
ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ಗೌಡ ನಡುವೆ ₹10 ಕೋಟಿ ಹಣದ ವ್ಯವಹಾರದ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ನಟ ಧನ್ವೀರ್ ಗೌಡ ವಿರುದ್ಧ ಒಂದೆಡೆ ಅಕ್ರಮ ಹಣಕಾಸು ವಹಿವಾಟಿನ ಭಾರಿ ಆರೋಪ ಕೇಳಿಬಂದಿದ್ದರೆ, ಇನ್ನೊಂದೆಡೆ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ನಟ ಜೈದ್ ಖಾನ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿದೆ.
ನಟ ದರ್ಶನ್ ವಿರುದ್ಧದ ಪ್ರಕರಣದ ಕಾನೂನು ಪ್ರಕ್ರಿಯೆ ಹಾಗೂ ವೆಚ್ಚಗಳಿಗಾಗಿ ನಟ ಧನ್ವೀರ್ ಮತ್ತು ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ನಡುವೆ ಸುಮಾರು 10 ಕೋಟಿ ರೂಪಾಯಿಗಳ ಅಕ್ರಮ ನಗದು ವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಟ ದರ್ಶನ್ ಜೈಲಿನಲ್ಲಿರುವ ಹಿನ್ನೆಲೆಯಲ್ಲಿ, ಅವರ ಕಾನೂನು ವೆಚ್ಚಗಳು ಮತ್ತು ಕೋರ್ಟ್ ಕೇಸ್‌ಗಳ ನಿರ್ವಹಣೆಗಾಗಿ ವಿಜಯಲಕ್ಷ್ಮಿ ಅವರು ಧನ್ವೀರ್ ಬಳಿ ₹10 ಕೋಟಿ ರೂಪಾಯಿ ನಗದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ನೀಡಿದ್ದರು ಎನ್ನಲಾಗಿದೆ.
ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಹೇಳಿಕೆ ನೀಡಿರುವ ಪ್ರಕಾರ, ಜೈಲಿನ ಭೇಟಿಯ ಸಮಯದಲ್ಲಿ ನಟ ದರ್ಶನ್ ತನ್ನ ಭಂಟ ಧನ್ವೀರ್‌ಗೆ ಈ ಹಣವನ್ನು ಮರಳಿ ವಿಜಯಲಕ್ಷ್ಮಿಗೆ ಕೊಡು ಎಂದು ಸೂಚಿಸಿದ್ದರು. ಆದರೆ, ಧನ್ವೀರ್ ಈ ಹಣವನ್ನು ಹಿಂದಿರುಗಿಸದೆ ವಿಜಯಲಕ್ಷ್ಮಿ ಕರೆ ಮಾಡಿ ಕೇಳಿದಾಗ ಜಗಳ ಆರಂಭವಾಗಿದೆ ಎಂದು ಆರೋಪಿಸಲಾಗಿದೆ.
ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಯಾವುದೇ ನಗದು ವಹಿವಾಟು ₹2 ಲಕ್ಷಕ್ಕಿಂತ ಹೆಚ್ಚಿರುವುದು ಕಾನೂನುಬಾಹಿರ. ಆದರೆ, ಇಷ್ಟೊಂದು ಬೃಹತ್ ಪ್ರಮಾಣದ ನಗದು ಹಣ ವಿನಿಮಯವಾಗಿರುವುದು ಆರ್ಥಿಕ ಅಪರಾಧಕ್ಕೆ ಸೇರುತ್ತದೆ ಎಂದು ಹೈಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಮೇತಲ್ ಅವರು ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ದೇಶದ ಕಾನೂನು ಸಾಮಾನ್ಯರಿಗೂ ಹಾಗೂ ಶ್ರೀಮಂತರಿಗೂ ಒಂದೇ ಆಗಿರುತ್ತದೆ. 10 ಕೋಟಿ ರೂಪಾಯಿ ನಗದು ಹಣದ ಮೂಲ ಯಾವುದು ಮತ್ತು ಈ ವಹಿವಾಟು ಯಾರ ನಡುವೆ ಹೇಗೆ ನಡೆದಿದೆ ಎಂಬುದರ ಬಗ್ಗೆ ವಿಸ್ತೃತ ತನಿಖೆಯಾಗಬೇಕು. ಈ ಅಕ್ರಮ ಹಣ ವರ್ಗಾವಣೆಯಲ್ಲಿ ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವೆ ನಡೆದಿದೆ ಎನ್ನಲಾದ ವ್ಯವಹಾರದ ಸತ್ಯಾಸತ್ಯತೆ ಹೊರಬರಬೇಕಾಗಿದೆ.
ಇನ್ನೊಂದೆಡೆ, ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಅವರ ಪುತ್ರ, ನಟ ಜೈದ್ ಖಾನ್ ವಿರುದ್ಧ ಧನ್ವೀರ್ ಆಡಿಯೋ ಒಂದರಲ್ಲಿ ಅತ್ಯಂತ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಂ. ವಿನಾಯಕ್ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಅಭಿಮಾನಿಗಳು ಚಾಮರಾಜಪೇಟೆ ಪೊಲೀಸ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಧನ್ವೀರ್ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಮುಖಕ್ಕೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ವಿನಾಯಕ್ ನೀಡಿದ ದೂರಿನ ಆಧಾರದ ಮೇಲೆ ಚಾಮರಾಜಪೇಟೆ ಪೊಲೀಸರು ನಟ ಧನ್ವೀರ್ ವಿರುದ್ಧ ಎನ್‌ಸಿಆರ್ ದಾಖಲು ಮಾಡಿಕೊಂಡಿದ್ದಾರೆ. ಇದರೊಂದಿಗೆ ಧನ್ವೀರ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ನಾಲ್ಕು ದೂರುಗಳು ದಾಖಲಾದಂತಾಗಿದೆ.