
ಬೆಂಗಳೂರು: ನಗರದ ದಕ್ಷಿಣ ಭಾಗದಿಂದ ಉತ್ತರ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪಿಂಕ್ ಲೈನ್ ಮೆಟ್ರೋ ಮತ್ತಷ್ಟು ವಿಳಂಬವಾಗಲಿದೆ. ಯೋಜನಾ ವೆಚ್ಚ ಏರಿಕೆಯಾದ ಹಿನ್ನೆಲೆ ಕಾಮಗಾರಿಯಲ್ಲಿ ತಡೆಯುಂಟಾಗಲಿದೆ ಎಂದು ಹೇಳಲಾಗುತ್ತಿದೆ. ಪಿಂಕ್ ಲೈನ್ ಮೆಟ್ರೋ ಕಾಮಗಾರಿ ವೆಚ್ಚ 8,730 ಕೋಟಿ ರೂ.ಗಳಿಂದ 17,346 ಕೋಟಿ ರೂ.ಗೆ ಏರಿಕೆಯಾಗಿದೆ. ಯೋಜನೆ ವೆಚ್ಚ ಮೂಲ ಅಂದಾಜಿಗಿಂತ ಡಬಲ್ ಏರಿಕೆಯಾಗಿದೆ.
ಕಾಳೇನ ಅಗ್ರಹಾರದಿಂದ ನಾಗಾವರದವರೆಗಿನ 21.26 ಕಿಲೋಮೀಟರ್ ವರೆಗಿನ ಮಾರ್ಗವನ್ನು ಪಿಂಕ್ ಲೈನ್ ಹೊಂದಿದೆ. ಈ 21.26 ಕಿಲೋಮೀಟರ್‌ನಲ್ಲಿ 7.5 km ಎಲಿವೇಟೆಡ್ ಮತ್ತು ಇನ್ನುಳಿದ 13.76 km ಅಂಡರ್‌ಗ್ರೌಂಡ್ ಮಾರ್ಗವಾಗಿದೆ. ಎಲಿವೇಟೆಡ್‌ಗಿಂತ ಅಂಡರ್‌ಗ್ರೌಂಡ್ ನಿರ್ಮಾಣ ವೆಚ್ಚ ಹೆಚ್ಚಿದೆ. ಎಲಿವೇಟೆಡ್ ಮಾರ್ಗದ ನಿರ್ಮಾಣಕ್ಕೆ ₹3,470 ಕೋಟಿ, ಅಂಡರ್‌ಗ್ರೌಂಡ್ ಮಾರ್ಗಕ್ಕೆ ₹13,876 ಕೋಟಿ ವೆಚ್ಚವಾಗುತ್ತಿದೆ. ಅಂದ್ರೆ ಭೂಗತ ಮಾರ್ಗದ 1 ಕಿಲೋಮೀಟರ್ ಮಾರ್ಗಕ್ಕೆ ಬರೋಬ್ಬರಿ 1 ಸಾವಿರ ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗುತ್ತಿದೆ.
ಕಳೆದ ಕೆಲವು ತಿಂಗಳುಗಳಿಂದ ಸಿಮೆಂಟ್, ಕಬ್ಬಿಣ, ಜಲ್ಲಿ ಸೇರಿದಂತೆ ನಿರ್ಮಾಣ ಸಾಮಾಗ್ರಿಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಹಾಗೆಯೇ ಸುರಂಗ ಕೊರೆಯುವ ಯಂತ್ರಗಳ ಬಾಡಿಗೆ, ಕಾರ್ಮಿಕರ ವೇತನ ಸೇರಿದಂತೆ ಇನ್ನಿತರ ಅಂಶಗಳು ಬೆಲೆ ಏರಿಕೆಗೆ ಕಾರಣವಾಗಿವೆ ಎಂದು ಹೇಳಬಹುದು. ಅಂದಾಜು ವೆಚ್ಚ ನಿರ್ಧರಿಸುವಾಗಿನ ಬೆಲೆಗಳು ಇಂದು ಶೇ.40ರಷ್ಟು ಏರಿಕೆಯಾಗಿವೆ. ಈ ಎಲ್ಲಾ ವೆಚ್ಚಗಳನ್ನು ಅಂದಾಜು ಮೂಲವೆಚ್ಚದಲ್ಲಿ ಸೇರಿಸಿದಾಗ ಒಟ್ಟು ಮೊತ್ತ ದುಪ್ಪಟ್ಟು ಏರಿಕೆಯಾಗಿದೆ.
ಇದೆಲ್ಲದರಾ ಜೊತೆ ಸುರಕ್ಷತಾ ವೆಚ್ಚಗಳನ್ನು ಸಹ ಸೇರಿಸಲಾಗಿದೆ. ಪ್ಲಾಟ್‌ಫಾರಂಗಳಲ್ಲಿ ಆಟೋಮೆಟಿಕ್ ಡೋರ್ ಅಳವಡಿಸಲಾಗುತ್ತಿದೆ. ಈ ವೆಚ್ಚಗಳು ಯೋಜನೆಯಲ್ಲಿ ಸೇರಿಸಲಾಗಿದೆ. ಸದ್ಯದ ಮೆಟ್ರೋ ನಿಲ್ದಾಣಗಳ ಪ್ಲಾಟ್‌ಫಾರಂನಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳಿಲ್ಲ.
ಪಿಂಕ್ ಲೈನ್ ಮೆಟ್ರೋ 2027ಕ್ಕೆ ಮುಂದೂಡಿಕೆ
2016ರಲ್ಲಿ ಮುಕ್ತಾಯಗೊಳ್ಳಬೇಕಿದ್ದ ಪಿಂಕ್ ಲೈನ್ ಮೆಟ್ರೋ ಕಾಮಗಾರಿ 2022ರಲ್ಲಿ ಆರಂಭವಾಗಿದೆ. ಇದೀಗ ಈ ಯೋಜನೆ 2027ಕ್ಕೆ ಮುಂದೂಡಿಕೆಯಾಗಿದ್ದು, ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Namma Metro ಹಳದಿ ಲೈನ್ಗೆ ಜಯಲಲಿತಾ, ಕರುಣಾನಿಧಿ ಹೆಸರಿಡ್ತೀರಾ? ಕನ್ನಡ ಸಂಘಟನೆಗಳಿಂದ ಭಾರಿ ವಿರೋಧ