ಬೆಂಗಳೂರಿನ ಬೃಹತ್ ಫ್ಲೈಓವರ್ ಯೋಜನೆಗಳಿಗೆ ಬಿಗ್ ಟ್ವಿಸ್ಟ್, 6 ಕಾರಿಡಾರ್‌ಗಳಿಗೆ ಮರು ಟೆಂಡರ್, ಕಾರಣವೇನು?

Published : Oct 22, 2026, 01:57 PM IST
Bengaluru Flyovers

ಸಾರಾಂಶ

ಬೆಂಗಳೂರಿನ ಟ್ರಾಫಿಕ್ ನಿಯಂತ್ರಿಸಲು ರೂಪಿಸಿದ್ದ 6 ಪ್ರಮುಖ ಫ್ಲೈಓವರ್ ಮತ್ತು ಎಲಿವೇಟೆಡ್ ಕಾರಿಡಾರ್ ಯೋಜನೆಗಳಿಗೆ 'ಬಿಸ್ಮೈಲ್' ಹೊಸದಾಗಿ ಮರು ಟೆಂಡರ್ ಕರೆದಿದೆ. ಹಳೆಯ ಬಿಡ್‌ಗಳು ನಿಯಮಾನುಸಾರ ಇಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಈ ಯೋಜನೆಗಳಿಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನ ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ರೂಪಿಸಲಾಗಿದ್ದ ಮೂಲಸೌಕರ್ಯ ಯೋಜನೆಗಳಲ್ಲಿ ಪ್ರಮುಖ ಮರುಪರಿಶೀಲನೆ ನಡೆದಿದೆ. ನಗರದಲ್ಲಿ ಸುಮಾರು ₹1,500 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ 6 ಪ್ರಮುಖ ಫ್ಲೈಓವರ್ ಹಾಗೂ ಎಲಿವೇಟೆಡ್ ಕಾರಿಡಾರ್ ಯೋಜನೆಗಳಿಗೆ ‘ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್’-ಬಿಸ್ಮೈಲ್ ನೂತನವಾಗಿ ಮರು ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿದೆ.

ಮೊದಲು ಸಲ್ಲಿಕೆಯಾಗಿದ್ದ ಟೆಂಡರ್ ದಾಖಲೆಗಳು ನಗರಾಭಿವೃದ್ಧಿ ಇಲಾಖೆಯ ಪ್ರಮಾಣಿತ ಗುತ್ತಿಗೆ ನಿಯಮಗಳು ಮತ್ತು ಮಾನದಂಡಗಳಿಗೆ ಅನುಗುಣವಾಗಿಲ್ಲದ ಕಾರಣ, ಹಳೆಯ ಬಿಡ್‌ಗಳನ್ನು ರದ್ದುಗೊಳಿಸಿ ಹೊಸದಾಗಿ ಅರ್ಜಿ ಆಹ್ವಾನಿಸುವಂತೆ ಸರಕಾರದ ಉಪಸಮಿತಿಯು ಶಿಫಾರಸು ಮಾಡಿತ್ತು.

11 ಬೃಹತ್ ಯೋಜನೆಗಳ ಪೈಕಿ 6 ಯೋಜನೆಗಳಿಗೆ ಮರು ಜೀವ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ನಿಗಮಗಳಲ್ಲಿ ಒಟ್ಟು ₹13,262.70 ಕೋಟಿ ವೆಚ್ಚದಲ್ಲಿ 75.6 ಕಿ.ಮೀ. ಉದ್ದದ 11 ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸಲು ರಾಜ್ಯ ಸಚಿವ ಸಂಪುಟವು ಕಳೆದ ಏಪ್ರಿಲ್‌ನಲ್ಲಿ ಅನುಮೋದನೆ ನೀಡಿತ್ತು. ಈ ಬೃಹತ್ ಯೋಜನೆಯನ್ನು ಜಾರಿಗೊಳಿಸುವ ಹೊಣೆಯನ್ನು ‘ಬಿ-ಸ್ಮೈಲ್’ ಸಂಸ್ಥೆಗೆ ವಹಿಸಲಾಗಿತ್ತು. ಪ್ರಸ್ತುತ ಮತ್ತೆ ಟೆಂಡರ್ ಕರೆದಿರುವ 6 ಪ್ರಮುಖ ಯೋಜನೆಗಳ ವಿವರ ಹೀಗಿದೆ.

  • ಕೋಗಿಲು ಕ್ರಾಸ್ ಎಲಿವೇಟೆಡ್ ಕಾರಿಡಾರ್ (ದೊಡ್ಡಬಳ್ಳಾಪುರ ರಸ್ತೆ): ₹1,026.66 ಕೋಟಿ
  • ಶೋಲೆ ಸರ್ಕಲ್‌ನಿಂದ ಸೇಂಟ್ ಜಾನ್ಸ್ ಆಸ್ಪತ್ರೆ ರಸ್ತೆ ಕಾರಿಡಾರ್: ₹564 ಕೋಟಿ
  • ಮಿನರ್ವಾ ಸರ್ಕಲ್‌ನಿಂದ ಹಡ್ಸನ್ ಸರ್ಕಲ್ ಕಾರಿಡಾರ್: ₹539.94 ಕೋಟಿ
  • ಪೈಪ್‌ಲೈನ್ ರಸ್ತೆ ಗ್ರೇಡ್ ಸೆಪರೇಟರ್: ₹315.28 ಕೋಟಿ
  • ಕೋಣನಕುಂಟೆ ಕ್ರಾಸ್ ಫ್ಲೈಓವರ್ (ಕನಕಪುರ ರಸ್ತೆ): ₹76.76 ಕೋಟಿ
  • ಎಂಇಐ ಜಂಕ್ಷನ್ ಸ್ಪ್ಲಿಟ್ ಫ್ಲೈಓವರ್ (ತುಮಕೂರು ರಸ್ತೆ): ₹41.62 ಕೋಟಿ

