₹3.4 ಲಕ್ಷ ಕೋಟಿ ಆಸ್ತಿಯ ಒಡೆಯನ ಕಣ್ಣು ಬೆಂಗಳೂರಿನ ಮೇಲೆ; ಓಲಾ, ಉಬರ್‌ಗೆ ಶೀಘ್ರವೇ ಬಿಗ್ ಟಕ್ಕರ್

Published : Nov 11, 2026, 03:03 PM IST
billionaire green sm entry bengaluru ola uber competition

ಸಾರಾಂಶ

ಬೆಂಗಳೂರಿನಲ್ಲಿ ಕ್ಯಾಬ್ ಬುಕ್ ಮಾಡಿದರೆ ರೈಡ್ ಕ್ಯಾನ್ಸಲ್ ಆಗುತ್ತೆ, ಪೀಕ್ ಅವರ್‌ನಲ್ಲಿ ದರ ಗಗನಕ್ಕೇರುತ್ತೆ, ಕೆಲವೊಮ್ಮೆ ಎಸಿ ಕೂಡ ಸರಿಯಾಗಿ ಕೆಲಸ ಮಾಡಲ್ಲ... ಇಂತಹ ಸಮಸ್ಯೆಗಳಿಂದ ಬೇಸತ್ತಿರುವ ಪ್ರಯಾಣಿಕರಿಗೆ ಇದೀಗ ಹೊಸ ಆಯ್ಕೆಯೊಂದು ಸಿಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಕ್ಯಾಬ್ ಬುಕ್ ಮಾಡಿದರೆ ರೈಡ್ ಕ್ಯಾನ್ಸಲ್ ಆಗುತ್ತೆ, ಪೀಕ್ ಅವರ್‌ನಲ್ಲಿ ದರ ಗಗನಕ್ಕೇರುತ್ತೆ, ಕೆಲವೊಮ್ಮೆ ಎಸಿ ಕೂಡ ಸರಿಯಾಗಿ ಕೆಲಸ ಮಾಡಲ್ಲ... ಇಂತಹ ಸಮಸ್ಯೆಗಳಿಂದ ಬೇಸತ್ತಿರುವ ಪ್ರಯಾಣಿಕರಿಗೆ ಇದೀಗ ಹೊಸ ಆಯ್ಕೆಯೊಂದು ಸಿಗುವ ಸಾಧ್ಯತೆಯಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಓಲಾ (Ola), ಉಬರ್ (Uber) ಕಂಪನಿಗಳಿಗೆ ಪೈಪೋಟಿ ನೀಡಲು ವಿಯೆಟ್ನಾಂ ಮೂಲದ ಗ್ರೀನ್ ಎಸ್‌ಎಂ (Green SM) ಬೆಂಗಳೂರಿಗೆ ಎಂಟ್ರಿ ಕೊಡಲು ಸಜ್ಜಾಗಿದೆ.

ನಗರದ ಕೆಂಗೇರಿ ಮೆಟ್ರೋ ನಿಲ್ದಾಣದ ಸಮೀಪ 100ಕ್ಕೂ ಹೆಚ್ಚು ಎಲೆಕ್ಟ್ರಿಕ್ ಕ್ಯಾಬ್‌ಗಳು ಕಾಣಿಸಿಕೊಂಡಿರುವುದು ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ವಿಶೇಷವೆಂದರೆ, ಈ ಕಂಪನಿಯ ಹಿಂದೆ ಇರುವುದು ಬರೋಬ್ಬರಿ ₹3.4 ಲಕ್ಷ ಕೋಟಿ ಆಸ್ತಿಯ ಒಡೆಯನಾಗಿರುವ ಬಿಲಿಯನೇರ್ ಉದ್ಯಮಿ! ಹಾಗಾದರೆ ಯಾರು ಈ ಉದ್ಯಮಿ? ಓಲಾ, ಉಬರ್‌ಗಿಂತ ಗ್ರೀನ್ ಎಸ್‌ಎಂ ಹೇಗೆ ಭಿನ್ನ?

