾಡಿ ನ್ಯಾಯಾಲಯದ ದಾರಿ ತಪ್ಪಿಸಲು ಯತ್ನಿಸಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಹಾಗೂ ಆತನ ಗ್ಯಾಂಗ್ ಜೈಲಿನಲ್ಲಿದ್ದರೂ ಸಹ ಇಂತಹ ಕಾನೂನುಬಾಹಿರ ತಂತ್ರಗಳ ಮೂಲಕ ಪ್ರಕರಣದ ತನಿಖೆ ಹಾಗೂ ವಿಚಾರಣೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ. ಮಾಧ್ಯಮಗಳ ಹಳೆಯ ದೃಶ್ಯಗಳನ್ನು ಬಳಸಿ ತನಿಖಾಧಿಕಾರಿಗಳು ಹಾಗೂ ಕಾಮಾಕ್ಷಿಪಾಳ್ಯ ಪೊಲೀಸರ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿದ ಆರೋಪಿಗಳ ಈ ನಡೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಈಗಾಗಲೇ ಸಾಕ್ಷ್ಯನಾಶ ಹಾಗೂ ವಿಚಾರಣೆ ವಿಳಂಬಗೊಳಿಸಲು ನಾನಾ ಸರ್ಕಸ್ ಮಾಡುತ್ತಿರುವ ದರ್ಶನ್ ಪಡೆಗೆ, ಸೆಷನ್ಸ್ ಕೋರ್ಟ್‌ನ ಈ ಅಸಮಾಧಾನ ಭಾರಿ ಮುಖಭಂಗ ತಂದೊಡ್ಡಿದೆ.