ಮತ್ತೆ 3 ಯೋಜನೆಗಳಿಗೆ ಶೀಘ್ರವೇ ಬಿಡ್ಡಿಂಗ್, 2 ಕಾರಿಡಾರ್‌ಗಳಿಗೆ ಟೋಲ್ ವ್ಯವಸ್ಥೆ:

ಮುಂದಿನ ಒಂದು ವಾರದೊಳಗೆ ಇಂದಿರಾನಗರ 100 ಅಡಿ ರಸ್ತೆಯ ಫ್ಲೈಓವರ್, ಶಿರಸಿ ವೃತ್ತದಿಂದ ನಾಯಂಡಹಳ್ಳಿವರೆಗಿನ 5.2 ಕಿ.ಮೀ. ಉದ್ದದ ಫ್ಲೈಓವರ್ ಹಾಗೂ ಕನಕಪುರ ರಸ್ತೆಯ ಸಣ್ಣ ಫ್ಲೈಓವರ್ ಸೇರಿದಂತೆ ಮತ್ತ ಮೂರು ಯೋಜನೆಗಳಿಗೆ ಹೊಸ ಬಿಡ್‌ಗಳನ್ನು ಆಹ್ವಾನಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಇದಲ್ಲದೆ, ರಾಗಿಗುಡ್ಡ ಜಂಕ್ಷನ್‌ನಿಂದ ಕನಕಪುರ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಹಾಗೂ ಯಶವಂತಪುರದ ಮೇಥಿಕೆರೆ ಕ್ರಾಸ್‌ನಿಂದ ಐಐಎಸ್‌ಸಿ, ಮೆಖ್ರಿ ವೃತ್ತ, ಜಯಮಹಲ್ ಮತ್ತು ಹಲಸೂರು ಸರೋವರದ ಮೂಲಕ ಓಲ್ಡ್ ಮದ್ರಾಸ್ ರಸ್ತೆಗೆ ಸಂಪರ್ಕಿಸುವ ಮತ್ತೊಂದು ಬೃಹತ್ ಕಾರಿಡಾರ್‌ಗೆ ಟೋಲ್ ಆಧಾರಿತ ಎಲಿವೇಟೆಡ್ ಯೋಜನೆಯಾಗಿ ಟೆಂಡರ್ ಪ್ರಕ್ರಿಯೆ ಮುಂದುವರಿದಿದೆ.

ಹೈಕೋರ್ಟ್ ಮೆಟ್ಟಿಲೇರಿದ ವಿವಾದ

ಒಂದೆಡೆ ಸರಕಾರವು ಟೆಂಡರ್ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತಿದ್ದರೆ, ಇನ್ನೊಂದೆಡೆ ಸ್ಥಳೀಯ ನಿವಾಸಿಗಳು ಹಾಗೂ ಪ್ರಜಾಸಂಘಟನೆಗಳಿಂದ ಯೋಜನೆಗಳಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿಶೇ‍ಷವಾಗಿ ಇಂದಿರಾನಗರ 100 ಅಡಿ ರಸ್ತೆಯ ಫ್ಲೈಓವರ್ ಹಾಗೂ ರಾಗಿಗುಡ್ಡ-ಕನಕಪುರ ರಸ್ತೆ ಕಾರಿಡಾರ್ ಯೋಜನೆಗಳು ಪರಿಸರ ಮತ್ತು ವಸತಿ ಪ್ರದೇಶಗಳಿಗೆ ಧಕ್ಕೆ ತರುತ್ತವೆ ಎಂದು ಆರೋಪಿಸಿ ಸಾರ್ವಜನಿಕರು ಇತ್ತೀಚೆಗೆ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ್ದರು. ಇಂದಿರಾನಗರ ಫ್ಲೈಓವರ್ ಯೋಜನೆಯನ್ನು ರದ್ದುಗೊಳಿಸುವಂತೆ ಕೋರಿ ಸ್ಥಳೀಯ ನಿವಾಸಿಗಳು ಈಗಾಗಲೇ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆ ಹಂತದಲ್ಲಿದೆ.

PREV
Read more Articles on
click me!

Recommended Stories

Bengaluru: ಫೋನ್‌ ವಾಪಸ್‌ ಕೊಡಲು ₹3,000 ಕೇಳಿದ ರಾಪಿಡೋ ಚಾಲಕ; ಕೊನೆಗೆ ಸಹಾಯಕ್ಕೆ ಬಂದ ಪೊಲೀಸರೇ ಹೀರೋ
Mysuru: ದಸರಾದಲ್ಲಿ ದಲಿತ ಸಚಿವರಿಗೆ ಅವಮಾನ, BJP ಆರೋಪದ ಬೆನ್ನಲ್ಲೇ ವಿಚಾರಣೆಗೆ ಸಿಎಂ ಆದೇಶ