ಗ್ರೀನ್ ಎಸ್‌ಎಂ ಮಾಲೀಕ ಯಾರು?

ಗ್ರೀನ್ ಎಸ್‌ಎಂ ಕಂಪನಿಯ ಹಿಂದಿರುವ ಪ್ರಮುಖ ಉದ್ಯಮಿ ವಿಯೆಟ್ನಾಂನ ಫಾಮ್ ನಾತ್ ವುಯಾಂಗ್ (Pham Nhat Vuong). ಇವರು ವಿಯೆಟ್ನಾಂನ ಪ್ರಮುಖ ಉದ್ಯಮ ಸಮೂಹವಾದ ವಿನ್‌ಗ್ರೂಪ್‌ನ ಅಧ್ಯಕ್ಷರು. ವಿನ್‌ಫಾಸ್ಟ್ (VinFast) ಎಲೆಕ್ಟ್ರಿಕ್ ಕಾರು ಕಂಪನಿಯ ಬೆಳವಣಿಗೆಯಲ್ಲೂ ಇವರ ಪಾತ್ರ ಮಹತ್ವದ್ದಾಗಿದೆ. 2023ರ ಮಾರ್ಚ್ 6ರಂದು ಫಾಮ್ ನಾತ್ ವುಯಾಂಗ್ ಅವರು ಗ್ರೀನ್ ಆ್ಯಂಡ್ ಸ್ಮಾರ್ಟ್ ಮೊಬಿಲಿಟಿ (GSM) ಕಂಪನಿ ಸ್ಥಾಪನೆಯನ್ನು ಘೋಷಿಸಿದರು. ಇದರ ಅಧ್ಯಕ್ಷೆಯಾಗಿ ಅವರ ಪತ್ನಿ ಫಾಮ್ ಥು ಹುವಾಂಗ್ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರೀನ್ ಎಸ್‌ಎಂ ಎಂಬುದು ಈ ಕಂಪನಿಯ ಕ್ಯಾಬ್ ಸೇವೆಯ ಬ್ರ್ಯಾಂಡ್ ಹೆಸರು.

₹3.4 ಲಕ್ಷ ಕೋಟಿ ಆಸ್ತಿಯ ಒಡೆಯ!

ಫೋರ್ಬ್ಸ್ ರಿಯಲ್‌ಟೈಮ್ ಬಿಲಿಯನೇರ್ ಪಟ್ಟಿಯ 2026ರ ನವೆಂಬರ್ 10ರ ಮಾಹಿತಿಯ ಪ್ರಕಾರ, ಫಾಮ್ ನಾತ್ ವುಯಾಂಗ್ ಅವರ ನಿವ್ವಳ ಆಸ್ತಿ ಬರೋಬ್ಬರಿ 38.3 ಬಿಲಿಯನ್ ಅಮೆರಿಕನ್ ಡಾಲರ್. ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು ₹3.4 ಲಕ್ಷ ಕೋಟಿ! ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 57ನೇ ಸ್ಥಾನದಲ್ಲಿರುವ ಇವರು ವಿಯೆಟ್ನಾಂನ ಅತ್ಯಂತ ಶ್ರೀಮಂತ ಉದ್ಯಮಿ. ರಿಯಲ್ ಎಸ್ಟೇಟ್, ಆಟೋಮೊಬೈಲ್, ಹೋಟೆಲ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇವರ ಉದ್ಯಮ ಸಾಮ್ರಾಜ್ಯ ವಿಸ್ತರಿಸಿದೆ.

ಓಲಾ, ಉಬರ್‌ಗಿಂತ ಗ್ರೀನ್ ಎಸ್‌ಎಂ ಹೇಗೆ ಭಿನ್ನ?

