
ಬೆಂಗಳೂರು: ಮೈಸೂರು ಅರಮನೆ ಆವರಣದಲ್ಲಿ ನಿನ್ನೆ ನಡೆದ ನಂದಿಧ್ವಜ ಪೂಜೆ ಸಂದರ್ಭದಲ್ಲಿ ಸಚಿವರಾದ ಬಾಲಕೃಷ್ಣ, ನರೇಂದ್ರ ಸ್ವಾಮಿ, ಬಸವಂತಪ್ಪ ಅವರನ್ನು ಪೂಜೆ ಆವರಣ ಪ್ರವೇಶಿಸಲು ಪೊಲೀಸ್ ಅಧಿಕಾರಿಗಳು ನಿರ್ಬಂಧಿಸಿದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸಿಎಂ ಡಿ ಕೆ ಶಿವಕುಮಾರ್ ಅವರು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.
ಮಂತ್ರಿಗಳನ್ನೇ ನಿರ್ಬಂಧಿಸುವ ಮೂಲಕ ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿರುವುದು ಕಂಡು ಬಂದಿದೆ. ತಕ್ಷಣ ಖುದ್ದು ನಾನೇ ಮಧ್ಯಪ್ರವೇಶಿಸಿ ಮಂತ್ರಿಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದೇನೆ. ಆದರೂ ಅಧಿಕಾರಿಗಳ ಉಡಾಫೆ ಸಹಿಸಲು ಆಗುವುದಿಲ್ಲ. ಹೀಗಾಗಿ ಇದಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಅದೇಶಿಸಿದ್ದೇನೆ ಎಂದು ಸಿಎಂ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಅವರು ಹೇಳಿದ್ದಾರೆ.
ಮೈಸೂರು ಜಂಬೂ ಸವಾರಿಗೂ ಮುನ್ನ ನಂದಿಧ್ವಜಕ್ಕೆ ಪೂಜೆ ಸಲ್ಲಿಕೆ ಮಾಡಲು ಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಸಚಿವರು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಸಚಿವರಾದ ಬಸವಂತಪ್ಪ, ಶಿವರಾಜ್ ತಂಗಡಗಿ, ನರೇಂದ್ರ ಸ್ವಾಮಿ ಅವರನ್ನು ಹಿರಿಯ ಐಪಿಎಸ್ ಅಧಿಕಾರಿ ತಡೆದಿದ್ದರು. ಇದರೊಂದಿಗೆ ಸಚಿವರಿಗೆ ಮುಜುಗರ ಎದುರಾಗಿತ್ತು. ಕೂಡಲೇ ಮಧ್ಯ ಪ್ರವೇಶ ಮಾಡಿದ್ದ ಸಿಎಂ, ಸಚಿವರನ್ನು ಬಿಡಲು ಹೇಳಿದ್ದರು. ಆ ಬಳಿಕ ಸಚಿವರು ಸಿಎಂ ಅವರೊಂದಿಗೆ ತೆರಳಿದ್ದರು.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ ಡಿಕೆ ಶಿವಕುಮಾರ್ ಅವರು, ಯಾರೋ ಅಧಿಕಾರಿಗಳು ಹೀಗೆ ಮಾಡಿದ್ದಾರೆ, ಆಗ ನಾನೇ ಅವರನ್ನು ಬಿಡಿಸಿದೆ. ಧ್ವಜ ಕಂಬದ ಪೂಜೆಗೆ ನಾನೇ ಬಂದು ಬಿಡಿಸಬೇಕಾಗಿಯಿತು. ಅದಕ್ಕೆಲ್ಲ ನಾನು ಏನು ಮಾಡೋಕೆ ಆಗಲ್ಲ. ನಮ್ಮ ಚಿಫ್ ಸೆಕ್ರೆಟರಿ ಅವರ ಮೇಲೆ ತನಿಖೆ ಮಾಡಿ ವಿಡಿಯೋ ಶಾಟ್ಸ್ ತೆಗೆದು ಏನು ಎತ್ತ ಎಂದು ನೋಡುತ್ತಿದ್ದಾರೆ. ದಸರಾ ಬಹಳ ವ್ಯವಸ್ಥಿತವಾಗಿ ನಡೆದಿದೆ. ಯತೀಂದ್ರ ಒಬ್ಬರ ಕೈಯಲ್ಲಿ ಆಗಲ್ಲ, ಆದ್ದರಿಂದಲೇ ನಾನು ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ತಗೋಬೇಕು ಎಂದು ಹೇಳಿದ್ದೆ. ಫಾರೇನ್ ಡೆಲಿಗೆಟ್ಸ್ ನ ರಾಯರೆಡ್ಡಿ ನೋಡಿಕೊಂಡರು, ಸಂತೋಷ ಎಲೆಕ್ಷನ್ ಇರುವ ಕಾರಣಕ್ಕೆ ಬರಲಿಲ್ಲ. ಸಚಿವ ಜಾರ್ಜ್ ಬಹಳ ಚೆನ್ನಾಗಿ ಅಚ್ಚುಕಟ್ಟಾಗಿ ಲೈಟಿಂಗ್ ಮಾಡಿದ್ದಾರೆ. ಎಲ್ಲಾ ಜವಾಬ್ದಾರಿ ವಹಿಸಿಕೊಂಡವರು ಬಹಳ ಚೆನ್ನಾಗಿ ಮಾಡಿದ್ದಾರೆ. ಕೆಲವರಿಗೆ ಎಲೆಕ್ಷನ್ ಇತ್ತು ನಾನು ಪೋರ್ಸ್ ಮಾಡಲು ಹೋಗಿಲ್ಲ ಎಂದಷ್ಟೇ ಸಿಎಂ ಹೇಳಿದರು.