ಬೈರಮಂಗಲದ ವೃಷಾಭವತಿ ಸೇತುವೆಯ ಕೆಳಗೆ ಕಂತೆ ಕಂತೆ 500, 100ರ ನೋಟು ಪತ್ತೆ, ವೈರಲ್‌ ವಿಡಿಯೋದ ಅಸಲಿ ಸತ್ಯವೇನು?

Published : Aug 19, 2026, 08:00 PM IST
Fake Money

ಸಾರಾಂಶ

ಬೈರಮಂಗಲದ ವೃಷಭಾವತಿ ನದಿ ಸೇತುವೆ ಕೆಳಗೆ ಕಂತೆ ಕಂತೆ ನೋಟುಗಳು ಪತ್ತೆಯಾಗಿ ಜನರಲ್ಲಿ ಕುತೂಹಲ ಮೂಡಿಸಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಅವು 'ಶಾಲಾ ಪ್ರಾಜೆಕ್ಟ್' ಉದ್ದೇಶಕ್ಕಾಗಿ ಬಳಸುವ ನಕಲಿ ನೋಟುಗಳೆಂದು ತಿಳಿದುಬಂದಿದೆ. ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಬೆಂಗಳೂರು (ಆ.19): ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಬೈರಮಂಗಲ ಬಳಿ ಇರುವ ವೃಷಭಾವತಿ ನದಿಯ ಸೇತುವೆ ಕೆಳಗೆ ಬುಧವಾರ ಮಧ್ಯಾಹ್ನ ಕೋಲಾಹಲವೊಂದೇ ಸೃಷ್ಟಿಯಾಗಿತ್ತು. ನೀರು ಹರಿಯುವ ಹಾದಿಯಲ್ಲಿದ್ದ ಕಲ್ಲುಗಳ ಮೇಲೆ 100 ಮತ್ತು 500 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡ ಸಾರ್ವಜನಿಕರು ಹಾಗೂ ವಾಹನ ಸವಾರರು ಅಚ್ಚರಿಯಿಂದ ಕಂಗಾಲಾಗಿದ್ದರು.

ನದಿಯ ನೀರಿನ ಬಳಿ ಚೀಲಗಳಲ್ಲಿ ಹಾಗೂ ಕಲ್ಲುಗಳ ಮೇಲೆ ಬಿಡಿಬಿಡಿಯಾಗಿ ಬಿದ್ದಿದ್ದ ಈ ನೋಟುಗಳನ್ನು ದೂರದಿಂದ ನೋಡಿದಾಗ ಅಸಲಿ ನೋಟುಗಳಂತೆಯೇ ಕಾಣುತ್ತಿದ್ದವು. ಇದನ್ನು ಗಮನಿಸಿದ ಸವಾರರೊಬ್ಬರು ತಕ್ಷಣವೇ ತಮ್ಮ ಮೊಬೈಲ್‌ನಲ್ಲಿ ಫೋಟೊ ಹಾಗೂ ವಿಡಿಯೊ ಸೆರೆಹಿಡಿದು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ವಿಡಿಯೋ ವೈರಲ್ ಆಗುತ್ತಿದ್ದಂತೆ, ಅಕ್ಕಪಕ್ಕದ ಗ್ರಾಮಸ್ಥರು ಕುತೂಹಲದಿಂದ ಸೇತುವೆಯತ್ತ ದೌಡಾಯಿಸಿದರು. ಸೇತುವೆಯ ಮೇಲೆಯೇ ಸಾಲಾಗಿ ನಿಂತ ಜನರು ಕೆಳಗೆ ಬಿದ್ದಿದ್ದ ನೋಟಿನ ಕಂತೆಗಳನ್ನು ನೋಡಿ, 'ಇವು ಖಂಡಿತ ಅಸಲಿ ನೋಟುಗಳೇ ಇರಬೇಕು, ಯಾರೋ ಕಳ್ಳರು ಅಥವಾ ಬಿಸಿನೆಸ್‌ಮೆನ್‌ ತಂದು ಎಸೆದಿರಬೇಕು' ಎಂದು ಚರ್ಚಿಸಲು ಶುರು ಮಾಡಿದರು. ಅಲ್ಲದೆ, ಫೇಸ್‌ಬುಕ್, ವಾಟ್ಸ್‌ಆ್ಯಪ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಈ ದೃಶ್ಯಗಳ ಪ್ರಸಾರ ಭರದಿಂದ ನಡೆಯಿತು.

