BMTCಯಲ್ಲಿ ಹೀಗೊಬ್ಬ ದಾನಶೂರ ಕೃಷ್ಣ, ಸಹಾಯಕ್ಕೆ ದುಡ್ಡಲ್ಲ, ಮನಸ್ಸಿದ್ದರೆ ಸಾಕು ಎಂದ ಮೂರ್ತಿ!

Published : Jul 23, 2026, 07:04 PM ISTUpdated : Jul 23, 2026, 09:52 PM IST
BMTC Krishnamurty

ಸಾರಾಂಶ

ಬೆಂಗಳೂರಿನ ಬಿಎಂಟಿಸಿ ಚಾಲಕ ಕೃಷ್ಣಮೂರ್ತಿ ಅವರು ತಮ್ಮ ದೈನಂದಿನ ವೃತ್ತಿಯ ಜೊತೆಗೆ ಮಾನವೀಯ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿದಿನ ತಮ್ಮ ಮಾರ್ಗದಲ್ಲಿ ಸಿಗುವ ಅಸಹಾಯಕರಿಗೆ ಮತ್ತು ಹಸಿದವರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸುವ ಮೂಲಕ ಇವರು ನಿಜವಾದ ಒಳ್ಳೆಯತನಕ್ಕೆ ಮಾದರಿಯಾಗಿದ್ದಾರೆ.

ಬೆಂಗಳೂರು (ಜು.23): ನಾವು ಪ್ರತಿದಿನ ಓಡಾಡುವ ರಸ್ತೆಗಳಲ್ಲಿ ಸಾವಿರಾರು ಮುಖಗಳು ಸಿಗುತ್ತವೆ. ಪ್ರತಿಯೊಬ್ಬರೂ ತಮ್ಮದೇ ಆದ ಜಂಜಾಟ, ಅವಸರ, ಕೆಲಸಗಳಲ್ಲಿ ಮುಳುಗಿರುತ್ತಾರೆ. ಆದರೆ, ಇಲ್ಲೊಬ್ಬ ಬಿಎಂಟಿಸಿ ಚಾಲಕ ತನ್ನ ವೃತ್ತಿಯೊಂದಿಗೆ ಮಾನವೀಯತೆಯನ್ನು ಬೆಸೆದುಕೊಂಡು ಬೆಂಗಳೂರಿನ ರಸ್ತೆಗಳಲ್ಲಿ ಕಾಣಸಿಗುತ್ತಾರೆ. ಕೇವಲ ಪ್ರಯಾಣಿಕರನ್ನು ತಮ್ಮ ಸ್ಥಳ ತಲುಪಿಸೋದು ಮಾತ್ರ ಇವರ ಕೆಲಸ. ಅದರ ನಡುವೆ ಇವರು ರಸ್ತೆಯ ನಡುವೆ ಸಿಕ್ಕ ಅಸಹಾಯಕ ಜನರ ಹೊಟ್ಟೆ ತುಂಬಿಸುವ ಕೆಲಸವನ್ನು ತಮ್ಮ ಕೈಲಾದ ಮಟ್ಟಿಗೆ ಮಾಡುತ್ತಿದ್ದಾರೆ.

ಈ ಬಗ್ಗೆ ಪತ್ರಕರ್ತೆ ರಜನಿ ರಾವ್‌ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ಅವರ ನೇರ ಪೋಸ್ಟ್‌ ಇಲ್ಲಿದೆ.

