
ಬೆಂಗಳೂರು (ಆ.19) ಕಾಲೇಜು ದಿನಗಳಲ್ಲಿ ಹಲವರು ಪಾರ್ಟ್ ಟೈಮ್ ಜಾಬ್ ಮಾಡಿ ವಿದ್ಯಾಬ್ಯಾಸದ ಖರ್ಚು ವೆಚ್ಚ ನೋಡಿಕೊಳ್ಳುತ್ತಾರೆ. ಇದೀ ರೀತಿ ಬೆಂಗಳೂರಿನ ಬಿಬಿಎ ವಿದ್ಯಾರ್ಥಿ ತನ್ನ ವಿದ್ಯಾಬ್ಯಾಸ ಜೊತೆ ರ‍್ಯಾಪಿಡೋ ರೈಡರ್ ಆಗಿ ಕೆಲಸ ಮಾಡುತ್ತಿದ್ದಾನೆ. ಕಳೆದ ಮೂರು ತಿಂಗಳಿನಿಂದ ಪಾರ್ಟ್ ಟೈಮ್ ಜಾಬ್ ಮಾಡುತ್ತಿರುವ ವಿದ್ಯಾರ್ಥಿ ಅನುಭವ, ಪಾಠ ಹಂಚಿಕೊಂಡಿದ್ದಾರೆ. ಇದೇ ವೇಳೆ ಪ್ರತಿ ತಿಂಗಳ ಗಳಿಕೆಯನ್ನು ಹೇಳಿದ್ದಾರೆ.
ಮೊದಲ ವರ್ಷ ಬಿಬಿಎ ಪೂರೈಸಿದ ವಿದ್ಯಾರ್ಥಿ ಪಾರ್ಟ್ ಟೈಮ್ ಆಗಿ ರ‍್ಯಾಪಿಡೋ ಚಾಲಕನಾಗಿ ಕೆಲಸ ಮಾಡಲು ಆರಂಭಿಸಿದ್ದಾನೆ. ಈ ಕುರಿತು ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾನೆ. ತನ್ನ ಖರ್ಚು ವೆಚ್ಚಕ್ಕೆ ಪೋಷಕರ ಅವಲಂಬನೆಯಾಗುವುದಕ್ಕಿಂತ ಸ್ವತಂತ್ರವಾಗಿ ಉದ್ಯೋಗ ಮಾಡುತ್ತಾ ಶಿಕ್ಷಣ ಪೂರೈಸಲು ನಿರ್ಧರಿಸಿದ್ದಾನೆ. ಮೊದಲ ವರ್ಷದ ಬಿಬಿಐ ಮುಗಿಯುತ್ತಿದ್ದಂತೆ ಸಿಕ್ಕ ರಜಾ ದಿನದಲ್ಲಿ ರ‍್ಯಾಪಿಡೋ ರೈಡ್ ಆರಂಭಗೊಂಡಿತ್ತು. ಬೆಳಗ್ಗೆ 8 ಗಂಟೆಯಿಂದ ಸಂಜೆ 4.30ರ ವರೆಗೆ ಆನ್‌ಲೈನ್ ಮೂಲಕ ಸಕ್ರಿಯವಾಗಿದ್ದು, ರ‍್ಯಾಪಿಡೋ ಓಡಿಸುತ್ತಿದ್ದ. ಪ್ರತಿ ದಿನ ಸರಿಸುಮಾರು 8.5 ಗಂಟೆಗಳ ಕಾಲ ದುಡಿಯುತ್ತಿದ್ದ. ಇದರಿಂದ ದಿನಕ್ಕೆ ಸರಾಸರಿ 1,200 ರೂಪಾಯಿ ವರೆಗೆ ಸಂಪಾದಿಸಲು ಆರಂಭಿಸಿದ್ದ. ಆರಂಭಿಕ ದಿನದಲ್ಲಿ ತಾಂತ್ರಿಕ ಅಡಚಣೆ ಅರ್ಥಮಾಡಿಕೊಂಡು ರೈಡಿಂಗ್ ಮಾಡುವುದು ಸವಾಲಾಗಿತ್ತು. ಬಳಿಕ ಬೇಡಿಕೆ ಹೆಚ್ಚಿರುವ ಪ್ರದೇಶಗಳು ಸೂಕ್ತ ಸಮಯ ಅರ್ಥಮಾಡಿಕೊಂಡು ಉತ್ತಮ ಆದಾಯಗಳಿಸಲು ಆರಂಭಿಸಿದ್ದ.