ಪೊಲೀಸರ ಎಂಟ್ರಿ, ಬಯಲಾಯ್ತು ಸತ್ಯ!:

ಘಟನೆಯ ಕುರಿತು ಸಾರ್ವಜನಿಕರಿಂದ ಮಾಹಿತಿ ತಿಳಿಯುತ್ತಿದ್ದಂತೆಯೇ ಬಿಡದಿ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ನದಿಯ ದಂಡೆಗೆ ಇಳಿದು, ಕಲ್ಲುಗಳ ಮೇಲೆ ಬಿದ್ದಿದ್ದ ನೋಟುಗಳ ಬಳಿ ತೆರಳಿ ಪರಿಶೀಲನೆ ನಡೆಸಿದಾಗ ಅಸಲಿ ಕಥೆ ಬಯಲಾಯಿತು.

ಸ್ಥಳದಲ್ಲಿ ಪತ್ತೆಯಾಗಿದ್ದ 100 ಮತ್ತು 500 ರೂಪಾಯಿ ನೋಟುಗಳು ಅಸಲಿಯಲ್ಲ, ಬದಲಾಗಿ ಬಣ್ಣದ ಜೆರಾಕ್ಸ್ (Color Xerox) ಪ್ರತಿಗಳು ಎಂಬುದು ಸ್ಪಷ್ಟವಾಯಿತು. ವಿಶೇಷವೆಂದರೆ, ಈ ಎಲ್ಲಾ ನೋಟುಗಳ ಮೇಲೆ 'ಶಾಲಾ ಪ್ರಾಜೆಕ್ಟ್ ಬಳಕೆ ಉದ್ದೇಶಕ್ಕಾಗಿ' (For School Project Purpose Only) ಎಂದು ಮುದ್ರಿಸಲಾಗಿತ್ತು.

ಇಷ್ಟೊಂದು ಬೃಹತ್ ಪ್ರಮಾಣದ ನಕಲಿ/ಜೆರಾಕ್ಸ್ ನೋಟುಗಳನ್ನು ನದಿಯ ಬಳಿ ತಂದು ಎಸೆದವರು ಯಾರು? ಮತ್ತು ಯಾವ ಉದ್ದೇಶಕ್ಕಾಗಿ ಇದನ್ನು ಮಾಡಲಾಗಿದೆ ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಬಿಡದಿ ಪೊಲೀಸರು ಸ್ಥಳದಲ್ಲಿದ್ದ ಎಲ್ಲಾ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.

PREV
Read more Articles on
click me!

Recommended Stories

'17 ಕಿ.ಮೀ ಪ್ರಯಾಣಕ್ಕೆ 2 ಗಂಟೆ..' ಬೆಂಗಳೂರು ಟ್ರಾಫಿಕ್‌ಗೆ ಕಂಗಾಲಾದ ಎಐ ಸ್ಟಾರ್ಟ್‌ಅಪ್‌ ಸಂಸ್ಥಾಪಕ!
ಕಾಲೇಜು ಜೊತೆ ರ‍್ಯಾಪಿಡೋ ಕೆಲಸ, 3 ತಿಂಗಳ ಆದಾಯ, ಕಲಿತ ಪಾಠ ಹಂಚಿಕೊಂಡ ಬೆಂಗಳೂರು ವಿದ್ಯಾರ್ಥಿ