''ಯೇ ತಾಯಿ, ಈ ಕಡೆ ಬಾ" ಬಿಎಂಟಿಸಿ ಡ್ರೈವರ್​ ಜೋರಾಗಿ ಕೂಗಿದಾಗ ಬಸ್​​ನಲ್ಲಿ ಕುಳಿತಿದ್ದ ನಾನು ಒಮ್ಮೆ ಆ ಕಡೆ ನೋಡಿದೆ. ಸಾಮಾನ್ಯವಾಗಿ ಬಸ್​ಗೆ ಯಾರಾದ್ರೂ ಅಡ್ಡ ಬಂದ್ರೆ ಡ್ರೈವರ್​ ಆ ಥರ ಕೂಗೋದು ಸಾಮಾನ್ಯ. ಆದ್ರೆ ಇಲ್ಲಿ ಬಸ್​ ಡ್ರೈವರ್​ ದೂರದಲ್ಲಿ ಹೋಗುತ್ತಿದ್ದ ಚಿಂದಿ ಆಯುವ ಮಹಿಳೆಯೊಬ್ಬಳನ್ನು ಕರೆಯುತ್ತಿದ್ದರು. ಹತ್ತಿರ ಬಂದ ಆಕೆ ಡ್ರೈವರ್​ ಬಳಿ ಕೈ ಚಾಚಿದಳು. ಡ್ರೈವರ್​ ಕೂಡಲೆ ಬಳಿಯಿದ್ದ ಪೊಟ್ಟಣವೊಂದನ್ನು ಕೊಟ್ಟರು. ನಾನು ಕುಳಿತಲ್ಲಿಂದಲೇ ಡ್ರೈವರ್​​ರನ್ನು ಗಮನಿಸುತ್ತಿದ್ದೆ..ಬೆಳಗ್ಗೆ 7 ಗಂಟೆಯಾಗಿದ್ದರಿಂದ ರಸ್ತೆಯಲ್ಲಿ ಹೆಚ್ಚು traffic ಇರಲಿಲ್ಲ. ಬಸ್ ಚಲಾಯಿಸುತ್ತಿದ್ದರೂ ಅವರ​​​ ಕಣ್ಣುಗಳು ರಸ್ತೆಯಲ್ಲೆಲ್ಲೋ ಇರುವ ಭಿಕ್ಷುಕರು, ಫುಟ್​ಪಾತಿನಲ್ಲಿ ಕುಳಿತಿರುವ ಅಸಹಾಯಕ ವೃದ್ಧರು, ದಣಿದು ಕುಳಿತ ಪೌರ ಕಾರ್ಮಿಕರ ಕಡೆಯೇ ಇರುತ್ತಿತ್ತು. ಬಸ್ಸನ್ನು ಅರೆ ಕ್ಷಣ ನಿಧಾನಗೊಳಿಸಿ, ತಮ್ಮಣ್ಣ ಇಲ್ಲಿ ಬಾ, ಅಜ್ಜಿ ಇದನ್ನು ತೊಗೋ ಎನ್ನುತ್ತಾ ಕೈಯಲ್ಲಿದ್ದ ಪೊಟ್ಟಣವನ್ನು ಚಾಚುತ್ತಿದ್ದರು. ಉತ್ತರಹಳ್ಳಿಯಿಂದ ಮೆಜೆಸ್ಟಿಕ್​​ ಬರುವಷ್ಟರಲ್ಲಿ ಕನಿಷ್ಟ 4 ಜನರಿಗೆ ಆ ಪೊಟ್ಟಣ ನೀಡಿದ್ದು ನೋಡಿದೆ. ಅದರಲ್ಲಿದ್ದು ಪಲಾವ್​ ಅಥವಾ ಅಂಥದ್ದೇನೋ ರೈಸ್​ ಐಟಮ್ ಇದೆ​ ಎನ್ನುವುದು ತಿಳಿಯುತ್ತಿತ್ತು. ಕುತೂಹಲದಿಂದ ವಿಚಾರಿಸಿದಾಗ ತಿಳಿದಿದ್ದು, ನಮ್ಮ ಬಸ್ಸಿನ ಡ್ರೈವರ್​​ ಕೃಷ್ಣಮೂರ್ತಿ, ಪ್ರತಿನಿತ್ಯ ಕನಿಷ್ಟ 10 ಪ್ಯಾಕ್​ ತಿಂಡಿ ಕಟ್ಟಿಸಿಕೊಂಡು ಬರ್ತಾರೆ. ದಾರಿಯಲ್ಲಿ ಸಿಗುವ ಅಸಹಾಯಕರಿಗೆ, ಅಗತ್ಯ ಇರುವವರಿಗೆ ನೀಡುತ್ತಾರೆ. ಇದನ್ನು ಅವರು ಪ್ರತಿನಿತ್ಯ ವ್ರತದಂತೆ ಮಾಡುತ್ತಾ ಬಂದಿದ್ದಾರೆ. ನಾನು ಯಾಕೆ ಹೀಗೆ ಕೊಡ್ತಿದ್ದೀರಿ ಅಂತ ಕೇಳಿದ್ದಕ್ಕೆ ಅದಕ್ಕೆ ಅವರು ಸಹಜವಾಗಿ ಹೇಳಿದ್ರು ’ನಾನು ದುಡಿದಿದ್ರಲ್ಲಿ ಒಂದು ಚೂರಾದ್ರೂ ಬೇರೆಯವರಿಗೆ ಕೊಡಬೇಕಲ್ವಾ ಮೇಡಂ.. ಇದರಿಂದ ಏನಾದ್ರೂ ಪುಣ್ಯ ಅಂತ ಬಂದ್ರೆ ಅದು ನನ್ನ ಮಗನನ್ನು ಕಾಪಾಡತ್ತೆ‘ ಅವರ ಮಾತು ಕೇಳಿ ಮಿಂಚು ಹೊಡೆದಂಗಾಯ್ತು. ನಮ್ಮ ಸುತ್ತಮುತ್ತ ಎಷ್ಟು ಒಳ್ಳೆಯ ಜನರಿದ್ದಾರಲ್ವಾ.. ನಿಜವಾದ ಒಳ್ಳೆಯತನಕ್ಕೆ ಪ್ರಚಾರದ ಹಂಗಿರುವುದಿಲ್ಲ. ಅದಕ್ಕೆ ಅದು ಎದ್ದು ತೋರುವುದಿಲ್ಲ. ಅಷ್ಟೇ.