ಸಾಮಾನ್ಯವಾಗಿ ಓಲಾ ಮತ್ತು ಉಬರ್ ಚಾಲಕರು ಹಾಗೂ ಪ್ರಯಾಣಿಕರನ್ನು ಸಂಪರ್ಕಿಸುವ ಆ್ಯಪ್ ಆಧಾರಿತ ವೇದಿಕೆಗಳಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಗ್ರೀನ್ ಎಸ್‌ಎಂ ವಿಭಿನ್ನ ಮಾದರಿಯನ್ನು ಅನುಸರಿಸುತ್ತದೆ. ಈ ಕಂಪನಿಯೇ ತನ್ನ ಕ್ಯಾಬ್‌ಗಳ ನಿರ್ವಹಣೆ, ಚಾಲಕರ ತರಬೇತಿ ಮತ್ತು ಸೇವೆಯ ಗುಣಮಟ್ಟದ ಮೇಲೆ ನೇರ ನಿಯಂತ್ರಣ ಹೊಂದುವ ಉದ್ದೇಶ ಹೊಂದಿದೆ. ಅಲ್ಲದೆ, ವಿನ್‌ಫಾಸ್ಟ್ ತಯಾರಿಸುವ ಎಲೆಕ್ಟ್ರಿಕ್ ಕಾರುಗಳನ್ನೇ ಕ್ಯಾಬ್ ಸೇವೆಗೆ ಬಳಸುತ್ತದೆ. ಇದರಿಂದ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವುದರ ಜೊತೆಗೆ ತನ್ನದೇ ಕಾರುಗಳಿಗೆ ಮಾರುಕಟ್ಟೆ ಒದಗಿಸುವ ಅವಕಾಶವೂ ಕಂಪನಿಗೆ ಸಿಗುತ್ತದೆ.

ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ಎಲೆಕ್ಟ್ರಿಕ್ ಕ್ಯಾಬ್‌ಗಳು!

ನವೆಂಬರ್ 5ರಂದು ಪ್ರಕಟವಾದ ವರದಿಯ ಪ್ರಕಾರ, ಬೆಂಗಳೂರಿನ ಕೆಂಗೇರಿ ಮೆಟ್ರೋ ನಿಲ್ದಾಣದ ಸಮೀಪ 100ಕ್ಕೂ ಹೆಚ್ಚು ಗ್ರೀನ್ ಎಸ್‌ಎಂನ ಲಿಮೋ ಗ್ರೀನ್ ಎಲೆಕ್ಟ್ರಿಕ್ ಕಾರುಗಳು ನಿಂತಿರುವ ದೃಶ್ಯ ವೈರಲ್ ಆಗಿದೆ. ಇದರಿಂದ ಕಂಪನಿಯು ಬೆಂಗಳೂರಿನಲ್ಲಿ ಸೇವೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಚರ್ಚೆ ಶುರುವಾಗಿದೆ. ಹೈದರಾಬಾದ್‌ನಲ್ಲೂ ಇಂತಹ ಕಾರುಗಳು ಕಾಣಿಸಿಕೊಂಡಿರುವ ವರದಿಗಳಿವೆ. ಆದರೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಯಾವಾಗ ಸೇವೆ ಆರಂಭವಾಗಲಿದೆ ಎಂಬುದನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ.

ಭಾರತದಲ್ಲಿ ಈಗಾಗಲೇ ₹238 ಕೋಟಿ ಹೂಡಿಕೆ!

