ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಲಾಗಿದ್ದರೂ, ಬೆಂಗಳೂರು ಮೆಟ್ರೋ ರೈಲು ಸಂಚಾರ ಎಂದಿನಂತೆ ಮುಂದುವರಿಯಲಿದೆ. ಸರ್ಕಾರದ ಆದೇಶದಂತೆ ಕಚೇರಿಗಳಿಗೆ ಮಾತ್ರ ರಜೆ ಘೋಷಿಸಲಾಗಿದೆ.
ಬೆಂಗಳೂರು: ರಾಜ್ಯದ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು ಹಾಗೂ ಅನುದಾನಿತ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ನಿಗಮವೂ ಕೂಡ ಮಾಜಿ ಸಿಎಂ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಪ್ರಕಟಣೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ನಾಳೆ ಮೆಟ್ರೋ ರೈಲು ಇರುವುದು ಇಲ್ಲವೋ ಎಂಬ ಗೊಂದಲಗಳಿದ್ದವು. ಈ ಬಗ್ಗೆ ಈಗ ಬೆಂಗಳೂರು ಮೆಟ್ರೋ ರೈಲ್ ನಿಗಮ ನಿಯಮಿತ ಮತ್ತೆ ಸ್ಟಷ್ಟನೆ ನೀಡಿದೆ.
'ಕರ್ನಾಟಕ ಸರ್ಕಾರವು ಅಧಿಸೂಚನೆ ಸಂಖ್ಯೆ ಸಿಆಸುಇ 35 ಹೆಚ್‌ಹೆಚ್‌ಎಲ್ 2024 ದಿನಾಂಕ 10.12.2024ರಂತೆ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದ ಶ್ರೀ ಎಸ್ ಎಂ ಕೃಷ್ಣ ರವರು ನಿಧನರಾದ ವಿಷಯವನ್ನು ಕರ್ನಾಟಕ ರಾಜ್ಯ ಸರ್ಕಾರವು ತೀವ ಸಂತಾಪದಿಂದ ಪ್ರಕಟಿಸಿದೆ. ದಿವಂಗತರ ಗೌರವಾರ್ಥವಾಗಿ ದಿನಾಂಕ:11.12.2024ರ ಬುಧವಾರದಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಛೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ (ಎಲ್ಲಾ ಅನುದಾನಿತ ವಿದ್ಯಾ ಸಂಸ್ಥೆಗಳು ಸೇರಿದಂತೆ) ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ದಿನಾಂಕ:11.12.2024ರ ಬುಧವಾರದಂದು ರಜೆಯನ್ನು ಘೋಷಿಸಿದೆ.' ಎಂದು ಮೆಟ್ರೋದ ಪ್ರಧಾನ ವ್ಯವಸ್ಥಾಪಕ ಶಿವಕುಮಾರನ್ ಕೆ.ಎಂ ಪ್ರಕಟಣೆ ಹೊರಡಿಸಿದ್ದರು.
ಹೀಗಾಗಿ ನಾಳೆ ಮೆಟ್ರೋ ರೈಲು ಇರುತ್ತಾ ಇರಲ್ವಾ ಎಂಬ ಗೊಂದಲ ಉಂಟಾಗಿತ್ತು. ಈ ಗೊಂದಲಕ್ಕೆ ಈಗ ತೆರೆ ಬಿದ್ದಿದ್ದು, ನಾಳೆ ಎಂದಿನಂತೆ ಮೆಟ್ರೋ ಕಾರ್ಯ ನಿರ್ವಹಿಸಲಿದೆ. ಸರ್ಕಾರದ ಆದೇಶದಂತೆ ಕಚೇರಿಗಳಿಗೆ ಮಾತ್ರ ರಜೆ ಘೋಷಿಸಲಾಗಿದ್ದು, ಮೆಟ್ರೋ ರೈಲುಗಳ ಸಂಚಾರ ಎಂದಿನಂತೆ ಇರಲಿದೆ ಎಂದು ಬಿಎಂಆರ್‌ಸಿಎಲ್ ತನ್ನ ಮತ್ತೊಂದು ಪ್ರಕಟಣೆಯಲ್ಲಿ ತಿಳಿಸಿದೆ.
'ಮಾಜಿ ಮುಖ್ಯಮಂತ್ರಿ ಶ್ರೀ ಎಸ್‌ಎಂ ಕೃಷ್ಣ ಅವರ ನಿಧನದ ಹಿನ್ನೆಲೆ ನಾಳೆ ಸಾರ್ವಜನಿಕ ರಜೆ ಘೋಷಣೆ ಹಿನ್ನಲೆಯಲ್ಲಿ 'ನಮ್ಮ ಮೆಟ್ರೋ' ಕೂಡ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸುಳ್ಳು ವದಂತಿ ಹರಡಿದೆ. ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು ನಾಳೆ ಕಾರ್ಯನಿರ್ವಹಿಸುತ್ತಿಲ್ಲವಾದರೂ 'ನಮ್ಮ ಮೆಟ್ರೋ' ಎಂದಿನಂತೆ ಸೇವೆ ಸಲ್ಲಿಸಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ' ಎಂದು ಬಿಎಂಆರ್‌ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
Clarification: Despite the public holiday declared for the sad demise of former CM Shri S. M. Krishna, will run as per the usual schedule tomorrow. Schools, colleges, and govt offices will remain closed, but Metro services are available.
— ನಮ್ಮ ಮೆಟ್ರೋ (@OfficialBMRCL)