(ಅಂದ ಹಾಗೆ ಅವರ ಫೋಟೋ ತೆಗೆದುಕೊಂಡೆ. ಆದರೆ ಅವರು ಬೇಡ ಎಂದಿದ್ದರಿಂದ ಇಲ್ಲಿ ಹಾಕುತ್ತಿಲ್ಲ. ಈ ಚಿತ್ರದಲ್ಲಿ ಎಂಜಿನ್​​ ಮೇಲೆ ತಿಂಡಿ ಪೊಟ್ಟಣಗಳು ಇರುವುದನ್ನು ಗಮನಿಸಿ)

ನಿಜವಾದ ಒಳ್ಳೆಯತನಕ್ಕೆ ಯಾವುದೇ ಪ್ರಚಾರದ ಹಂಗಿರುವುದಿಲ್ಲ. ಕ್ಯಾಮೆರಾಗಳ ಮುಂದೆ ನೀಡುವ ದಾನಕ್ಕಿಂತ, ಜಗತ್ತಿನ ಕಣ್ಣಿಗೆ ಬೀಳದೆ ಎಂಜಿನ್ ತುದಿಯಲ್ಲಿಟ್ಟು ನೀಡುವ ಈ 10 ಪೊಟ್ಟಣಗಳ ಪ್ರೀತಿ ಎಷ್ಟೋ ಪಟ್ಟು ದೊಡ್ಡದು. ಹಸಿದ ಹೊಟ್ಟೆಗೆ ಬಿದ್ದ ಒಂದು ಆಹಾರವನ್ನು ನೆನೆದು ಆ ಜೀವಗಳು ನೀಡುವ ಹಾರೈಕೆ, ಖಂಡಿತವಾಗಿಯೂ ಅವರ ಮಗನಿಗೆ ಶ್ರೀರಕ್ಷೆಯಾಗಲಿದೆ.

ಕೃಷ್ಣಮೂರ್ತಿ ಅವರ ಬಗ್ಗೆ

ತಂದೆಯವರ ಆದರ್ಶ ಹಾಗೂ ಮಾರ್ಗದರ್ಶನದಿಂದ ಪ್ರೇರಿತರಾದ ಕೃಷ್ಣಮೂರ್ತಿ (ಚಾಲಕ, ಟೋಕನ್ ಸಂಖ್ಯೆ: 17441, ಡಿಪೋ 33, ಮೊ: 8453861249) ಅವರು ಕಳೆದ 14 ವರ್ಷಗಳಿಂದ ನಿರಂತರವಾಗಿ ಈ ಕಾರ್ಯ ಮಾಡುತ್ತಿದ್ದಾರೆ. ಈ ಸುದೀರ್ಘ ಅವಧಿಯಲ್ಲಿ ಅವರು ರಸ್ತೆಬದಿಯ ಪಾದಚಾರಿ ಮಾರ್ಗಗಳಲ್ಲಿ (ಫುಟ್‌ಪಾತ್‌) ವಾಸಿಸುವ ಅಸಹಾಯಕ ವೃದ್ಧರು ಮತ್ತು ಮಹಿಳೆಯರಿಗೆ ದಿನವೂ ಆಸರೆಯಾಗಿ ಉಚಿತವಾಗಿ ಆಹಾರ ವಿತರಿಸುವ ಮೂಲಕ ಹಸಿದ ಹೊಟ್ಟೆಗಳನ್ನು ತುಂಬಿಸುತ್ತಿದ್ದಾರೆ. ಕೇವಲ ಸಮಾಜ ಸೇವೆಯಷ್ಟೇ ಅಲ್ಲದೆ, ತಮ್ಮ ಡಿಪೋದಲ್ಲಿ ಯಾವುದೇ ಶುಭ ಸಮಾರಂಭ, ಸಭೆ ಅಥವಾ ಕಾರ್ಯಕ್ರಮಗಳು ಆಯೋಜನೆಗೊಂಡರೂ ಸಾಕು, ಮುಂಚೂಣಿಯಲ್ಲಿ ನಿಂತು ಸಂಪೂರ್ಣ ಶ್ರದ್ಧೆ ಹಾಗೂ ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸಲು ಇವರು ಸದಾ ಸಿದ್ಧರಿರುತ್ತಾರೆ.

 

PREV
Read more Articles on
click me!

Recommended Stories

ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ: ನಂದಿನಿ ಬೆಣ್ಣೆ, ತುಪ್ಪದ ದರ ದಿಢೀರ್ ಏರಿಕೆ!; ನಾಳೆಯಿಂದಲೇ ಪರಿಷ್ಕೃತ ದರ ಜಾರಿ!
ಬೆಂಗಳೂರು ಪ್ರಯಾಣಿಕರಿಗೆ ಶುಭಸುದ್ದಿ: 5 ಹೊಸ ಬಸ್ ಸೇವೆ ಆರಂಭಿಸಿದ BMTC!; ಮಾರ್ಗ, ಸಮಯದ ಪೂರ್ಣ ವಿವರ ಇಲ್ಲಿದೆ