ಭಾರತೀಯ ಮಾರುಕಟ್ಟೆಯನ್ನು ಗಂಭೀರವಾಗಿ ಪರಿಗಣಿಸಿರುವ ಗ್ರೀನ್ ಎಸ್‌ಎಂ, ತನ್ನ ಕಾರ್ಯಾಚರಣೆ ವಿಸ್ತರಣೆಗೆ ದೊಡ್ಡ ಮೊತ್ತದ ಹೂಡಿಕೆ ಮಾಡುತ್ತಿದೆ. 2026ರ ನವೆಂಬರ್ 10ರಂದು ಪ್ರಕಟವಾದ ವರದಿಯ ಪ್ರಕಾರ, ಕಂಪನಿಯು ತನ್ನ ಭಾರತೀಯ ಅಂಗಸಂಸ್ಥೆಯಲ್ಲಿ ಹೊಸದಾಗಿ ₹152.65 ಕೋಟಿ ಹೂಡಿಕೆ ಮಾಡಿದೆ. ಇದಕ್ಕೂ ಮೊದಲು ಜೂನ್‌ನಲ್ಲಿ ₹85 ಕೋಟಿ ಹೂಡಿಕೆ ಮಾಡಿತ್ತು. ಈ ಮೂಲಕ ಭಾರತದಲ್ಲಿನ ಒಟ್ಟು ಹೂಡಿಕೆ ಸುಮಾರು ₹238 ಕೋಟಿಗೆ ತಲುಪಿದೆ.

ಪ್ರತಿ ಕಿಲೋಮೀಟರ್‌ಗೆ ₹8ಕ್ಕೆ ಕ್ಯಾಬ್ ಸೇವೆ?

ಗ್ರೀನ್ ಎಸ್‌ಎಂನ ಕಡಿಮೆ ದರದ ಸೇವೆಯೂ ಈಗ ಕುತೂಹಲಕ್ಕೆ ಕಾರಣವಾಗಿದೆ. ಆರಂಭಿಕ ಹಂತದಲ್ಲಿ ಪ್ರತಿ ಕಿಲೋಮೀಟರ್‌ಗೆ ಸುಮಾರು ₹8 ದರದಲ್ಲಿ ಕ್ಯಾಬ್ ಸೇವೆ ನೀಡುವ ಹಾಗೂ ಕೆಲವು ರೈಡ್‌ಗಳಿಗೆ ಶೇ.50ರಷ್ಟು ರಿಯಾಯಿತಿ ನೀಡುವ ಬಗ್ಗೆ ವಿಡಿಯೋದಲ್ಲಿ ವಿವರಿಸಲಾಗಿದೆ. ಇಷ್ಟು ಕಡಿಮೆ ದರದಲ್ಲಿ ಸೇವೆ ನೀಡಲು ಪ್ರಮುಖ ಕಾರಣ ಎಲೆಕ್ಟ್ರಿಕ್ ವಾಹನಗಳು. ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಕಾರುಗಳ ಇಂಧನ ವೆಚ್ಚ ಕಡಿಮೆ. ಜೊತೆಗೆ ಎಂಜಿನ್ ಆಯಿಲ್, ಫಿಲ್ಟರ್, ಕ್ಲಚ್ ಪ್ಲೇಟ್‌ನಂತಹ ಬಿಡಿಭಾಗಗಳ ನಿರ್ವಹಣೆಯ ಅಗತ್ಯವೂ ಇರುವುದಿಲ್ಲ.

PREV
Read more Articles on
click me!

Recommended Stories

ಬಾಬ್ರಿ ಮಸೀದಿ ಉರುಳಿದಾಗ ಅಲ್ಲ; ಅಬ್ದುಲ್ ಕಲಾಂರ ಆ ಮಾತಿನಿಂದ ಸೋನಿಯಾ ಗಾಂಧಿಗೆ ನಿಜವಾಗಿಯೂ ಕಣ್ಣೀರು ಬಂದಿತ್ತು; ಛಲವಾದಿ ಹೇಳಿಕೆ ಸಂಚಲನ
ಬೆಂಗಳೂರಿನ ಫ್ಲ್ಯಾಟ್ ಮೇಲೆ ಹೂಡಿಕೆ ಮಾಡಿ 6 ವರ್ಷ ಕಾದ್ರು, ಲಾಭ ಮಾತ್ರ ಸಿಗಲೇ ಇಲ್ಲ! ಆಮೇಲೆ ನಡೆದಿದ್ದೇ ರೋಚಕ!