ಮಧ್ಯಾಹ್ನದ ವೇಳೆ ರ‍್ಯಾಪಿಡೋ ರೈಡ್ ಬೇಡಿಕೆ ಕಡಿಮೆ. ಈ ಸಮಯದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಸೇರಿದಂತೆ ಫುಡ್ ಡೆಲಿವರಿ ಆ್ಯಪ್ ಮೂಲಕ ಫುಡ್ ಡೆಲಿವರಿ ನಡೆಸುತ್ತಿದ್ದ. ಹಲವು ಬಾರಿ ರೆಸ್ಟೋರೆಂಟ್‌ನಲ್ಲಿ ಆರ್ಡರ್‌ಗಾಗಿ ಕಾದು ಗ್ರಾಹಕರಿಂದ ಉಗಿಸಿಕೊಂಡ ಘಟನೆಗಳು ಇವೆ. ಕೆಲವು ಬಾರಿ ಒಟಿಪಿ ಸಿಗದೆ, ತಾಂತ್ರಿಕ ಸಮಸ್ಯೆಗಳ ಕಾರಣ ಎಡವಟ್ಟುಗಳಾದ ಪ್ರಸಂಗಗಳು ನಡೆದಿದೆ ಎಂದು ವಿದ್ಯಾರ್ಥಿ ಹೇಳಿಕೊಂಡಿದ್ದಾರೆ.
ಮೆಜೆಸ್ಟಿಕ್, ರೈಲು ನಿಲ್ದಾಣ ಸೇರಿದಂಕೆ ಪ್ರಮುಖ ಆಟೋ ನಿಲ್ದಾಣಗಳಲ್ಲಿ ರ‍್ಯಾಪಿಡೋ ಬುಕಿಂಗ್‌ಗೆ ಹೋದಾಗ, ಪಿಕ್ ಮಾಡಲು, ಡ್ರಾಪ್ ಮಾಡಲು ಹೋದಾಗ ಆಟೋ ಚಾಲಕರು ದುರುಗುಟ್ಟಿ ನೋಡುತ್ತಿದ್ದರು. ಆದರೆ ಯಾವ ಆಟೋ ಚಾಲಕನೂ ತಮಗೆ ಬೆದರಿಕೆ ಹಾಕಿಲ್ಲ. ಪ್ರಶ್ನಿಸಿಲ್ಲ ಎಂದು ವಿದ್ಯಾರ್ಥಿ ಹೇಳಿಕೊಂಡಿದ್ದಾನೆ. ಪ್ರಯಾಣಿಕರ ಜೊತೆ ಮಾತನಾಡುವ ಅವಕಾಶ ಸಿಕ್ಕಿತ್ತು. ಪ್ರಯಾಣಿಕರಿಂದ ಯಾವುದೇ ಕೆಟ್ಟ ಅನುಭವ ಆಗಲಿಲ್ಲ ಎಂದಿದ್ದಾನೆ.
ರ‍್ಯಾಪಿಡೋ ಆರಂಭಿಸಿದ ಮೇ ತಿಂಗಳಲ್ಲಿ 96 ರೈಡ್‌ಗಳಿಂಗ 5650 ರೂಪಾಯಿ ಗಳಿಕೆ ಮಾಡಿದ್ದ. ಜೂನ್ ತಿಂಗಳಲ್ಲಿ ಪೀಕ್ ಹವರ್ ಆಲ್ಗರಿದಂ ಅರಿತುಕೊಂಡಿದ್ದ. ಹೀಗಾಗಿ ಜೂನ್ ತಿಂಗಳ ಆದಾಯ 16,660 ರೂಪಾಯಿಗೆ ಏರಿಕೆಯಾಗಿತ್ತು. ಇನ್ನು ಜುಲೈ ತಿಂಗಳಲ್ಲಿ 14,222 ರೂಪಾಯಿ ಆಧಾಯಗಳಿಸಿದ್ದ.
ಇದು ನನ್ನ ಪಾರ್ಟ್ ಟೈಮ್ ಕೆಲಸವಾಗಿತ್ತು. ಆದರೆ ಇದನ್ನೇ ಫುಲ್ ಟೈಮ್ ಮಾಡುವವರ ಪಾಡು ತೀರಾ ಭಿನ್ನ. ಇದನ್ನೇ ನೆಚ್ಚಿಕೊಂಡು ಜೀವನ ನಡೆಸುವ ಹಲವರಿದ್ದಾರೆ. ಗ್ರಾಹಕರು ರೈಡ್ ಕ್ಯಾನ್ಸಲ್ ಮಾಡಿದಾಗ ಚಾಲಕ ರೇಟಿಂಗ್ ಕಡಿಮೆಯಾಗುತ್ತದೆ. ಇದರಿಂದ ಹೆಚ್ಚು ರೈಡ್ ಸಿಗುವುದಿಲ್ಲ, ಉತ್ತಮ ಗಳಿಕೆ ಸಾಧ್ಯವಾಗುದಿಲ್ಲ. ಪ್ರತಿ ದಿನ ಗಿಗ್ ವರ್ಕ್ ಮಾಡುವ ಪ್ರತಿಯೊಬ್ಬರು ಶ್ರಮವಹಿಸುತ್ತಾರೆ, ಕಷ್ಟಗಳ ನಡುವೆ ಜೀವನ ಮಾಡುತ್ತಾರೆ. ಮೂರು ತಿಂಗಳದಲ್ಲಿ ಜೀವನದ ಒಂದಷ್ಟು ಪಾಠ ಕಲಿತುಕೊಂಡಿದ್ದೇನೆ ಎಂದು ವಿದ್ಯಾರ್ಥಿ ಹೇಳಿದ್ದಾನೆ.