
ಬೆಂಗಳೂರು (ಫೆ.1): ಐಟಿ ದಾಳಿಯ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ. ರಾಯ್ ಅವರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕಷ್ಟು ಬೆಳವಣಿಗೆಗಳಾಗಿದ್ದು, ಭಾನುವಾರ ಅವರ ಅಂತ್ಯಸಂಸ್ಕಾರ ಕೂಡ ನೆರವೇರಿದೆ. ಇದರ ನಡುವೆ ಅವರು 9 ಪುಟಗಳ ಡೆತ್‌ನೋಟ್ ಬರೆದಿದ್ದಾರೆ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ.
ಸಿ.ಜೆ. ರಾಯ್ ಆತ್ಮಹತ್ಯೆಗೂ ಮುನ್ನ 9 ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂಬ ಮಾಹಿತಿಯನ್ನು ಅವರ ಕುಟುಂಬದವರೇ ನೀಡಿದ್ದಾರೆ. ಈ ಪತ್ರದಲ್ಲಿ ಅವರು ಐಟಿ ದಾಳಿ, ಮಾನಸಿಕ ಒತ್ತಡ ಅಥವಾ ಉದ್ಯಮದಲ್ಲಿನ ಬಿಕ್ಕಟ್ಟುಗಳ ಬಗ್ಗೆ ಉಲ್ಲೇಖಿಸಿರಬಹುದು ಎಂದು ಶಂಕಿಸಲಾಗಿದೆ. ಆತ್ಮಹತ್ಯೆಗೂ ಮುನ್ನವೇ ಅವರು ಈ ಬಗ್ಗೆ ಕುಟುಂಬದವರಿಗೆ ಸುಳಿವು ನೀಡಿದ್ದರು ಎನ್ನಲಾಗಿದೆ.
ರಾಯ್ ಅವರ ಇಚ್ಛೆಯಂತೆಯೇ ಅವರಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ. ಅವರು ಇಷ್ಟಪಡುತ್ತಿದ್ದ ದುಬಾರಿ ಬ್ಲೇಜರ್, ಸನ್ ಗ್ಲಾಸ್ ಹಾಗೂ ಬ್ರ್ಯಾಂಡೆಡ್ ಶೂ ಧರಿಸಿಯೇ ಅವರ ಅಂತಿಮ ವಿಧಿವಿಧಾನ ಭಾನುವಾರ ನೆರವೇರಿದೆ.
"ನನ್ನ ಮತ್ತು ರಾಯ್ ನಡುವೆ ಜನವರಿ 30ರಂದು ಕೊನೆಯ ಮಾತುಕತೆಯಾಗಿತ್ತು. ನಾನು ಮದುವೆಗೆ ಹೋಗಿದ್ದಾಗ ಫೋನ್ ಮಾಡಿ 'ಯಾವಾಗ ಬರ್ತೀಯಾ? ನಿನ್ನ ಜೊತೆ ಮಾತನಾಡಬೇಕು' ಅಂದಿದ್ದರು. ಈಗ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ, ಜೀವನ ಸಾಗಿಸುವುದು ಕಷ್ಟವಾಗಿದೆ. ಸರ್ಕಾರ ಎಸ್‌ಐಟಿ (SIT) ರಚನೆ ಮಾಡಿದೆ, ತನಿಖೆಯಲ್ಲಿ ಸತ್ಯ ಹೊರಬರಲಿ ಎಂದು ಕಾಯುತ್ತಿದ್ದೇವೆ." ಎಂದು ಸಹೋದರ ಬಾಬು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಮೊಹಮದ್ ನಲಪಾಡ್, "ರಾಯ್ ಅವರ ಪುತ್ರ ರೋಹಿತ್ ಈಗ ತಂದೆಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಅವರು ಮಾತನಾಡಲು ಶಕ್ತಿ ಇಲ್ಲದಷ್ಟು ಸುಸ್ತಾಗಿದ್ದಾರೆ. ಸದ್ಯಕ್ಕೆ ಏನನ್ನೂ ಹೇಳುವ ಸ್ಥಿತಿಯಲ್ಲಿ ಅವರ ಕುಟುಂಬ ಇಲ್ಲ, ಮುಂದೊಂದು ದಿನ ಸುದ್ದಿಗೋಷ್ಠಿ ನಡೆಸಿ ಸತ್ಯವನ್ನು ತಿಳಿಸಲಿದ್ದಾರೆ' ಎಂದರು. "ಕಷ್ಟದ ಸಮಯದಲ್ಲಿ ಸಹಕರಿಸಿದ ಮಾಧ್ಯಮಗಳಿಗೆ ಧನ್ಯವಾದಗಳು. ನಮ್ಮ ಕುಟುಂಬ ನಿಮ್ಮ ಸಹಕಾರಕ್ಕೆ ಆಭಾರಿಯಾಗಿದೆ." ಎಂದು ಪುತ್ರ ರೋಹಿತ್ ಹೇಳಿದ್ದಾರೆ.
ಸರ್ಕಾರ ಈಗಾಗಲೇ ಈ ಹೈಪ್ರೊಫೈಲ್ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚನೆ ಮಾಡಿದೆ. ಸಿ.ಜೆ. ರಾಯ್ ಅವರ 9 ಪುಟಗಳ ಡೆತ್ ನೋಟ್‌ನಲ್ಲಿ ಇರುವ ವಿಷಯಗಳೇನು? ಐಟಿ ಅಧಿಕಾರಿಗಳ ವಿಚಾರಣೆಯ ವೇಳೆ ಏನಾಯಿತು? ಎಂಬ ಪ್ರಶ್ನೆಗಳಿಗೆ ಎಸ್‌ಐಟಿ ಉತ್ತರ ಕಂಡುಕೊಳ್ಳಬೇಕಿದೆ.